ಅಂಚೆ ಮೂಲಕ ಮತದಾನಕ್ಕೆ ಅವಕಾಶ

By Kannadaprabha News  |  First Published Apr 8, 2023, 5:53 AM IST

ಎಲ್ಲರಿಗೂ ಮತದಾನಕ್ಕೆ ಅವಕಾಶವಿದ್ದು, ಅಗತ್ಯ ಸೇವೆಯಲ್ಲಿರುವವರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶ ನೀಡಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಹೋಟೆಲ್‌ ಶಿವಪ್ಪ ತಿಳಿಸಿದರು.


  ತುಮಕೂರು :  ಎಲ್ಲರಿಗೂ ಮತದಾನಕ್ಕೆ ಅವಕಾಶವಿದ್ದು, ಅಗತ್ಯ ಸೇವೆಯಲ್ಲಿರುವವರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಅವಕಾಶ ನೀಡಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಹೋಟೆಲ್‌ ಶಿವಪ್ಪ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆಯೋಗವು ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ವಾರ್ತಾ ಇಲಾಖೆ, ಕೆ.ಎಸ್‌.ಆರ್‌.ಟಿ.ಸಿ., ಬಿಎಸ್‌ಎನ್‌ಎಲ್‌, ಅಗ್ನಿಶಾಮಕ ಕಚೇರಿ, ಸಂಚಾರಿ ಪೊಲೀಸ್‌, ಭಾರತೀಯ ರೈಲ್ವೆ ಇಲಾಖೆ, ಬೆಸ್ಕಾಂ, ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ಸಿಬ್ಬಂದಿ ಅಗತ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೈರು ಹಾಜರಿ ಮತದಾರರೆಂದು ಪರಿಗಣಿಸಿ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.

Tap to resize

Latest Videos

ಅಗತ್ಯ ಸೇವೆ ಒದಗಿಸುವ ಇಲಾಖೆಗಳ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿಚ್ಛಿಸುವವರ ಪಟ್ಟಿಯನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಪಾಳಿ ಆಧಾರದ ಮೇಲೆ ಕೆಲಸ ಮಾಡುವವರು ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡುವುದು ಸೂಕ್ತವೆಂದು ಸಲಹೆ ನೀಡಿದರಲ್ಲದೆ, ಮತದಾನ ದಿನದಂದು ಪೂರ್ಣ ಪ್ರಮಾಣದ ಸೇವೆಯಲ್ಲಿ ತೊಡಗಿಸಿಕೊಂಡವರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದರು.

ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಯಲ್ಲಿ ಅಂಚೆ ಮೂಲಕ ಮತದಾನ ಮಾಡಲಿಚ್ಛಿಸುವವರ ಪಟ್ಟಿನೀಡಿದಲ್ಲಿ ಪಟ್ಟಿಗನುಗುಣವಾಗಿ ಅಂಚೆ ಮೂಲಕ ಮತದಾನ ಮಾಡಲು ಅನುವಾಗುವಂತೆ ನಮೂನೆ 12ಡಿಯನ್ನು ವಿತರಿಸಲಾಗುವುದು. ಅಗತ್ಯ ಸೇವೆಯಲ್ಲಿರುವವರು ತಮಗೆ ವಿತರಿಸಿದ ನಮೂನೆ 12ಡಿಯನ್ನು ಭರ್ತಿ ಮಾಡಿ ತುಮಕೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗೆ ತಲುಪಿಸಿದಲ್ಲಿ ಚುನಾವಣಾ ಅಭ್ಯರ್ಥಿಗಳ ಪಟ್ಟಿಅಂತಿಮಗೊಂಡ ನಂತರ ನಮೂನೆಯಲ್ಲಿ ಒದಗಿಸಿರುವ ವಿಳಾಸಕ್ಕೆ ಅಂಚೆ ಮತಪತ್ರವನ್ನು ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಪಿ.ಓಂಕಾರಪ್ಪ, ವಾರ್ತಾ ಇಲಾಖೆಯ ಆರ್‌. ರೂಪಕಲಾ ಸೇರಿದಂತೆ ಅಗತ್ಯ ಸೇವೆ ಒದಗಿಸುವ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 ಅಕ್ರಮ ನಗದು ವಶ

ತುಮಕೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕೊರಟಗೆರೆ ಹಾಗೂ ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ ಏ.5ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 20.50ಲಕ್ಷ ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟೇನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಏ. 5ರಂದು ಕೆಎ-06-ಎ-4597 ಸ್ವಿಫ್‌್ಟವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ 1.50ಲಕ್ಷ ರು. ನಗದು ದೊರೆತಿದ್ದು, ವಾಹನದಲ್ಲಿದ್ದ ರುದ್ರೇಶ್‌ ಬಿನ್‌ ಶಿವಣ್ಣ ಅವರನ್ನು ವಿಚಾರಿಸಿದಾಗ ಸಮಂಜಸವಾದ ಉತ್ತರವನ್ನು ನೀಡದೇ ಇರುವುದರಿಂದ ನಿಯೋಜಿತ ಸ್ಥಿರ ಕಣ್ಗಾವಲು ತಂಡದ ಸದಸ್ಯರು ಹಣವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅದೇ ರೀತಿ ತಿಪಟೂರು ನಗರ ಮಾಲ್‌ ಒಂದರ ಮುಂಭಾಗ ಏ.5ರ ಬೆಳಿಗ್ಗೆ 11ಕ್ಕೆ ಒಂದು ಎಟಿಎಂ ವಾಹನವನ್ನು ತಪಾಸಣೆ ನಡೆಸಿದಾಗ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ 19ಲಕ್ಷ ರು.ಗಳನ್ನು ಸಾಗಿಸುತ್ತಿದ್ದುದು ಕಂಡು ಬಂದಿದ್ದು, ಸರಿಯಾದ ದಾಖಲೆಗಳನ್ನು ಒದಗಿಸದೇ ಇದ್ದುದರಿಂದ ಅನುಮಾನದ ಮೇರೆಗೆ ಸದರಿ ವಾಹನ ಮತ್ತು ಹಣವನ್ನು ಪೊಲೀಸ್‌ ಠಾಣೆ ವಶಕ್ಕೆ ಪಡೆಯಲಾಗಿದೆ ಎಂದು ಜಿ.ಪಂ ಸಿಇಒ ತಿಳಿಸಿದ್ದಾರೆ.

click me!