ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಪ್ರಕರಣ ಪತ್ತೆ ಇಲ್ಲ| ಮಹಾರಾಷ್ಟ್ರ, ಗೋವಾದಿಂದ ಬರುವ ವಿದೇಶಿಗರಿಂದ ಹರಡುವ ಸಾಧ್ಯತೆ| ವಿಮಾನ ನಿಲ್ದಾಣ ಬರುವ ಪ್ರಯಾಣಿಕರಿಂದ ಸೋಂಕು ಸಂಭವ|
ಜಗದೀಶ ವಿರಕ್ತಮಠ
ಬೆಳಗಾವಿ(ಮಾ.05): ದೇಶ, ವಿದೇಶ ಸೇರಿದಂತೆ ರಾಜ್ಯದಲ್ಲಿ ಕೊರೋನಾ ವೈರಸ್ ಭಯ ಕ್ಷಣ ಕ್ಷಣಕ್ಕೂ ಹೆಚ್ಚುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದ್ದು, ಜಿಲ್ಲೆಯ ಜನರಲ್ಲಿ ಭಾರೀ ಭಯಭೀತಿ ಮೂಡಿಸಿರುವುದು ಆತಂಕದಲ್ಲಿಯೇ ದಿನ ದೂಡುವಂತಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯ ಸರ್ಕಾರವು ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯ ಸಭೆ ನಡೆಸಿ ರಾಜ್ಯಕ್ಕೆ ಬಂದು ಹೋಗುವ ವಿದೇಶಿ ಪ್ರಯಾಣಿಕರ ತಪಾಸಣೆ ಮಾಡುವುದರೊಂದಿಗೆ ವೈರಸ್ ಹರಡುವುದನ್ನು ತಡೆಯುವಲ್ಲಿ ಸರ್ಕಾರ ಸೂಚನೆಗಳ ಪಾಲನೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುತ್ತಿದೆ. ಆದರೆ ಚೀನಾ, ಮಲೇಷ್ಯಾ ಸೇರಿದಂತೆ ಇತರಡೆಯಿಂದ ಬಂದಿದ್ದ ಜಿಲ್ಲೆಯ ಒಂಬತ್ತು ಜನರನ್ನು ಪರೀಕ್ಷೆಗೊಳಪಡಿಸಲಾಗಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಬಗ್ಗೆ ಭಯಬೀಳುವಂತೆ ಮಾಡಿದೆ. ಈಗಾಗಲೇ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಕೊರೋನಾ ಪತ್ತೆ ಇಲ್ಲ ಎಂದು ಸಾರ್ವಜನಿಕರ ಆತಂಕ ದೂರು ಮಾಡುವ ಮೂಲಕ ಅಗತ್ಯ ಮಾಹಿತಿಯೊಂದಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಬಂದು ಹೋಗುವ ವಿದೇಶಗರು ಹೆಚ್ಚು:
ಮಹಾರಾಷ್ಟ್ರ ಹಾಗೂ ಗೋವಾ ನಡುವಿನ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಗೆ ನಿತ್ಯವೂ ನೂರಾರು ವಿದೇಶಿಯರು ಬಂದು ಹೋಗುತ್ತಿದ್ದು, ಕೊರೋನಾ ವೈರಸ್ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಹೆಚ್ಚು ನಿಗಾ ಇಡಬೇಕಾದ ಅನಿವಾರ್ಯತೆ ಜಿಲ್ಲಾಡಳಿತಕ್ಕಿದೆ. ಗೋವಾ ಹಾಗೂ ಪುಣೆಯಿಂದಲೂ ಬೆಳಗಾವಿಯ ಗೋಕಾಕ, ಗೊಡಚಿನಮಲ್ಕಿ ಸೇರಿದಂತೆ ಕಣಕುಂಬಿ ಜಲಪಾತಗಳ ವೀಕ್ಷಣೆಗೆ ಬಂದು ಹೋಗುವುದು ಸಾಮಾನ್ಯ. ಅಲ್ಲದೇ ಜಿಲ್ಲೆಯಲ್ಲಿ ಸುಪ್ರಸಿದ್ದ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ, ಸುಳೆಭಾವಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಆಗಮಿಸುವ ಭಕ್ತರು ಸೇರಿದಂತೆ ಇನ್ನಿತರ ಐತಿಹಾಸಿಕ ಸ್ಥಳಗಳ ವಿಕ್ಷಣೆಗೆ ವಿದೇಶಗರ ಆಗಮನ ಸಂಖ್ಯೆ ಹೆಚ್ಚಾಗಿದ್ದು ಎಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಂಜಾಗ್ರತೆ ಕೈಗೊಳ್ಳದ ಸಾಂಬ್ರಾ ವಿಮಾನ ನಿಲ್ದಾಣ:
ಹೈದ್ರಾಬಾದ, ಚೆನ್ನೈ, ಮುಂಬೈ, ಇಂದೋರ್ ಸೇರಿದಂತೆ ಬೆಂಗಳೂರು ನಗರಗಳಿಗೆ ನಿತ್ಯ ಪ್ರಯಾಣ ಬೆಳೆಸುವವರ ಸಂಖ್ಯೆ ಅಧಿಕವಾಗಿದ್ದಾರೆ. ಆದರೆ ಇಲ್ಲಿನ ಸಿಬ್ಬಂದಿ ಯಾವುದೇ ಅಗತ್ಯ ಎಚ್ಚರಿಕೆಗಳನ್ನು ಕೈಗೊಳ್ಳದಿರುವುದು ಕೊರೋನಾ ವೈರಸ್ ಹರಡುವ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಆತಂಕ ಛಾಯೆ ಮುಂದುವರಿದಿದೆ. ಅಲ್ಲದೇ ರೈಲುಗಳು ದೇಶಾದ್ಯಂತ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಬೇಕಾದ ಅನಿವಾರ್ಯತೆ ಆರೋಗ್ಯ ಇಲಾಖೆ, ರೈಲ್ವೆ ಇಲಾಖೆ ಸೇರಿದಂತೆ ಜಿಲ್ಲಾಡಳಿತಕ್ಕೆ ಎದುರಾಗಿದೆ. ಮಹಾಮಾರಿ ಕೊರೋನಾ ವೈರಸ್ ಜಗತ್ತಿನಾದ್ಯಂತ ಹಂತಹಂತವಾಗಿ ಹರಡುತ್ತಿರುವುದರಿಂದ ಇಡೀ ಜಗತ್ತಿನ ನಿದ್ದೆಗೆಡಿಸಿದೆ. ಆದ್ದರಿಂದ ಜಿಲ್ಲೆಯ ಜನರನ್ನು ಕೊರೋನಾ ಸುಳಿಯಿಂದ ರಕ್ಷಣೆ ಮಾಡಲು ಅಗತ್ಯ ಮುಂಜಾಗ್ರತಾ ಕ್ರಮದ ಜತೆಗೆ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.
ಮನೆಗೆ ಮರಳಿ ಬರುತ್ತಿರುವ ಎಂಜಿನಿಯರ್‌ಗಳು:
ರಾಜ್ಯದಲ್ಲಿಯೇ ದೊಡ್ಡದಾದ ಜಿಲ್ಲೆ ಎಂಬ ಹೆಗ್ಗಳಿಕೆಯ ಬೆಳಗಾವಿ ಜಿಲ್ಲೆಯಲ್ಲಿ 14 ತಾಲೂಕು ಒಳಗೊಂಡಿದೆ. ಬೆಳಗಾವಿಯಲ್ಲಿ ಸುಮಾರು ಆರೇಳು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪುಣೆ, ಬೆಂಗಳೂರು, ಹೈದ್ರಾಬಾದ್, ಚೆನ್ನೈ, ಇಂದೋರ್ ಸೇರಿದಂತೆ ಮುಂಬೈಗೆ ಉದ್ಯೋಗ ಅರಸಿ ಹೋದ ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಸಾಫ್ಟವೇರ್ ಕಂಪನಿಗಳು ಕೊರೋನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ 14 ದಿನಗಳ ವೇತನ ಸಹಿತಿ ರಜಾ ನೀಡಿರುವುದರಿಂದ ಮೂಲ ವಾಸಸ್ಥಾನಕ್ಕೆ ಮರಳಿ ಬರುತ್ತಿದ್ದಾರೆ. ಎಂಎನ್‌ಸಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ ಸಾವಿರಾರು ಟೆಕ್ಕಿಗಳು ಈಗಾಗಲೇ ಬೆಳಗಾವಿಯತ್ತ ಮುಖ ಮಾಡಿರುವುದರಿಂದ ಬಂದವರ ಆರೋಗ್ಯ ತಪಾಸಣೆ ಮಾಡುವುದರೊಂದಿಗೆ ಎಚ್ಚರಿಕೆ ವಹಿಸಬೇಕಾಗಿದೆ.
ವದಂತಿಗಳಿಗೆ ಕಿವಿಗೊಡಬೇಡಿ
ಬೆಂಗಳೂರಿನಲ್ಲಿ ಹೈದರಾಬಾದ್ ಮೂಲಕ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೆ ಬೆಳಗಾವಿ ಜಿಲ್ಲೆಯ 9 ಜನರಿಗೆ ಸೋಂಕು ಇರೋದು ಪತ್ತೆಯಾಗಿದೆ. ಸೋಂಕಿತರನ್ನು ಗೃಹ ಬಂಧನದಲ್ಲಿರಿಸಿ ಜಿಲ್ಲಾಡಳಿತ ತೀವ್ರ ನಿಗಾ ಇರಿಸಿದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಕ್ಷಣಾರ್ಧದಲ್ಲಿ ಹರಿದಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಕೊರೋನಾ ರೋಗಲಕ್ಷಣ ಇರುವ ಪ್ರಕರಣಗಳು ಜಿಲ್ಲೆಯಲ್ಲಿ ಎಲ್ಲೂ ಪತ್ತೆಯಾಗಿಲ್ಲ. ಯಾವುದೇ ಗೃಹ ಬಂಧನದಲ್ಲಿ ಇರಿಸಲಾಗಿಲ್ಲ ಎಂದು ಮಾಹಿತಿ ನೀಡುವ ಮೂಲಕ ಜಿಲ್ಲೆಯಲ್ಲಿ ಆತಂಕ ಸೃಷ್ಟಿದ್ದ ಸುಳ್ಳು ಸುದ್ದಿಗೆ ತೆರೆ ಎಳೆದಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡು ಸುಳ್ಳು ಸುದ್ದಿಗೆ ಕಿವಿಗೊಡಬೇಡಿ.
ಈ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡಿಲ್ಲ. ವಿದೇಶದಿಂದ ಬಂದಿಳಿದವರನ್ನು ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ಮಾಡಲಾಗಿದೆ. ವದಂತಿಗಳಿಗೆ ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಕಿವಿಗೊಡಬೇಡಿ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗೊಳ್ಳಲಾಗಿದೆ ಎಂದು ಹೇಳಿದ್ದಾರೆ.