ಸೀಗೆಹಳ್ಳಿ ಗ್ರಾಮಸ್ಥರು ಗ್ರಾಮದ ಬಾಲಕರು ಕೈಯಲ್ಲಿ ಪುಟ್ಟದೊಂದು ಮಣ್ಣಿನ ಕುಡಿಕೆ ಇಟ್ಟುಕೊಂಡು ಅದರಲ್ಲಿ ಬೇವಿನ ಸೊಪ್ಪು ತುಂಬಿ ಊರ ಮುಂದಿನ ಗುಡ್ಡೆ ಕಲ್ಲು ಬಳಿ ಕೊರೋನವ್ವಗೆ ಸಾಮೂಹಿಕ ಪೂಜೆ ನೆರವೇರಿಸಿದರು.
ಚಿತ್ರದುರ್ಗ(ಏ.16): ಲೇ. . . ಕೊರೊನವ್ವ, ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ ನೋಡು. ತಿರುಗಿ ನೋಡ್ದಂಗೆ ಸುಮ್ನೆ ಹೊಂಟೋಗ್ತಿರಬೇಕು. ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಸೀಗೆಹಳ್ಳಿ ಗ್ರಾಮಸ್ಥರು ಮಹಾ ಮಾರಿ ಕೊರೊನವ್ವಳ ಓಡಿಸಿದ ಬಗೆ ಇದು.
ಗ್ರಾಮದ ಬಾಲಕರು ಕೈಯಲ್ಲಿ ಪುಟ್ಟದೊಂದು ಮಣ್ಣಿನ ಕುಡಿಕೆ ಇಟ್ಟುಕೊಂಡು ಅದರಲ್ಲಿ ಬೇವಿನ ಸೊಪ್ಪು ತುಂಬಿ ಊರ ಮುಂದಿನ ಗುಡ್ಡೆ ಕಲ್ಲು ಬಳಿ ಸಾಮೂಹಿಕ ಪೂಜೆ ನೆರವೇರಿಸಿದರು. ನಂತರ ಅದನ್ನು ಹೊತ್ತೊಯ್ದು ಗಡಿ ದಾಟಿಸಿದರು. ಮರಳಿ ಬರುವಾಗ ಕೊರೊನವ್ವ ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ ಅಂತ ಬೈದು ಅಟ್ಟಿದರು. ಅಲ್ಲಿಗೆ ಮಾರಿಯೊಂದನ್ನು ಓಡಿಸಿದ ಸಂತೃಪ್ತ ಬಾವ ಅವರದ್ದು.
'ಮೋದಿ ಮಾತಿಗೆ ಬೆಲೆ ನೀಡಿ ಹಂಪಿಯಲ್ಲೇ ಇದ್ದೇವೆ': 50 ದಿನಗಳಿಂದ ಹೋಟೆಲ್‌ನಲ್ಲಿರುವ ನಟಿ ಜಯಂತಿ
ಬುಡಕಟ್ಟು ಸಂಸ್ಕೃತಿ ತೂಗು ತೊಟ್ಟಿಲೆಂದೇ ಹೆಸರಾದ ಚಿತ್ರದುರ್ಗ ಜಿಲ್ಲೆ ಅನಾದಿಕಾಲದಿಂದಲೂ ಮಹಾ ಮಾರಿಗಳನ್ನು ಓಡಿಸುವ ಇಂತಹದ್ದೊಂದು ಆಚರಣೆ ಪಾಲಿಸಿಕೊಂಡು ಬಂದಿದೆ. ಹಿಂದೆ ಕಾಲರಾ, ಪ್ಲೇಗ್ , ದಡಾರ (ಸಿಡುಬು) ಗಳು ಬಂದಾಗಲೆಲ್ಲ ಸತ್ತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಹೋಗುವಷ್ಟರಲ್ಲಿ ಮತ್ತೊಂದು ಸಾವು ಸಂಭವಿಸುತ್ತಿತ್ತು. ವೈದ್ಯರು ಇಲ್ಲದ ಕಾಲದಲ್ಲಿ ಅನಿವಾರ್ಯವಾಗಿ ಕಾಣದ ದೇವರ ಮೊರೆ ಹೋಗುತ್ತಿದ್ದರು. ಬೇವಿನ ಸೊಪ್ಪಿಗೆ ರೋಗ ನಿರೋಧಕ ಶಕ್ತಿ ಇರುವುದರಿಂದ ಸಹಜವಾಗಿಯೇ ಅದನ್ನು ಬಳಸಿ ಸಾವಿನಿಂದ ಪಾರಾಗುತ್ತಿದ್ದರು. ಅದು ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ.
ಇಂದಿಗೂ ಕೂಡ ಗಾಳಿ(ಸೋಂಕು) ಮಾರವ್ವ, ದುರುಗವ್ವ ಅಂದೆಲ್ಲ ದೇವರುಗಳು ಹಳ್ಳಿಗಳಲ್ಲಿವೆ. ಪ್ರತಿ ವರ್ಷ ಊರು ಅಮ್ಮನ ಹಬ್ಬ ಮಾಡಿಕೊಂಡು ಎಲ್ಲರೂ ಊಟ ಮಾಡುತ್ತಾರೆ. ಚಿತ್ರದುರ್ಗದ ಕರುವಿನಕಟ್ಟೆಯಲ್ಲಿ ಇಂತಹದ್ದೊಂದು ಆಚರಣೆ ಚಾಲ್ತಿಯಲ್ಲಿದೆ. ಮೊರಗಳಲ್ಲಿ ಸಾವಿರಾರುಹೋಳಿಗೆಗಳ ನೀಟಾಗಿ ಜೋಡಿಸಿ, ಕುಡಿಕೆ, ಬೇವಿನಸೊಪ್ಪು ಇಟ್ಟು ಪೂಜೆ ಮಾಡಿ ಊರ ಗಡಿ ದಾಟಿಸಿ ಬರುತ್ತಾರೆ. ಊರಿಗೆ ಅಂಟಿದ ಪೀಡೆ ನಿವಾರಣೆ ಆಯಿತೆಂಬ ನಂಬಿಕೆ ಅವರದ್ದು. ಬುಡಕಟ್ಟು ಜನರು ಹೆಣ್ಣು ದೇವರುಗಳನ್ನು ಸಹಜವಾಗಿಯೇ ಏಕ ವಚನ ಪ್ರಯೋಗಿಸಿ ಬಯ್ಯುತ್ತಾರೆ, ಮಾರಿ, ದುರುಗಿ ಎಂದೆಲ್ಲಾ ಸಂಬೋಧಿಸುತ್ತಾರೆ.
ಹಂಪಿ ಪ್ರವಾಸದಲ್ಲಿ ಸಿಲುಕಿರುವ ನಟಿ ಜಯಂತಿ ಹಾಗೂ ಪುತ್ರ ಫುಲ್ ಸೇಫ್!
ಚಿಕ್ಕಮಕ್ಕಳಿಗೆ ರೋಗ ಅಂಟದಿರಲಿ ಎಂಬ ಕಾರಣಕ್ಕೆ ಮಕ್ಕಳನ್ನೇ ಪೂಜೆಗೆ ಬಳಸಿಕೊಳ್ಳುತ್ತಾರೆ. ಏನೇ ಪೂಜೆ ಆದರೂ ಕುಡಿಕೆ, ಬೇವಿನಸೊಪ್ಪು, ಹಸಿರು ಬಳೆ ಬಳಕೆ ಮಾಡುತ್ತಾರೆ. ಹೋಳಿಗೆಮ್ಮ, ಮಾರಮ್ಮ, ಪ್ಲೇಗಮ್ಮನ ಸಾಲಿಗೆ ಇದೀಗ ಕೊರೋನಮ್ಮಾ ಕೂಡ ಸೇರಿಕೊಂಡಿರುವುದು ಹೊಸ ಬೆಳವಣಿಗೆ ಆಗಿದೆ.