ಧಾರವಾಡ: ಸುರಕ್ಷಿತವಿದ್ದರೂ ಅಳ್ನಾವರಕ್ಕಿದೆ ಕೋವಿಡ್‌ ಭಯ!

By Kannadaprabha NewsFirst Published Jul 26, 2020, 7:09 AM IST
Highlights

ಧಾರವಾಡ ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಅಳ್ನಾವರ ಸುರಕ್ಷಿತ| ಹು-ಧಾ ಅವಳಿ ನಗರ ಹೊರತುಪಡಿಸಿ ಕಲಘಟಗಿ (46), ನವಲಗುಂದ (108), ಕುಂದಗೋಳ (51) ,ಅಳ್ನಾವರದಲ್ಲಿ ಬರೀ ಆರು ಪ್ರಕರಣಗಳು|

ಶಶಿಕುಮಾರ ಪತಂಗೆ 

ಅಳ್ನಾವರ(ಜು.26): ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಇಷ್ಟಾಗಿಯೂ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಗಮನಿಸಿದರೆ ಅಳ್ನಾವರದಲ್ಲಿ ಮಾತ್ರ ನೆಮ್ಮದಿಯ ವಾತಾವರಣವಿದೆ.

ಕಳೆದ ಕೆಲವು ದಿನಗಳ ವರೆಗೂ ಒಂದೂ ಪ್ರಕರಣ ಇಲ್ಲದೇ ನಿಯಂತ್ರಣದಲ್ಲಿದ್ದ ಅಳ್ನಾವರದಲ್ಲಿ ಇದೀಗ ಆರು ಪ್ರಕರಣಗಳು ದಾಖಲಾಗಿದ್ದು, ತುಸು ಭಯ ಶುರುವಾಗಿದೆ. ಅಳ್ನಾವರ ಧಾರವಾಡ ಜಿಲ್ಲೆಯ ಗಡಿ ಪಟ್ಟಣ. ಅಕ್ಕಪಕ್ಕ ಬೆಳಗಾವಿ, ಉತ್ತರ ಕನ್ನಡ, ಗೋವಾ ರಾಜ್ಯಕ್ಕೆ ಅಂಟಿಕೊಂಡಿದ್ದು, ಹೆಚ್ಚಿನ ಜನ ಸಂಚಾರ ಸಾಮಾನ್ಯ. ನಿತ್ಯ ವ್ಯಾಪಾರ-ವಹಿವಾಟು, ಓಡಾಟ ಇದ್ದೇ ಇರುತ್ತದೆ. ಆದ್ದರಿಂದ ಅಳ್ನಾವರದಲ್ಲಿ ಹೆಚ್ಚಿನ ಪ್ರಕರಣಗಳಾಗಲಿವೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಇನ್ನು, ಗೋವಾದಿಂದ ನಡೆದುಕೊಂಡು ಬಂದಿದ್ದ ಹೊರ ಜಿಲ್ಲೆಗಳ ಕಾರ್ಮಿಕರು ಅಳ್ನಾವರದಲ್ಲಿಯೇ 15 ದಿನ ಇದ್ದರು. ಇಷ್ಟಾಗಿಯೂ ಅಳ್ನಾವರ ಸುರಕ್ಷಿತವಾಗಿದೆ. ಹು-ಧಾ ಅವಳಿ ನಗರ ಹೊರತುಪಡಿಸಿ ಕಲಘಟಗಿ (46), ನವಲಗುಂದ (108), ಕುಂದಗೋಳ (51) ಪಾಸಿಟಿವ್‌ ಪ್ರಕರಣಗಳು ಕಂಡು ಬಂದರೆ, ಅಳ್ನಾವರದಲ್ಲಿ ಬರೀ ಆರು ಪ್ರಕರಣಗಳು ಎನ್ನುವುದೇ ಅಲ್ಲಿನ ಜನತೆಗೆ ಸಮಾಧಾನದ ಸಂಗತಿ.

ತಾಯಿಗೆ ಕೊರೋನಾ ಬಂದಿತೆಂದು ಆತ್ಮಹತ್ಯೆ ಮಾಡಿಕೊಂಡ ಮಗ

ಅಳ್ನಾವರದಲ್ಲಿ ಬೇರೆ ಜಿಲ್ಲೆಯ ಹಾಗೂ ರಾಜ್ಯದ ಜನರ ಸಂಚಾರ ಅಧಿಕವಾಗಿದೆ. ಗೋವಾ ಹಾಗೂ ಮಹಾರಾಷ್ಟ್ರದ ಕರ್ನಾಟಕಕ್ಕೆ ಆಗಮಿಸುವ ಜನರು ಈ ಪಟ್ಟಣವನ್ನು ಬಳಸಿಕೊಂಡೆ ಪ್ರಯಾಣ ಮಾಡಬೇಕು. ಉತ್ತರ ಕನ್ನಡದ ಹಳಿಯಾಳ ತಾಲೂಕಿನ ಹಳ್ಳಿಗಳಿಗೂ ಕೊರೋನಾ ದೊಡ್ಡ ಮಟ್ಟದಲ್ಲಿ ಕಾಲಿಟ್ಟಿರುವ ಪರಿಣಾಮವಾಗಿ ಇಲ್ಲಿರುವ ಜನರು ಇನ್ನಷ್ಟುಆತಂಕಕ್ಕೆ ಒಳಗಾಗಿದ್ದಾರೆ. ಆದರೂ ಇಲ್ಲಿನ ತಾಲೂಕಾಡಳಿತ, ಪಪಂ, ಪೊಲೀಸ್‌ ಇಲಾಖೆಯ ಬಂದೋಬಸ್‌್ತನಲ್ಲಿ ಈ ವರೆಗೂ ಕೊರೋನಾ ವೈರಾಣುವನ್ನು ಒಳಗಡಿ ನುಸುಳದಂತೆ ಕಟ್ಟೆಚ್ಚರದಿಂದ ಪಟ್ಟಣವನ್ನು ರಕ್ಷಿಸಲಾಗಿದ್ದು, ಗ್ರಾಮೀಣದಲ್ಲೂ ಅದೇ ರೀತಿಯ ಎಚ್ಚರಿಕೆ ವಹಿಸಿ ಮಾದರಿಯಾಗಿದೆ.

ಕಟ್ಟಿಗೆ ಖರೀದಿಗೆ ತೊಂದರೆ:

ಇಲ್ಲಿ ಕಟ್ಟಿಗೆ ಉದ್ದಿಮವೇ ಹೆಚ್ಚಾಗಿರುವುದರಿಂದ ರಾಜ್ಯದ ನಾನಾ ಕಡೆಗಳಿಂದ ಕಟ್ಟಿಗೆ ಖರೀದಿಗಾಗಿ ಬರುವ ಜನರು ಬಾರದಿರುವುದರಿಂದ ಇಲ್ಲಿನ ಅನೇಕ ಕಟ್ಟಿಗೆ ಮಿಲ್‌ಗಳಲ್ಲಿ ದುಡಿಯುವ ಕೂಲಿಕಾರರಿಗೆ ಕೆಲಸವಿಲ್ಲದಂತಾಗಿದೆ. ಹೊರ ಜಿಲ್ಲೆಗಳಿಗೆ ಹೋಗಿ ದುಡಿಯುವಂತಿಲ್ಲ. ಇಲ್ಲಿದ್ದು ಏನು ಮಾಡಬೇಕು? ಎಂಬುದೇ ಪಟ್ಟಣದ ಕೂಲಿ ಕಾರ್ಮಿಕರಿಗೆ ತಿಳಿಯುತ್ತಿಲ್ಲ. ಕೊರೋನಾ ತೀವ್ರವಾಗಿರುವ ಸಂದರ್ಭದಲ್ಲಿ ಪಟ್ಟಣದ ಜನರು ಸ್ವಯಂ ಲಾಕ್‌ಡೌನ್‌ ಅಂತಹ ಪ್ರಯತ್ನಗಳನ್ನು ಮಾಡಿದ್ದರಿಂದಲೇ ಇದೀಗ ಸುರಕ್ಷಿತರಾಗಿದ್ದೇವೆ ಎಂದು ಪಟ್ಟಣದ ಜನರು ಹೇಳುತ್ತಾರೆ.

ಅಳ್ನಾವರ ತಾಲೂಕಿನಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಪಟ್ಟಣಕ್ಕೆ ಬರುವ ಬೇರೆ ಜಿಲ್ಲೆಯ ಮಾರ್ಗಗಳಲ್ಲಿ ನಿಗಾ ಇಡಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಪಟ್ಟಣದಲ್ಲಿನ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ತಾತ್ಕಾಲಿಕವಾಗಿ ಸ್ಥಳಾತಂರಿಸಲಾಗಿದೆ ಎಂದು ಅಳ್ನಾವರ ತಾಲೂಕು ದಂಡಾಧಿಕಾರಿ ಅಮರೇಶ ಪಮ್ಮಾರ ಅವರು ತಿಳಿಸಿದ್ದಾರೆ.

click me!