ಬೆಂಗಳೂರು ಕೃಷಿ ಮೇಳದಲ್ಲಿ ಕೋಳಿ, ಮೀನು ನೋಡಲು ಮುಗಿಬಿದ್ದ ಜನ: ಏನಿದರ ವಿಶೇಷತೆ!

By Kannadaprabha NewsFirst Published Nov 18, 2023, 10:43 AM IST
Highlights

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸುವ ಬಹು ನಿರೀಕ್ಷಿತ ‘ಕೃಷಿ ಮೇಳ’ಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು ಕುಕ್ಕುಟ ಪ್ರಪಂಚ, ಮತ್ಸ್ಯಲೋಕ ಜನಾಕರ್ಷಣೆ ಕೇಂದ್ರವಾಗಿದ್ದವು. 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.18): ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸುವ ಬಹು ನಿರೀಕ್ಷಿತ ‘ಕೃಷಿ ಮೇಳ’ಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು ಕುಕ್ಕುಟ ಪ್ರಪಂಚ, ಮತ್ಸ್ಯಲೋಕ ಜನಾಕರ್ಷಣೆ ಕೇಂದ್ರವಾಗಿದ್ದವು. ಹೆಸರಘಟ್ಟದ ಸೆಂಟ್ರಲ್‌ ಆಫ್‌ ಎಕ್ಸ್‌ಲೆನ್ಸ್‌ ಫಾರ್‌ ಅನಿಮಲ್‌ ಹಸ್ಬೆಂಡ್ರಿಯವರ ಮಳಿಗೆಯಲ್ಲಿದ್ದ ಥರೇವಾರಿ ಕೋಳಿಗಳನ್ನು ಮೇಳಕ್ಕೆ ಆಗಮಿಸಿದ ಜನತೆ ಕುತೂಹಲದಿಂದ ವೀಕ್ಷಿಸಿ ಮರಿಗಳನ್ನು ಖರೀದಿಸಿದರು. 

ಸುಧಾರಿತ ತಳಿಗಳಾಗಿದ್ದು, ಮನೆಯ ಹಿತ್ತಲಿನಲ್ಲಿ ಸಾಕಲು ಸೂಕ್ತವಾದ ಕಾವೇರಿ, ಅಸಿಲ್‌ ಕ್ರಾಸ್‌, ಕಳಿಂಗ ಬೌಲ್‌ ತಳಿಗಳು ವಿಶೇಷ ಆಕರ್ಷಣೆಯಾಗಿದ್ದವು. ಕಪ್ಪು ಮೈಬಣ್ಣದ ಕಾವೇರಿ ಕೋಳಿಯು ಮೊಟ್ಟೆ ಮತ್ತು ಮಾಂಸ ಎರಡಕ್ಕೂ ಸೂಕ್ತವಾಗಿವೆ. ಒಂದು ದಿನದ ಪುಟ್ಟ ಮರಿಯೊಂದನ್ನು ₹25ಕ್ಕೆ  ಮಾರಾಟ ಮಾಡುತ್ತಿದ್ದು, ಮಧ್ಯಾಹ್ನವೇ 400 ಮರಿ ಮಾರಾಟವಾಗಿ ಸಂಜೆಯ ವೇಳೆಗೆ ಪುನಃ ಮರಿಗಳನ್ನು ತರಿಸಿಕೊಳ್ಳಬೇಕಾಯಿತು. ಮತ್ತೊಂದೆಡೆ, 5 ವಾರದ 4 ಮರಿಗೆ ₹250 ನಿಗದಿ ಮಾಡಿದ್ದು ಬೇಡಿಕೆ ಇದ್ದುದು ಕಂಡುಬಂತು. 

ಶಾಂತಿ ಕದಡಬೇಡಿ: ಬಜರಂಗದಳಕ್ಕೆ ಸಚಿವ ಪರಮೇಶ್ವರ್‌ ಎಚ್ಚರಿಕೆ

ಹೆಬ್ಬಾಳದ ಪಶು ವೈದ್ಯಕೀಯ ಮಹಾವಿದ್ಯಾಲಯದ ಸ್ವರ್ಣಧಾರ, ಗಿರಿರಾಜ, ರಾಜ-2 ಕೋಳಿಗಳೂ ಗಮನ ಸೆಳೆದವು. ಯಲಹಂಕದ ಅಟ್ಟೂರಿನ ಎಕೆಎನ್‌ ಫಾರಂನವರು ₹700ಕ್ಕೆ ಜೋಡಿ ಟರ್ಕಿ ಕೋಳಿ, ಜೋಡಿ ಖಡಕ್‌ನಾಥ್‌ಗೆ ₹300ರಂತೆ ಮಾರಾಟ ಮಾಡುತ್ತಿದ್ದು, ಗಿಳಿಮೂಗಿನ ಕೋಳಿ ಮರಿಯೊಂದಕ್ಕೆ ₹3 ಸಾವಿರ ದರ ಇದ್ದುದು ಆಶ್ಚರ್ಯ ಉಂಟು ಮಾಡಿತು. ಮುದ್ದಾದ ಮೊಲದ ಮರಿಗಳೂ ಮಾರಾಟಕ್ಕಿದ್ದವು.

₹15 ಸಾವಿರ ಮೌಲ್ಯದ ಮೊಲ!: ನ್ಯೂಜಿಲ್ಯಾಂಡ್‌ ವೈಟ್‌ ಮತ್ತು ಬ್ಲ್ಯಾಕ್‌ ಜೈಂಟ್‌ ಮೊಲದ ಮರಿಗಳನ್ನು ತಲಾ ₹600ಕ್ಕೆ ಮಾರಾಟ ಮಾಡಿದ್ದೂ ಕೃಷಿ ಮೇಳದಲ್ಲಿ ಕಂಡುಬಂತು. ಬೃಹತ್‌ ಗಾತ್ರದ ‘ಜರ್ಮನ್‌ ಅಂಗೋರಾ’ ಮೊಲದ ಮರಿಯನ್ನು ಜನಾಕರ್ಷಣೆಗೆಂದು ವ್ಯಾಪಾರಿಯೊಬ್ಬರು ಪ್ರದರ್ಶಿಸಿದ್ದು ಇದರ ಬೆಲೆಬರೋಬ್ಬರಿ ₹15 ಸಾವಿರ ಎಂದು ತಿಳಿದು ಜನೆತೆ ಆಶ್ಚರ್ಯಚಕಿತರಾದರು. 

ಮಜಬೂತ್‌ ಹಳ್ಳಿಕಾರ್‌ ಎತ್ತು: ಹಳ್ಳಿಕಾರ್‌ ತಳಿಯ ಆಕರ್ಷಕ ಎತ್ತುಗಳೂ ಮೇಳಕ್ಕೆ ಬಂದವರನ್ನು ತಮ್ಮತ್ತ ಸೆಳೆದವು. ಬಿಗ್‌ಬಾಸ್‌ ಖ್ಯಾತಿಯ ಸಂತೋಷ್‌ ಒಡೆತನದ ‘ಲವ-ಕುಶ’, ತುರುವೇಕೆರೆ ಶಾಸಕ ಮಸಾಲಾ ಜಯರಾಂ ಅವರಿಂದ ₹26 ಲಕ್ಷ ನೀಡಿ ಖರೀದಿಸಿ ತಂದಿದ್ದ ‘ಏಕಲವ್ಯ’ ಜೋಡಿ, ಉದ್ದ ಕಿವಿ ಹೊಂದಿದ್ದ ₹3 ಲಕ್ಷ ಮೌಲ್ಯದ ಹೋತ ಸಹ ಮೇಳದ ಆಕರ್ಷಣೆಯಾಗಿದ್ದು, ಜನರು ಹೋತದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.

ಮಕ್ಕಳ ಮನಸೂರೆಗೊಂಡ ‘ಮತ್ಸ್ಯ’ ಲೋಕ: ಬಣ್ಣಬಣ್ಣದ, ವಿವಿಧ ಗಾತ್ರದ ಮೀನಿನ ಮರಿಗಳು ಮೇಳಕ್ಕೆ ಆಗಮಿಸಿದವರಲ್ಲಿ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಆಪ್ಯಾಯಮಾನವಾಗಿ ಕಂಡವು. ಭದ್ರಪ್ಪ ಲೇಔಟ್‌ನ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರದವರು ಸಾಕಷ್ಟು ಜಾತಿಯ ಮೀನಿನ ಮರಿ, ಆಕ್ವೇರಿಯಂಗಳನ್ನು ಮಾರಾಟ ಮಾಡುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂತು. ಹೊಮ್ಮೀನು, ಬಿಳಿ ಮೊಲ್ಲಿ, ಕಪ್ಪು ಮೊಲ್ಲಿ, ಕೆಂಪು ಪ್ಯಾಟಿ, ಕೊಯಿಗೆಂಡೆ, ಸಿಗಾಪುರದ ಗಪ್ಪಿ, ಕೆಂಪುಕತ್ತಿ ಬಾಲದ ಮೀನು, ₹100 ಮೌಲ್ಯದ ಫೈಟರ್‌ ಮೀನಿನ ಮರಿಗಳು ಹೆಚ್ಚಾಗಿ ಮಾರಾಟವಾದವು. ನಮ್ಮಲ್ಲಿ ₹10 ಸಾವಿರ ಮೊತ್ತದ ಜಾಪ್‌ನೀಸ್‌ ಕೋಯಿ ಮೀನು ಸಹ ಮಾರಾಟಕ್ಕೆ ಲಭ್ಯವಿದೆ ಎನ್ನುತ್ತಾರೆ ಮಾಹಿತಿ ಕೇಂದ್ರದ ಅಧಿಕಾರಿಗಳು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ: ಕೃಷಿ ಮೇಳಕ್ಕೆ ಆಗಮಿಸಿದವರಿಗೆ ರಿಯಾಯಿತಿ ದರದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದು ಮೊದಲ ದಿನವಾದ ಶುಕ್ರವಾರ 8 ಸಾವಿರಕ್ಕೂ ಅಧಿಕ ಮಂದಿ ಮಧ್ಯಾಹ್ನ ಊಟ ಮಾಡಿದ್ದಾರೆ. ಊಟಕ್ಕೆ ಮುದ್ದೆ, ಅನ್ನ, ಸಾರು, ಮೊಟ್ಟೆ, ಪಲ್ಯ, ಮೈಸೂರ್‌ ಪಾಕ್‌ ನೀಡಿದ್ದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ಕಂಡುಬಂತು.

1.31 ಲಕ್ಷ ಮಂದಿ ಭೇಟಿ: 80 ಲಕ್ಷ ರು. ವಹಿವಾಟು: ಕೃಷಿ ಮೇಳದ ಮೊದಲ ದಿನವಾದ ಶುಕ್ರವಾರ 1.31 ಲಕ್ಷ ಮಂದಿ ಭೇಟಿ ನೀಡಿದ್ದಾರೆ. 625 ಮಳಿಗೆಗಳನ್ನು ತೆರೆದಿದ್ದು 80 ಲಕ್ಷ ರುಪಾಯಿಗೂ ಅಧಿಕ ವಹಿವಾಟು ನಡೆದಿದೆ ಎಂದು ಕೃಷಿ ವಿವಿ ಮೂಲಗಳು ಮಾಹಿತಿ ನೀಡಿವೆ ಕೃಷಿ ಯಂತ್ರೋಪಕರಣ, ಬಿತ್ತನೆ ಬೀಜ, ರಸಗೊಬ್ಬರ, ಕೋಟನಾಶಕ, ಆಹಾರ ಪದಾರ್ಥ, ಗೃಹೋಪಯೋಗಿ ವಸ್ತುಗಳು, ಸಿರಿಧಾನ್ಯ ಸೇರಿದಂತೆ ಹಲವು ವಸ್ತುಗಳ ಮಾರಾಟ ನಡೆದಿದ್ದು, ₹80 ಲಕ್ಷಕ್ಕೂ ಅಧಿಕ ವಹಿವಾಟು ನಡೆದಿರುವ ಅಂದಾಜಿದೆ.

ನ.18-19ರಂದು ಮತದಾರರ ಪಟ್ಟಿ ಬದಲಾವಣೆಗೆ ಬಿಬಿಎಂಪಿ ಚುನಾವಣಾ ವಿಭಾಗದಿಂದ ವಿಶೇಷ ಅಭಿಯಾನ

ರಾಗಿ ಬೋಟಿ ಮಾರಾಟದ ಭರಾಟೆ: ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಉಂಟಾಗುತ್ತಿರುವ ಬೆನ್ನಲ್ಲೇ ಕೃಷಿ ಮೇಳದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥಗಳೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾದವು. ಅದರಲ್ಲೂ ರಾಗಿಯಿಂದ ತಯಾರಿಸಿದ ಬೋಟಿಯಂತೂ ಹೆಚ್ಚಿನ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸ್ಥಳದಲ್ಲೇ ತಯಾರಿಸಿ ರುಚಿ ಸವಿಯಲು ಒಂದೆರಡು ಬೋಟಿ ಉಚಿತವಾಗಿ ನೀಡುತ್ತಿದ್ದರಿಂದ ಬಾಯಿ ಚಪ್ಪರಿಸಿದ ಜನರು 300 ಗ್ರಾಂ ಬೋಟಿ ಪಾಕೆಟ್‌ ಅನ್ನು ₹100ಕ್ಕೆ ಖರೀದಿಸಿ ತೆರಳುತ್ತಿದ್ದುದು ಹೆಚ್ಚಾಗಿ ಕಂಡುಬಂತು.

click me!