ಭರ್ತಿಯಾದ ಬೀದರ್ ಜಿಲ್ಲಾಸ್ಪತ್ರೆ, ಜೀವಕ್ಕಿಲ್ಲವೇ ಬೆಲೆ..?| ಹಾಸಿಗೆಗಳ ಕೊರತೆಯಿಂದ ರೋಗಿಗಳನ್ನು ಸಂಕಷ್ಟಕ್ಕೆ ನೂಕುತ್ತಿರುವ ಕೋವಿಡ್| ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ, ರೋಗಿಗಳಿಗೆ ಜಾಗವೇ ಇಲ್ಲ| ರೆಮಿಡೆಸಿವರ್ ಇಂಜಕ್ಷನ್ ನೀಡಿಕೆ ಅನುಮಾನ, ರೋಗಿ ಆರೋಪ| ದುಡ್ಡಿದ್ದವರು ಬದುಕುತ್ತಿದ್ದಾರೆ ಬಡವ ಸಾವಿಗೆ ನೂಕಲ್ಪಡುತ್ತಿದ್ದಾನೆ|
ಬೀದರ್(ಏ.16): ಕೋವಿಡ್ ಸಂಕಷ್ಟ ನರಕಕ್ಕೆ ನೂಕುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಆಸ್ಪತ್ರೆ ಎದುರು ನರಳಾಡುತ್ತಿರುವ ರೋಗಿಗಳ ಸಂಕಷ್ಟ ಕರಳು ಹಿಸುಕುವಂತಿದೆ. ಇದರೊಟ್ಟಿಗೆ ಔಷಧಿಗಳ ಜೊತೆ ಜೊತೆಗೆ ವೈದ್ಯರ ಕೊರತೆ ರೋಗಿಗಳ ಜೀವ ಹಿಂಡುತ್ತಿದ್ದರೆ, ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇರೋದಕ್ಕೂ ಸಮಾಜ ಬಹಿಷ್ಕರಿಸುತ್ತಿದೆ. ಕೋವಿಡ್ ಪಾಸಿಟಿವ್ ಜೀವವಷ್ಟೇ ಅಲ್ಲ ಜೀವನವನ್ನೂ ಹಿಂಡಿ ಹಿಪ್ಪಿ ಮಾಡ್ತಿದೆ.
ಬೀದರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುಂಬೆಲ್ಲ ಕೋವಿಡ್ ರೋಗಿಗಳೇ. ಅಷ್ಟಕ್ಕೂ ಇದು ಕೊರೋನಾ ಚಿಕಿತ್ಸೆಗೆಂದು ಸೀಮಿತವಾಗಿಲ್ಲ. ಹೆರಿಗೆ, ಮಕ್ಕಳ ಚಿಕಿತ್ಸೆ, ಹೃದ್ರೋಗಿಗಳ ಚಿಕಿತ್ಸೆ ಜೊತೆಗೆ ಅಪಘಾತಗಳಿಂದಾಗಿ ಗಾಯಗೊಂಡವರು ಸೇರಿದಂತೆ ಎಲ್ಲ ರೀತಿಯ ಆಸ್ಪತ್ರೆಯಾಗಿದ್ದರೂ ಕೋವಿಡ್ ಆಸ್ಪತ್ರೆಯನ್ನು ಆವರಿಸಿದ್ದು, ಎಲ್ಲ ಹಾಸಿಗೆಗಳ ಮೇಲೆ ಮುತ್ತಿಗೆ ಹಾಕಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಕಾದು ಸುಸ್ತಾಗಿ ಸಾಲಸೂಲ ಮಾಡಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದರೂ ಅಲ್ಲಿಯೂ ಸಿಗದಿದಾಗ ಪಕ್ಕದ ಹೈದ್ರಾಬಾದ್ ಅಥವಾ ಸೊಲ್ಲಾಪರಕ್ಕೆ ಕರೆದೊಯ್ಯುವ ದುಸ್ಸಾಹಸಕ್ಕೆ ಕೈ ಹಾಕದವರ ಪೈಕಿ ಹಲವು ಜೀವ ಬಿಟ್ಟಿದ್ದಾರೆ. ಜಿಲ್ಲೆಯಾದ್ಯಂತ ನಿತ್ಯ ಕನಿಷ್ಠ 200ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಆಸ್ಪತ್ರೆ ಸೇರುತ್ತಿದ್ದಾರೆ. ಹಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆದರೂ ಖಾಸಗಿ ಆಸ್ಪತ್ರೆಗಳಲ್ಲಿ ತೆರಳಿದರೂ ಸೋಂಕಿಗೆ ರಾಮಬಾಣವಾಗಿರುವ ರೆಮಿಡೆಸಿವರ್ ಇಂಜಕ್ಷನ್‌ಗೆ ಸರ್ಕಾರಿ ಆಸ್ಪತ್ರೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ.
ಬೇಕಾಬಿಟ್ಟಿ ಕೋವಿಡ್ ಚಿಕಿತ್ಸಾ ದರ ವಸೂಲಿಗೆ ಸರ್ಕಾರ ಬ್ರೇಕ್..!
ರೋಗಿಗಳಿಗೆ ಜಾಗವೇ ಇಲ್ಲ:
ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿದೆ. ಅದರಲ್ಲಿಯೂ ಆಕ್ಸಿಜನ್ ಕೊರತೆ ಅಟ್ಟಕ್ಕೇರಿದೆ. ಆಕ್ಸಿಜನ್ ಅವಶ್ಯಕತೆಯಿರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಜಾಗವೇ ಇಲ್ಲ ಎಂಬಂಥ ಪರಿಸ್ಥಿತಿಯಿದ್ದು ಹೀಗಾಗಿಯೇ ಸಾವು ನೋವು ಹೆಚ್ಚಾಗಲು ಕಾರಣವಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಅಪಾರವಾಗಿದೆ. ಇದರೊಟ್ಟಿಗೆ ರೋಗಿಗಳನ್ನು ತಪಾಸಣೆ ನಡೆಸಬೇಕಾದ ಬಹುತೇಕ ವೈದ್ಯರಿಗೂ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ದೂರ ಉಳಿದಿದ್ದಾರೆ. ರೋಗಿಗಳಿಗೆ ಬಹುತೇಕ ಚಿಕಿತ್ಸೆ ವೈದ್ಯರ ಮೌಖಿಕ ಸಲಹೆ ಮೇರೆಗೆ ಇತರೆ ಸಿಬ್ಬಂದಿಯಿಂದಲೇ ನಡೆಯುತ್ತೆ ಎಂಬುದು ಬಹುತೇಕ ಸತ್ಯ ಎಂದೆನ್ನುತ್ತಿದ್ದಾರೆ ರೋಗಿಗಳು.
ಕೋವಿಡ್ ಸೋಂಕಿನಿಂದಾಗಿ ಬಹು ಅಂಗಾಂಗಗಳ ವೈಫಲ್ಯದೊಂದಿಗೆ ಸಾವಿಗೆ ನೂಕಲ್ಪಡುತ್ತಿರುವ ಜನರ ಜೀವ ಉಳಿಸಬಲ್ಲ ಕೊರೋನಾ ಸಂಜೀವಿನಿ ಎಂದೇ ಕರೆಯಲ್ಪಡುವ ರೆಮಿಡಿಸಿವಿಯರ್ ಇಂಜಕ್ಷನ್ ಕೃತಕ ಕೊರತೆಯನ್ನು ಸೃಷ್ಟಿಸಲಾಗಿದ್ದು, ಕಾಳಸಂತೆಯಲ್ಲಿ ಈ ಇಂಜಕ್ಷನ್ ಮಾರಾಟವಾಗ್ತಿದೆ ಎಂದು ಆರೋಪಿಸಲಾಗಿದೆ.
ರೋಗಿ ಆರೋಪ:
ಈ ಕುರಿತಂತೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿವಕುಮಾರ ಬೋನೆ ಎಂಬುವವರು ರೆಮಿಡಿಸಿವಿಯರ್ ಇಂಜಕ್ಷನ್ ಕುರಿತಂತೆ ಅಲ್ಲಿನ ಸಹ ರೋಗಿಗಳೊಂದಿಗೆ ಮಾತನಾಡಿ, ರೆಮಿಡಿಸಿವಿಯರ್ ಇಂಜಕ್ಷನ್ ನೀಡಬೇಕೆಂದು ವೈದ್ಯಕೀಯ ವರದಿಯಲ್ಲಿ ತಿಳಿಸಿದ್ದರೂ ನೀಡ್ತಿಲ್ಲ. ಸಲೈನ್‌ನಲ್ಲಿ ಹಾಕಿದ್ದೇವೆ ಎಂದು ಹಾರಿಕೆ ಉತ್ತರವನ್ನು ಸಿಬ್ಬಂದಿ ನೀಡ್ತಾರೆ. ಇದೊಂದು ಸ್ಕಾ್ಯಮ್ ಇರಬಹುದು ಎಂದು ಅನುಮಾನಿಸಿ ಆರೋಪಿಸಿದ್ದಾರೆ. ಅಷ್ಟಕ್ಕೂ ಸರ್ಕಾರಿ ಔಷಧ ಘಟಕದಲ್ಲಿರಬೇಕಾದ ಈ ಇಂಜಕ್ಷನ್‌ಗಳು ಖಾಸಗಿ ಆಸ್ಪತæ್ರ ಸೇರ್ತಿವೆæ ಎಂಬ ಆರೋಪವಿದೆ.
ಖಾಸಗಿಯಾಗಿ ಸಾವಿರಾರು ರುಪಾಯಿ ನೀಡಿ ಇಂಜಕ್ಷನ್ ಖರೀದಿ ಮಾಡಿ ದುಡ್ಡಿದ್ದವರು ಬದುಕುತ್ತಿದ್ದು, ಬಡವರು ಸಾವಿಗೆ ನೂಕಲ್ಪಡುತ್ತಿದ್ದಾರೆ. ಅಷ್ಟಕ್ಕೂ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ರೋಗಿಗಳು ವಾಪಸ್ಸಾಗುತ್ತಿರುವದು ಅತ್ಯಂತ ಶೋಚನೀಯ. ಸರ್ಕಾರ ಇನ್ನಷ್ಟುಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸುವ ಜರೂರಿ ಇದೆ.