
ಗಂಗಾವತಿ (ಜು.29): ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರ ಜ್ವಲಂತ ಸಮಸ್ಯೆಯಾಗಿರುವ ತುಂಗಭದ್ರಾ ಯೋಜನೆಯಡಿಯಲ್ಲಿ ಬರುವ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಸರಕಾರ ನಿರ್ಲಕ್ಷ ವಹಿಸುತ್ತಿದೆ.
ಈಗಾಗಲೇ ಹಲವಾರು ಬಾರಿ ಜಿಲ್ಲಾಧಿಕಾರಿಗಳನ್ನು ಮತ್ತು ನೀರಾವರಿ ಅಧಿಕಾರಿಗಳನ್ನು ಭೇಟಿಯಾಗಿದ್ದರು ಸಹ ಗಮನಹರಿಸುತ್ತಿಲ್ಲ ಎಂದರು. ನವಲಿ ಬಳಿ ಸಮಾನಂತರ ಜಲಾಶಯದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಚರ್ಚಿಸುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಕೇವಲ ಕಾವೇರಿ ನೀರಿನ ಯೋಜನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ವಿಜಯನಗರ ಕಾಲುವೆ 11 ಎ ಗೆ ನೀರು ಬಿಡುವಂತೆ ಒತ್ತಾಯಿಸಿ ಜುಲೈ 31 ರಂದು ಅಂಜನಾದ್ರಿಯಿಂದ ತುಂಗಭದ್ರಾ ಜಲಾಶಯದವರಿಗೂ ಪಾದಯಾತ್ರೆ ಮತ್ತು ಹೋರಾಟ ನಡೆಸಲಾಗುತ್ತದೆ ಎಂದರು. ಬಿಜೆಪಿ ಮುಖಂಡ ಬಸವರಾಜ್ ಕ್ಯಾಟರ್ ಮಾತನಾಡಿ, ಕೊಪ್ಪಳ ಗಂಗಾವತಿ ಸೇರಿದಂತೆ 25 ಕ್ಕು ಹೆಚ್ಚು ಗ್ರಾಮಗಳ ರೈತರು ವಿಜಯನಗರ ಕಾಲುವೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುತ್ತದೆ. ಸುಮಾರು 6 ರಿಂದ 7 ಸಾವಿರ ರೈತರು ಭಾಗವಹಿಸುತ್ತಾರೆ ಎಂದರು.
ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರುಗಳ ತಂಡ ಬರ ಜಿಲ್ಲೆಗಳಿಗೆ ಭೇಟಿ ನೀಡಿ ರೈತರಿಗೆ ಕೂಡಲೆ ಬರ ಪರಿಹಾರ ನೀಡುವಂತೆ ಒತ್ತಾಯಿಸಿದೆ ಎಂದರು. ಈ ವೇಳೆ ಮುಖಂಡರುಗಳಾದ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರು, ಚನ್ನಪ್ಪ ಮಳಗಿ, ಡಿ.ಕೆ ಆಗೋಲಿ, ಚಂದ್ರಶೇಖರ ಹಿರಿಯೂರು, ವಿರೇಶ ಬಲಕುಂದಿ, ನಾರಾಯಣಪ್ಪ, ಶಿವಪ್ಪ ಗಾಂದಿನಗರ ಇತರರು ಇದ್ದರು.