ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಎಲ್ಲಾ ವರ್ಗದ ಜನರ ಏಳ್ಗೆಗೆ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಪೂರಕವಾಗಿದ್ದು ಈಗಾಗಲೆ ರಾಜ್ಯಾದ್ಯಂತ ಸಂಚಾರ ಮಾಡುತ್ತಿರುವ ರಥ ಯಾತ್ರೆ ತಿಪಟೂರಿಗೆ ಮಾ.10ರ ಶುಕ್ರವಾರ ಆಗಮಿಸಲಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ತಿಪಟೂರು : ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಎಲ್ಲಾ ವರ್ಗದ ಜನರ ಏಳ್ಗೆಗೆ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಪೂರಕವಾಗಿದ್ದು ಈಗಾಗಲೆ ರಾಜ್ಯಾದ್ಯಂತ ಸಂಚಾರ ಮಾಡುತ್ತಿರುವ ರಥ ಯಾತ್ರೆ ತಿಪಟೂರಿಗೆ ಮಾ.10ರ ಶುಕ್ರವಾರ ಆಗಮಿಸಲಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ನಗರದ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿಯವರ ಕನಸಿನ ರಾಜ್ಯವನ್ನು ನಿರ್ಮಾಣ ಮಾಡಲು ಪಂಚರತ್ನ ಯಾತ್ರೆಯು ಹಲವಾರು ಯೋಜನೆಗಳನ್ನು ಹೊತ್ತು ತರುತ್ತಿದ್ದು ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ, ವಸತಿ, ಆಸರೆ ಸೇರಿದಂತೆ ಐದು ವಿಭಿನ್ನ, ವಿನೂತನ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಯುವಕ-ಯುವತಿಯರ ಉದ್ಯೋಗಕ್ಕಾಗಿ ಪ್ರತಿ ತಾಲೂಕಿನಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಸ್ಥಾಪನೆ, ರೈತರಿಗೆ ಸಾಲಸೌಲಭ್ಯ, ವಸತಿ ಇಲ್ಲದ ನೂರಾರು ಕುಟುಂಬಗಳಿಗೆ ವಸತಿಯ ಆಸರೆ, ಕಡಿಮೆ ವೆಚ್ಚದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ಹೀಗೆ ಹಲವಾರು ಯೋಜನೆಗಳನ್ನು ತರಲಾಗುತ್ತಿದೆ. ಎಚ್.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಒತ್ತಡದ ನಡುವೆಯೂ ಚುನಾವಣೆಯಲ್ಲಿ ಕೊಟ್ಟಮಾತಿನಂತೆ ರೈತರ ಸಾಲಮನ್ನಾ ಮಾಡಿ ಮಾತು ಉಳಿಸಿಕೊಂಡಿದ್ದಾರೆ. ಆದರೆ ಇಂದಿನ ಬಿಜೆಪಿ ಸರ್ಕಾರಗಳಿಗೆ ರೈತರ ಬಗ್ಗೆಯಾಗಲಿ, ಜನಸಾಮಾನ್ಯರ ಕಷ್ಟಗಳಾಗಲಿ ಅರ್ಥವಾಗದೆ ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದು ಇವೆಕ್ಕೆಲ್ಲಾ ಕಡಿವಾಣ ಹಾಕಿ ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಈಗಾಗಲೇ ಪಂಚರತ್ನ ರಥಯಾತ್ರೆ ರಾಜ್ಯದ 65-70 ತಾಲೂಕುಗಳಲ್ಲಿ ಸಂಚರಿಸಿದ್ದು ಹೋದಲ್ಲೆಲ್ಲಾ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಗುತ್ತಿದೆ. ಹಳೇ ಮೈಸೂರು ಭಾಗ ಸೇರಿದಂತೆ ಉತ್ತರ ಕರ್ನಾಟಕದ ರಾಯಚೂರು, ಗುಲ್ಬರ್ಗ, ಬಸವಕಲ್ಯಾಣ ಕಡೆಗಳಲ್ಲಿಯೂ ನಮ್ಮ ಪಂಚರತ್ನ ಯಾತ್ರೆ ಯಶಸ್ವಿಗೊಂಡಿದೆ. ಕುಮಾರಸ್ವಾಮಿಯವರಿಗೆ ಈ ಯಾತ್ರೆ ಶಕ್ತಿ ತುಂಬಿದ್ದು ಮುಂಬರುವ ಚುನಾವಣೆಯಲ್ಲಿ ಅಂದುಕೊಂಡಂತೆ 123 ಸ್ಥಾನಗಳನ್ನು ನಮ್ಮ ಪಕ್ಷ ಪಡೆದುಕೊಂಡು ಎಚ್‌ಡಿಕೆ ಮುಖ್ಯಮಂತ್ರಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ತಾಲೂಕಿನ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ತಾಲೂಕು ಮಾಜಿ ಅಧ್ಯಕ್ಷ ಗುರುಮೂರ್ತಿ ತಡಸೂರು ಮಾತನಾಡಿ, ರೈತರ ಏಳಿಗೆಗಾಗಿ, ಆರೋಗ್ಯವಂತ ಸಮಾಜಕ್ಕಾಗಿ, ಯುವಕರ ಉದ್ಯೋಗಕ್ಕಾಗಿ, ಮಹಿಳಾ ಸ್ವಾವಲಂಬನೆ, ಸ್ವಾಭಿಮಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಸಂಕಲ್ಪದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದೆ. ಹಾಗಾಗಿ ಯಾತ್ರ ಇಲ್ಲಿಗೆ ಆಗಮಿಸಿದಾಗ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಬಲ ತುಂಬಬೇಕೆಂದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಎಂ.ಎಸ್.ಶಿವಸ್ವಾಮಿ, ಮುಖಂಡರಾದ ಗೋವಿಂದಸ್ವಾಮಿ, ಬಸವರಾಜು, ಪ್ರಕಾಶ್ ಹುಣಸೇಘಟ್ಟ, ನಟರಾಜು, ಬಾಳೆಕಾಯಿ ಸ್ವಾಮಿ, ಉಮಾಮಹೇಶ್ ಹಾಲ್ಕುರಿಕೆ, ನಟರಾಜು ಬೆಸುಗೆ, ಕೋಟನಾಯ್ಕನಹಳ್ಳಿ ಪ್ರಶಾಂತ್ ಮತ್ತಿತರರಿದ್ದರು.
ರಥಯಾತ್ರೆಯ ಮಾರ್ಗ
ಪಂಚರತ್ನ ರಥ ಯಾತ್ರೆಯು ಮಾ.10ರಂದು ಬೆಳಗ್ಗೆ 10.30ಕ್ಕೆ ತಾಲೂಕಿನ ಬಿದರೆಗುಡಿಯಿಂದ ಪ್ರಾರಂಭಿಸಿ ಹೊನ್ನವಳ್ಳಿ, ಹಾಲ್ಕುರಿಕೆ, ಮಣಕೀಕೆರೆ, ತಿಪಟೂರು ಕೋಡಿ ಸರ್ಕಲ್, ಗಾಂಧಿನಗರ, ರಂಗಾಪುರ ಶ್ರೀಮಠ, ಕೆರೆಗೋಡಿ ಸರ್ಕಲ್, ದಸರೀಘಟ್ಟ, ಹುಣಸೇಘಟ್ಟ, ನೊಣವಿನಕೆರೆ, ಕರಡಾಳು ಸರ್ಕಲ್, ಕರಡಿಕೋಡಿ, ರಾತ್ರಿ ಕೆ.ಬಿ ಕ್ರಾಸ್‌ನಲ್ಲಿ ಉಳಿದುಕೊಂಡು ಮುಂದಿನ ತಾಲೂಕಿಗೆ ರಥಯಾತ್ರೆಯನ್ನು ಕಳುಹಿಸಿಕೊಡಲಾಗುವುದು ಎಂದು ಶಾಂತಕುಮಾರ್ ತಿಳಿಸಿದರು.
ಫೆäಟೋ 24-ಟಿಪಿಟಿ6ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ತಾಲೂಕು ಮಾಜಿ ಅಧ್ಯಕ್ಷ ಗುರುಮೂರ್ತಿ ತಡಸೂರು, ಕಾರ್ಯಾಧ್ಯಕ್ಷರಾದ ಎಂ.ಎಸ್.ಶಿವಸ್ವಾಮಿ ಮತ್ತಿತರರಿದ್ದರು.