ಏ.27ಕ್ಕೆ ಲೆಕ್ಕ ಕೊಡುತ್ತೇವೆ ಬನ್ನಿ:ವಚನಶ್ರೀಗೆ ಮಠದ ಟ್ರಸ್ಟ್‌ ಆಹ್ವಾನ!

Kannadaprabha News   | Kannada Prabha
Published : Apr 24, 2026, 09:36 AM IST
Vachanananda shree

ಸಾರಾಂಶ

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವು ಏಪ್ರಿಲ್ 27 ರಂದು 2008 ರಿಂದ 2025 ರವರೆಗಿನ ಎಲ್ಲಾ ಲೆಕ್ಕಪತ್ರಗಳನ್ನು ಬಹಿರಂಗಪಡಿಸುವುದಾಗಿ ಘೋಷಿಸಿದೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ ಮತ್ತು ಲೆಕ್ಕ ಕೇಳಿದವರು ಹಾಜರಿರಬೇಕೆಂದು ತಿಳಿಸಿರುವ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ.

 ದಾವಣಗೆರೆ (ಏ.24): ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಾದ 2008ರಿಂದ 2025ರವರೆಗಿನ ಎಲ್ಲಾ ಲೆಕ್ಕವನ್ನು ಏ.27ರಂದು ಪೀಠದಲ್ಲಿ ನೀಡಲಿದ್ದು, ಉಚ್ಚಾಟಿತ ವಚನಾನಂದ ಸ್ವಾಮೀಜಿ ಹಾಗೂ ಲೆಕ್ಕ ಕೇಳಿದವರೂ ಹಾಜರಿರಬೇಕು ಎಂದು ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಉಚ್ಚಾಟಿತ ಸ್ವಾಮೀಜಿ ಹಾಗೂ ಲೆಕ್ಕ ಕೊಡಿ ಅಂದವರಿಗೆ ಸೋಮವಾರ ಬೆಳಗ್ಗೆ 11ಕ್ಕೆ ನಾವು ಲೆಕ್ಕವನ್ನೂ ನೀಡುತ್ತೇವೆ. ನಮ್ಮದು ಟ್ರಸ್ಟ್ ಆಗಿದ್ದು, ಸಾರ್ವಜನಿಕವಾಗಿ ಲೆಕ್ಕ ಕೊಡುವಂತಿಲ್ಲ. ಆದರೂ, ಸಾರ್ವಜನಿಕವಾಗಿ ಸಮಾಜದ ಮುಂದೆ ಲೆಕ್ಕ ನೀಡುತ್ತೇವೆ. ವಚನಾನಂದ ಸ್ವಾಮೀಜಿ ತಮ್ಮ ಆಚಾರ, ವಿಚಾರ ತಿದ್ದಿಕೊಳ್ಳಲೆಂದು ನಾವೂ ಸಾಕಷ್ಟು ಪ್ರಯತ್ನಿಸಿದೆವು. ಆದರೆ, ಎಲ್ಲವನ್ನೂ ದಿಕ್ಕು ತಪ್ಪಿಸಲು ಲೆಕ್ಕ ಕೊಡುವ ಚಳವಳಿಯನ್ನು ಆರಂಭಿಸಿದರು. ನಾವು ಟ್ರಸ್ಟ್‌ನಿಂದ ಲೆಕ್ಕ ನೀಡುವ ವೇಳೆ ಸ್ವಾಮೀಜಿ ಹಾಗೂ ಲೆಕ್ಕ ಕೇಳಿದವರೂ ಹಾಜರಿರಬೇಕು. ಈಗಾಗಲೇ ವಚನಾನಂದ ಸ್ವಾಮೀಜಿ ಪೀಠದಿಂದ ಉಚ್ಛಾಟಿತರಾಗಿದ್ದು, ಗೌರವಯುತವಾಗಿ ಪೀಠದಿಂದ ಹೊರ ಹೋಗಬೇಕು ಎಂದರು.

ಪೀಠದಿಂದ ಉಚ್ಚಾಟಿಸಿದ ನಂತರವೂ ಹಿರಿಯ ಟ್ರಸ್ಟಿಗಳು ಸ್ವಾಮೀಜಿ ಭೇಟಿ ಮಾಡಿ, ತಿದ್ದುವ ಪ್ರಯತ್ನ ಮಾಡಿದೆವು. ಆದರೆ, ನಮ್ಮನ್ನು ಸ್ವಾಮೀಜಿ ಭೇಟಿ ಮಾಡಲಿಲ್ಲ. ಶ್ರೀಪೀಠಕ್ಕೆ ನೇಮಿಸುವ ಮುನ್ನವೇ ಶ್ವಾಸಪೀಠ ತ್ಯಜಿಸುವಂತೆ ಷರತ್ತು ಇಟ್ಟಿದ್ದೆವು. ಮಠದಲ್ಲಿದ್ದುಕೊಂಡೇ ಪಂಚಮಸಾಲಿ ಸಮಾಜ ಸಂಘಟನೆ ಮಾಡುವ ಉದ್ದೇಶದಿಂದ ಸ್ವಾಮೀಜಿಯನ್ನು ಕರೆ ತರಲಾಗಿತ್ತು. ಆದರೆ, ಸ್ವಾಮೀಜಿ ಅದೆಲ್ಲವನ್ನೂ ಜವಾಬ್ದಾರಿಯಿಂದ ಮಾಡಲಿಲ್ಲ. ಆಚಾರ, ವಿಚಾರಗಳಲ್ಲೂ ತಿದ್ದಿಕೊಳ್ಳದ ಕಾರಣ ಪೀಠದಿಂದ ಉಚ್ಛಾಟಿಸುವ ನಿರ್ಧಾರ ಕೈಗೊಳ್ಳಲಾಯಿತು. ಈಗ ಶ್ರೀಪೀಠದಿಂದ ವಚನಾನಂದ ಸ್ವಾಮೀಜಿ ಗೌರವಯುತವಾಗಿ ಹೊರ ಹೋಗಬೇಕು ಎಂದು ಸ್ಪಷ್ಟಪಡಿಸಿದರು.

ಮಾ.10ರ ಟ್ರಸ್ಟ್ ಸಭೆಯಲ್ಲಿ ಶ್ರೀಪೀಠದಲ್ಲಿ ಶ್ರೀಗಳ ಆಚಾರ-ವಿಚಾರ ಎಂಬ ಅಂಶ ಸೇರಿಸಲಾಗಿತ್ತು. ಅದಕ್ಕೆ ಒಪ್ಪದ ಸ್ವಾಮೀಜಿ ಆಚಾರ ವಿಚಾರದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸದಂತೆ ಹೇಳಿ ಸಭೆಗೆ ಸ್ವಾಮೀಜಿ ಬರಲೇ ಇಲ್ಲ. ಹರ ಜಾತ್ರೆಯನ್ನು ಟ್ರಸ್ಟ್ ಮಾಡುವುದಿಲ್ಲವೆಂದರೂ ತಾವೇ ಹಣ ಹಾಕಿ, ಅಧ್ಯಕ್ಷರನ್ನು ಮಾಡಿ ಜಾತ್ರೆ ಮಾಡಿದರು. ಶ್ರೀಪೀಠದಲ್ಲಿ ಈವರೆಗೆ ಬಸವೇಶ್ವರರ ಜಯಂತಿ ಮಾಡಿಲ್ಲ. ಈಗ ಏ.24ರಂದು ದಿಢೀರನೇ ಬಸವೇಶ್ವರೋತ್ಸವದ ಪ್ರಕಟಣೆ ಹೊರಟಿಸಿದ್ದಾರೆ. ಶ್ರೀಮಠದ ಆಡಳಿತಾಧಿಕಾರಿ ಡಾ.ರಾಜಕುಮಾರ, ದಾಸೋಹ ಸಮಿತಿ ಅಧ್ಯಕ್ಷ ಸ್ಥಾನದಿಂದ ಪ್ರಕಾಶ ಪಾಟೀಲರನ್ನು ಕೈಬಿಟ್ಟು ಟ್ರಸ್ಟ್ ನಿರ್ಣಯ ಕೈಗೊಂಡಿದೆ. ಏ.24ರ ಸ್ವಾಮೀಜಿ ನೇತೃತ್ವದ ಸಭೆ, ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಯಾವುದೇ ವೈಷಮ್ಯವಿಲ್ಲ:

ಸ್ವಾಮೀಜಿ ಹಾಗೂ ನಮ್ಮ ಮಧ್ಯೆ ಯಾವುದೇ ದ್ವೇಷ, ವೈಷಮ್ಯವಿಲ್ಲ. ನಿಮ್ಮ ಜವಾಬ್ಧಾರಿಯನ್ನು ನೀವು ನಿರ್ವಹಿಸಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಿ. ಒಂದು ಹೆಣ್ಣು ತರುವಾಗಲೂ ಸಹ ಜಾತಕ, ಗುಣಗಳನ್ನು ನೋಡಿ ತರುತ್ತಾರೆ. 32 ಗುಣ ಸೇರಿದ ಹೆಣ್ಣನ್ನೇ ತಂದರೂ ಆಕೆ ಮನೆ ಬೇರೆ ಮಾಡಬಹುದು ಅಥವಾ ಆಕೆಯ ಪತಿಯೇ ಸಾವನ್ನಪ್ಪಬಹುದು. ಹಾಗೆಯೇ ನಾವು ಸಹ ಸ್ವಾಮೀಜಿ ಮೇಲೆ ಸಾಕಷ್ಟು ನಿರೀಕ್ಷೆಯಿಂದ ಪೀಠಕ್ಕೆ ಕರೆ ತಂದೆವು. ಈಗ ತಾವೇ ಉಚ್ಚಾಟನೆಗೊಳ್ಳುವ ಸ್ಥಿತಿ ತಂದುಕೊಂಡಿದ್ದಾರೆ. ಗೌರವಯುತವಾಗಿ ಮನವಿ ಮಾಡುತ್ತಿದ್ದೇವೆ. ಸ್ವಾಮೀಜಿ ಮಠ ತೊರೆಯಬೇಕು. ನಮ್ಮದು ಪುರಾತನ ಮಠವಲ್ಲ. 2008ರಲ್ಲಿ ಸ್ಥಾಪಿತ ಮಠ ಎಂದು ಬಿ.ಸಿ.ಉಮಾಪತಿ ಹೇಳಿದ್ದಾರೆ.

PREV
Read more Articles on
click me!

Recommended Stories

ಬಿಎಂಟಿಸಿ ಸ್ಮಾರ್ಟ್‌ ಟಿಕೆಟಿಂಗ್‌ ವ್ಯವಸ್ಥೆ ನಿಗಾಕ್ಕೆ ಸ್ವತಂತ್ರ ಸಂಸ್ಥೆಯ ನೇಮಕ
ಇಂಡಿಯನ್ ಬ್ಯಾಂಕ್‌ನಲ್ಲಿದ್ದ ₹4 ಕೋಟಿ ಚಿನ್ನ ಕಳವು! ಅಸಿಸ್ಟೆಂಟ್ ಮ್ಯಾನೇಜರ್‌ನ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗ್ರಾಹಕರು ಕಂಗಾಲು!