ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅರಣ್ಯವಿದೆ. ಅಷ್ಟೇ ಪ್ರಮಾಣದಲ್ಲಿ ಸರ್ಕಾರಿ ಭೂಮಿಯೂ ಇದೆ. ಇದರಲ್ಲಿ ಎತ್ತೇಚ್ಛವಾದ ಸರ್ಕಾರಿ ಭೂಮಿಯನ್ನು ಜಮೀನ್ದಾರರು, ಭೂಮಾಲೀಕರೇ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.13): ಕೊಡಗು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅರಣ್ಯವಿದೆ. ಅಷ್ಟೇ ಪ್ರಮಾಣದಲ್ಲಿ ಸರ್ಕಾರಿ ಭೂಮಿಯೂ ಇದೆ. ಇದರಲ್ಲಿ ಎತ್ತೇಚ್ಛವಾದ ಸರ್ಕಾರಿ ಭೂಮಿಯನ್ನು ಜಮೀನ್ದಾರರು, ಭೂಮಾಲೀಕರೇ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಇದೀಗ ಈ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಜಮೀನ್ದಾರರು, ಭೂಮಾಲಿಕರಿಗೆ 30 ವರ್ಷಗಳ ಅವಧಿಯವರೆಗೆ ಗುತ್ತಿಗೆ ನೀಡಲು ಮುಂದಾಗಿದೆ. ಇದಕ್ಕೆ ಜಿಲ್ಲೆಯ ದಲಿತ, ಹಿಂದುಳಿದ ಮತ್ತು ಆದಿವಾಸಿಗಳ ಬುಡಕಟ್ಟು ಜನರು ಜೊತೆಗೆ ಪ್ರಗತಿಪರರು ಸರ್ಕಾರ ಈ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಾಲಸುಬ್ರಹ್ಮಣ್ಯಂ ವರದಿ ಪ್ರಕಾರ ಜಿಲ್ಲೆಯಲ್ಲಿ 30 ಸಾವಿರ ಎಕರೆ ಭೂಮಿಯನ್ನು ಉಳ್ಳವರೇ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ.
ಆದರೆ ಇದೇ ವೇಳೆಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 1 ಲಕ್ಷ ಜನರು ಸ್ವಂತ ಮನೆಯಿಲ್ಲದೆ, ಕನಿಷ್ಠ ಒಂದು ನಿವೇಶನ ಇಲ್ಲದೆ ಇರುವವರು ಬದುಕು ದೂಡುತ್ತಿದ್ದಾರೆ. ಕೊಡಗು ಜಿಲ್ಲಾಡಳಿತವೇ ನೀಡಿರುವ ಅಂಕಿ ಅಂಶಗಳ ಪ್ರಕಾರ ದೊಡ್ಡ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಬದುಕುತ್ತಾ, ಕಾಫಿ ತೋಟಗಳಲ್ಲಿ ಕೂಲಿ ಮಾಡುತ್ತಾ ಬದುಕು ನಡೆಸುತ್ತಿದ್ದಾರೆ. ಅವರೆಲ್ಲರು ಒಂದು ಮನೆ ಬೇಕು ಎಂದು ಸಾಕಷ್ಟು ಹೋರಾಟಗಳು ನಡೆದಿವೆ. ಆದರೂ ಇವರಿಗೆ ಮನೆ ಅಥವಾ ನಿವೇಶನ ಕೊಡಬೇಕಾಗಿರುವ ಸರ್ಕಾರ ಭೂಮಿ ಇರುವವರಿಗೆ ಹತ್ತಾರು ಎಕರೆ ಭೂಮಿಯನ್ನು ಗುತ್ತಿಗೆ ನೀಡಲು ಹೊರಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಇದೇ 17 ರಂದು ದಲಿತ, ಹಿಂದುಳಿದ ಮತ್ತು ಆದಿವಾಸಿ ಬುಡಕಟ್ಟು ಜನರು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕನಿಷ್ಠ ಎರಡು ಸಾವಿರ ಜನರು ಸೇರಿ ತೀವ್ರತರ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಬಗ್ಗದೆ ಸರ್ಕಾರ ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳದೇ ಇದ್ದರೆ ಮಡಿಕೇರಿಯಿಂದ ಬೆಂಗಳೂರಿನಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರ ಮನೆಯವರೆಗೆ ಪಾದಯಾತ್ರೆಗೂ ಚಿಂತನೆ ಮಾಡಿದ್ದೇವೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಪಾದಯಾತ್ರೆ ಮಾಡುವುದು ಖಚಿತ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಮಾತ್ರ ಈಗಾಗಲೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರು ಹಲವು ವರ್ಷಗಳಿಂದ ಭೂಮಿಗಳಲ್ಲಿ ಉಳುವೆ ಮಾಡಿ ಕಾಫಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದಿದ್ದಾರೆ.
ಸಿಎಂ ಸ್ಥಾನ ಹಂಚಿಕೆ ವಿಷಯ ಹೈಕಮಾಂಡ್ ಬಳಿ ಕೇಳಿ: ಸಚಿವ ಸತೀಶ್ ಜಾರಕಿಹೊಳಿ
ಈಗಾಗಲೇ ಒತ್ತುವರಿ ಮಾಡಿಕೊಂಡಿರುವವರಿಗೆ ಕೊಡುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಿದ್ದಾರೆ. ಇದನ್ನು ನಮ್ಮ ಶಾಸಕರು ಚಿಂತಿಸಿ ಸರ್ಕಾರದ ಗಮನಕ್ಕೆ ತರಲಿ. ಹಾಗೆಂದ ಮಾತ್ರಕ್ಕೆ ಬಡವರಿಗೆ ನಿವೇಶನ ಅಥವಾ ಮನೆಗಳನ್ನು ನೀಡಬಾರದು ಎಂದೇನಿಲ್ಲ. ಅವರಿಗೆ ಮನೆಗಳನ್ನು ನೀಡುವುದು ಒಳ್ಳೆಯದು. ಇದನ್ನು ಕೂಡ ನಮ್ಮ ಶಾಸಕರು ಸರ್ಕಾರ ಗಮನಿಸಲಿ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಉಳ್ಳವರೇ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿದಾರರಿಗೆ ಗುತ್ತಿಗೆ ನೀಡಲು ಹೊರಟಿರುವುದು ಸರ್ಕಾರದ ಬಡಜನ ವಿರೋಧಿ ನೀತಿ ಇದು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.