ಸೇವಾ ಮನೋಭಾವದಿಂದ ಸಂಘಟನೆ ಕಟ್ಟಿ ಬೆಳೆಸಬೇಕು: ಸಿ.ಟಿ.ರವಿ

Kannadaprabha News   | Kannada Prabha
Published : Jun 06, 2025, 11:12 PM IST
CT Ravi

ಸಾರಾಂಶ

ಪ್ರಾಮಾಣಿಕತೆ, ನಿಸ್ವಾರ್ಥ ಗುಣ ಹಾಗೂ ಸೇವಾ ಮನೋಭಾವದಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದಾಗ ಮಾತ್ರ ಸಮಾಜದಲ್ಲಿ ಪರಿಪೂರ್ಣವಾಗಿ ಬೇರೂರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು (ಜೂ.06): ಪ್ರಾಮಾಣಿಕತೆ, ನಿಸ್ವಾರ್ಥ ಗುಣ ಹಾಗೂ ಸೇವಾ ಮನೋಭಾವದಿಂದ ಸಂಘಟನೆಯನ್ನು ಕಟ್ಟಿ ಬೆಳೆಸಿದಾಗ ಮಾತ್ರ ಸಮಾಜದಲ್ಲಿ ಪರಿಪೂರ್ಣವಾಗಿ ಬೇರೂರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂಘಟನೆಗಳಲ್ಲಿ ಸ್ವಾರ್ಥ ನುಸುಳಿದರೆ, ಅಹಂಗೆ ಅವಕಾಶ ನೀಡಿದರೆ, ಒಳಗಿರುವವರ ಪ್ರತಿಷ್ಟೆಗೆ ವೇದಿಕೆಯಾದರೆ ಬಹುಕಾಲ ಉಳಿಗಾಲವಿಲ್ಲ. ಹೀಗಾಗಿ ಸಂಘಟನೆ ನೇತೃತ್ವದ ರೂವಾರಿಗಳು ನಿಸ್ವಾರ್ಥದಿಂದ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಟ್ಯಾಕ್ಸಿ ಸಂಘಟನೆ ಅಧ್ಯಕ್ಷರು, ಚಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ನೆರವಿಗೆ ಧಾವಿಸಬೇಕು ಎಂದು ಸಲಹೆ ಮಾಡಿದರು.

ನದಿಗಳು ಎಂದಿಗೂ ದೊಡ್ಡ ಪ್ರವಾಹದಿಂದ ಹುಟ್ಟುವುದಿಲ್ಲ. ನದಿಗಳ ಉಗಮ ಸ್ಥಾನವನ್ನು ಗಮನಿಸಿರ ಬಹುದು. ಸಣ್ಣ ಸಣ್ಣ ತೊರೆಗಳಿಂದ ಹೊಳೆಯಾಗಿ, ನದಿಗಳಾಗುತ್ತವೆ. ಆ ರೀತಿಯಲ್ಲಿ ಇದೀಗ ತೊರೆಗಳಾಗಿ ಉಗಮಿಸಿರುವ ಟ್ಯಾಕ್ಸಿ ಚಾಲಕರ ಸಂಘಟನೆಗೆ ಹಲವರ ಕೈಜೋಡಣೆಯಿಂದ ದೊಡ್ಡ ನದಿಗಳಾಗಿ ಸಾಮರ್ಥ್ಯ ವಿಸ್ತರಿಸಬೇಕು ಎಂದು ತಿಳಿಸಿದರು. ಪ್ರಸ್ತುತ ಟ್ಯಾಕ್ಸಿ ಚಾಲಕರೊಂದಿಗೆ ಸಂಕಷ್ಟದ ಸಮಯ ಹಾಗೂ ಒಳ್ಳೆಯ ಕೆಲಸಕ್ಕೆ ಮನೆಮಗನಂತೆ ಸದಾ ನಿಮ್ಮೊಂದಿಗೆ ನಿಲ್ಲಲು ಸಿದ್ಧ. ಸಂಘಟನೆ ಪದಾಧಿಕಾರಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಸಂಘಟನೆ ಬಲಿಷ್ಟಗೊಳಿಸುವಲ್ಲಿ ಹೆಜ್ಜೆ ಹಾಕುವ ಜೊತೆಗೆ ಸಾರಿಗೆ ಇಲಾಖೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.

ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆ ರಾಜ್ಯಾಧ್ಯಕ್ಷ ಎಚ್.ಕೆ.ಪ್ರಕಾಶ್ ಮಾತನಾಡಿ, ರಾಜ್ಯದ ಚಾಲಕರು ಹೊರ ರಾಜ್ಯ ಗಳಲ್ಲಿ ಬ್ರೇಕ್‌ ಡೌನ್ ಅಥವಾ ಅಂಗವೈಫಲ್ಯತೆಯಾದಲ್ಲಿ ವೇದಿಕೆಯಿಂದ ಸಹಾಯಧನ ಕಲ್ಪಿಸುವ ಗುರಿ ಹೊಂದ ಲಾಗಿದೆ. ಚಾಲಕರ ಕುಟುಂಬಕ್ಕೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ ಆಯೋಜಿಸಿ ಚಾಲಕರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಲಾಗುವುದು ಎಂದರು. ಪ್ರಸ್ತುತ ರಾಜ್ಯದಲ್ಲಿ 270 ಕ್ಕೂ ಹೆಚ್ಚು ಸದಸ್ಯರು ನೋಂದಣಿಯಾಗಿದೆ. ಈ ಪೈಕಿ ಜಿಲ್ಲೆಯಲ್ಲಿ 110 ಚಾಲಕರು ವೇದಿಕೆಯಲ್ಲಿ ಸದಸ್ಯತ್ವ ಹೊಂದಿದ್ದಾರೆ. ಜಿಲ್ಲೆಯಿಂದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಮುಂದಿನ ದಿನಗಳಲ್ಲಿ ಮಂಡ್ಯ, ಶಿವ ಮೊಗ್ಗ ಜಿಲ್ಲೆಗಳಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್‌ಟಿಒ ಅಧಿಕಾರಿ ನರಸೇಗೌಡ, ಚಂದ್ರಕಲಾ, ವೇದಿಕೆ ರಾಜ್ಯ ಗೌರವಾಧ್ಯಕ್ಷ ರಾಜು, ಉಪಾಧ್ಯಕ್ಷ ಸಂಗಪ್ಪ ಬಾಗಲಕೋಟೆ, ಪ್ರಧಾನ ಕಾರ್ಯದರ್ಶಿ ಇ.ಗಿರೀಶ್, ಜಂಟಿ ಕಾರ್ಯದರ್ಶಿ ರಾಜ್‌ಕುಮಾರ್, ಖಜಾಂಚಿ ನಾಗ ರಾಜು, ಸಂಘಟನಾ ಕಾರ್ಯದರ್ಶಿ ಯೋಗೇಶ್, ಸಹ ಸಂಘಟನಾ ಕರ‍್ಯದರ್ಶಿ ರಾಜು ಹಾಗೂ ಚಾಲಕರು ಉಪಸ್ಥಿತರಿದ್ದರು.5 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಗುರುವಾರ ನಡೆದ ಕರ್ನಾಟಕ ಶ್ರಮಿಕ ಟ್ಯಾಕ್ಸಿ ಚಾಲಕರ ವೇದಿಕೆಯ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭದಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿದರು.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ