* ಸಿಎಂ ವಿಶೇಷ ಅನುದಾನದಲ್ಲಿ ವಿಪಕ್ಷಗಳ ಕ್ಷೇತ್ರಗಳಿಗೆ ತಾರತಮ್ಯ
* ಯಾದಗಿರಿ, ಸುರಪುರಕ್ಕೆ 10 ಕೋಟಿ, ಗುರುಮಠಕಲ್, ಶಹಾಪುರಕ್ಕೆ 5 ಕೋಟಿ ರು.ಗಳ ಅನುದಾನ
* ಕಳೆದ ವರ್ಷ ಪ್ರವಾಹ ಪೀಡಿತ ಪ್ರದೇಶಗಳಿಗೂ ಪರಿಹಾರ ನೀಡುವಲ್ಲಿ ಬೆಣ್ಣೆ -ಸುಣ್ಣ
ಆನಂದ್ ಎಂ. ಸೌದಿ
ಯಾದಗಿರಿ(ಜು.21): ರಾಜ್ಯದ 130 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ, ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ವಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ.
undefined
ಬಿಜೆಪಿ ಆಡಳಿತದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿದ ಬಿಎಸ್ವೈ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಿಗೆ ತಾರತಮ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿರುವ ಹಾಗೂ ಹಿಂದುಳಿದ ಭಾಗದಲ್ಲಿನ ಕ್ಷೇತ್ರಗಳಿಗೆ ಅನುದಾನದ ಅವಶ್ಯಕತೆಯಿದ್ದರೂ ಸಹ, ಬಿಜೆಪಿಯೇತರ ಶಾಸಕರು ಅಲ್ಲಿರುವುದರಿಂದ ಅಂತಹ ಕ್ಷೇತ್ರಗಳಿಗೆ ಅನುದಾನದ ನೀಡುವಲ್ಲಿ ಬಿಎಸ್ವೈ ಕತ್ತರಿ ಹಾಕಿದ್ದಾರೆಂಬ ಆಕ್ರೋಶ ಅಲ್ಲಿನ ಜನಪ್ರತಿನಿಧಿಗಳಿಂದ ಮೂಡಿಬಂದಿದೆ.ಕಾವೇರಿಯಷ್ಟುಆದ್ಯತೆ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿಲ್ಲ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ
ಎಂದು ಸುರಪುರ ಶಾಸಕ, ಬಿಜೆಪಿಯ ನರಸಿಂಹನಾಯಕ್ (ರಾಜೂಗೌಡ) ಮೊನ್ನೆ ಮೊನ್ನೆಯಷ್ಟೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆಡಳಿತ ಸರ್ಕಾರದಲ್ಲಿನ ಬಿಜೆಪಿ ಶಾಸಕರೇ ಹೀಗೆ ಹೇಳಿದ್ದು ಸ್ವಪಕ್ಷೀಯರ ಮಜುಗರಕ್ಕೆ ಕಾರಣವಾಗಿತ್ತಾದರೂ, ಸತ್ಯ ಕಹಿ ಎನ್ನಿಸುವಂತಿತ್ತು.
ಈಗ, ಅನುದಾನದಲ್ಲಿ ಕತ್ತರಿ ಹಾಕಿರುವುದು ಮತ್ತಷ್ಟೂಪುಷ್ಟಿನೀಡಿದಂತಾಗಿದೆ. ‘ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ’ ಯಾದಗಿರಿ ಜಿಲ್ಲೆಯ ಗುರುಮಠಕಲ್ ಹಾಗೂ ಶಹಾಪುರ ಕ್ಷೇತ್ರಗಳಿಗೆ 5 ಕೋಟಿ ರು.ಗಳ ಅನುದಾನ ಸಿಕ್ಕರೆ, ಸುರಪುರ ಹಾಗೂ ಯಾದಗಿರಿಗೆ 10 ಕೋಟಿ ರು.ಗಳ ನೀಡಲಾಗಿದೆ.
ಗುರುಮಠಕಲ್ ಕ್ಷೇತ್ರವನ್ನು ಜೆಡಿಎಸ್‌ನ ನಾಗನಗೌಡ ಕಂದಕೂರ ಪ್ರತಿನಿಧಿಸುತ್ತಿದ್ದರೆ, ಶಹಾಪುರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಶರಣಬಸಪ್ಪಗೌಡ ದರ್ಶನಾಪುರ ಪ್ರತಿನಿಧಿಸುತ್ತಿದ್ದಾರೆ. ‘ಆಪರೇಶನ್ ಕಮಲ’ ಸಂದರ್ಭದಲ್ಲಿ, ಬಿಎಎಸ್ವೈ ಅವರನ್ನು ಆಡಿಯೋ ಟೇಪ್ ವಿವಾದದಲ್ಲಿ ಸಿಲುಕಿಸಿದ್ದ ಕಂದಕೂರು ಕ್ಷೇತ್ರಕ್ಕೆ ಸೇಡಿನ ಭಾವನೆ ಇದಾಗಿದೆ ಎನ್ನಲಾಗಿದ್ದರೆ, ಶಹಾಪುರದಲ್ಲಿ ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್‌ನ ದರ್ಶನಾಪುರ ವಿರುದ್ಧ ಹಗೆ ಅನ್ನೋದು ಅಲ್ಲಿನ ಅಂಬೋಣ.
ಬಿಜೆಪಿ ಸರ್ಕಾರದಿಂದ ದಲಿತರಿಗೆ ಅತಿಹೆಚ್ಚು ಅನುದಾನ : ಸಿ.ಟಿ.ರವಿ
ಕಳೆದ ವರ್ಷ ಪ್ರವಾಹ ಪರಿಹಾರ ಇನ್ನೂ ಬಂದಿಲ್ಲ:
ಅನುದಾನ ತಾರತಮ್ಯ ಹೊಸದೇನಲ್ಲ, ಕಳೆದೆರಡು ವರ್ಷಗಳಿಂದ ಬಿಜೆಪಿಯೇತರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಸರ್ಕಾರ ಮೌನ ವಹಿಸಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಹಾಪುರ ಶಾಸಕ ದರ್ಶನಾಪುರ, ಕಳೆದ ವರ್ಷದ ಪ್ರವಾಹ ಪೀಡಿತ ವಿಚಾರದಲ್ಲಿಯೂ ನಮ್ಮ ಕ್ಷೇತ್ರಗಳಿಗೆ ಹಣ ನೀಡಿಲ್ಲ ಎಂದು ಕಿಡಿ ಕಾರಿದರು.
ಅತೀವೃಷ್ಟಿ, ಅನಾವೃಷ್ಟಿಕಾರಣಗಳಿಂದಾಗಿ ಶಹಾಪುರ ತಾಲೂಕು ನೂರಾರು ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಕುಟುಂಬಕ್ಕೆ ಪರಿಹಾರ ನೀಡುವಲ್ಲಿಯೂ ಸರ್ಕಾರ ಮಹತ್ವ ನೀಡುತ್ತಿಲ್ಲವಲ್ಲದೆ, ರೈತರ ಆತ್ಮಹತ್ಯೆಯನ್ನು ತಡೆಗಟ್ಟಬೇಕೆಂಬ, ಅವರಿಗೆ ನೆರವಾಗುವ ಯಾವ ಯೋಜನೆಗಳೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಲೋಕೋಪಯೋಗಿ, ಸಮಾಜ ಕಲ್ಯಾಣ, ಆರ್ಡಿಪಿಆರ್, ನಗರಾಭಿವೃದ್ಧಿ, ಅಲ್ಪಸಂಖ್ಯಾತ, ನೀರಾವರಿ, ಸಣ್ಣ ನೀರಾವರಿ ಮುಂತಾದ ಯೋಜನೆಗಳಿಗೆ ನಯೆಪೈಸೆಯೂ ಬಿಡುಗಡೆಯಾಗಿಲ್ಲ ಎಂದರು.
ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಗೆ ತುತ್ತೂರಿ ಊದುತ್ತಿರುವಂತಿರುವ ಬಿಎಸ್ವೈ ಸರ್ಕಾರ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಪ್ರತಿನಿಧಿಸುವ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಕತ್ತರಿ ಹಾಕುತ್ತಿದೆ ಎಂಬ ಆರೋಪಗಳಿಗೆ ಬಿಎಸ್ವೈ ಪ್ರತಿಕ್ರಿಯಿಸಬೇಕಿದೆ.
ಗುರುಮಠಕಲ್ ಕ್ಷೇತ್ರವನ್ನು ಮೊದಲಿನಿಂದಲೂ ಕಡೆಗೆಣಿಸುತ್ತಿರುವಂತಿರುವ ಬಿಎಸ್ವೈ, ಇಲ್ಲಿ ಅನುದಾನ ಬಿಡುಗಡೆಗೆ ಆದ್ಯತೆ ನೀಡುತ್ತಿಲ್ಲ. ಎಚ್ಡಿಕೆ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಕಾಮಗಾರಿಗಳನ್ನೇ ವಾಪಸ್ ಪಡೆದ ಸರ್ಕಾರವಿದು. ತಮ್ಮ ಕ್ಷೇತ್ರಕ್ಕೆ ಅನುದಾನ ಕಟ್ ಮಾಡಿ ಬಿಎಸ್ವೈ ಹಗೆ ಸಾಧಿಸುತ್ತಿದ್ದಾರೆ ಎಂದು ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ತಿಳಿಸಿದ್ದಾರೆ.
ಎಸ್ಸಿಎಸ್ಪಿ- ಟಿಎಸ್ಪಿ ಅನುದಾನದ ವಿಚಾರದಲ್ಲಿ ಜನಸಂಖ್ಯೆಯಿಲ್ಲದ ಯಾದಗಿರಿ ಹಾಗೂ ಸುರಪುರಕ್ಕೆ 4.5 ಕೋಟಿ ಅನುದಾನ ನೀಡಿದರೆ, ಗುರುಮಠಕಲ್ ಹಾಗೂ ಶಹಾಪುರಕ್ಕೆ 1.5 ಕೋಟಿ ರು.ಗಳ ಅನುದಾನ ನೀಡಿದೆ. ಈ ತಾರತಮ್ಯದಿಂದಾಗಿ ಹಿಂದುಳಿದ ಕ್ಷೇತ್ರಗಳ ಪಟ್ಟಿಯಲ್ಲಿನ ಭಾಗಗಳ ಅಭಿವೃದ್ಧಿಗೆ ಅಡಚಣೆಯುಂಟಾಗಿದೆ ಎಂದು ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.
ಕಾವೇರಿಯಷ್ಟುಆದ್ಯತೆ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಯೋಜನೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿಲ್ಲ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಸುರಪುರ ಬಿಜೆಪಿ ಶಾಸಕ ನರಸಿಂಹ ನಾಯಕ್ ತಿಳಿಸಿದ್ದಾರೆ.