
ಮಂಡ್ಯ (ನ.12): ಒಂದು ಹಳ್ಳಿಯಲ್ಲಿ ರಸ್ತೆಯಿದ್ದರೂ ಅಭಿವೃದ್ಧಿಪಡಿಸಿಲ್ಲ, ಮತ್ತೊಂದು ಹಳ್ಳಿಯಲ್ಲಿ ಓಡಾಡುವುದಕ್ಕೆ ರಸ್ತೆಯೇ ಇಲ್ಲ. ಗದ್ದೆಬಯಲು, ಹಳ್ಳ-ಕೊಳ್ಳಗಳೇ ಶಾಲಾ ಮಕ್ಕಳು ಓಡಾಡುವ ದಾರಿಯಾಗಿದೆ. ಈ ಅವ್ಯವಸ್ಥೆಯನ್ನು ಜನಪ್ರತಿನಿಧಿಗಳು ಕಣ್ತೆರೆದು ನೋಡುತ್ತಿಲ್ಲ, ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಶಾಲೆಗಳಿಗೆ ಹೋಗಿಬರುವ ಮಕ್ಕಳ ಪರಿಸ್ಥಿತಿ ಕೇಳೋರೇ ಇಲ್ಲದಂತಾಗಿದೆ..!
ಗ್ರಾಮಕ್ಕಿದ್ದ (Village) ರಸ್ತೆಯನ್ನು (Road) ವ್ಯಕ್ತಿಯೊಬ್ಬ ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದರಿಂದ ತಾಲೂಕಿನ ನೊದೆಕೊಪ್ಪಲು ಗ್ರಾಮದ ಸರ್ಕಾರಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಗದ್ದೆಬಯಲು, ಹಳ್ಳಕೊಳ್ಳಗಳೇ ದಾರಿಯಾಗಿದೆ. ನಿತ್ಯ ವಿದ್ಯಾರ್ಥಿಗಳು ಶೂ ಮತ್ತು ಚಪ್ಪಲಿಗಳನ್ನು ಬರಿಗೈಯಲ್ಲಿಡಿದುಕೊಂಡು ಪೊದೆಗಳ ನಡುವೆ ಹಾದುಹೋಗುವ ದುಸ್ಥಿತಿ ಎದುರಾಗಿದೆ.
ರಸ್ತೆ ಒತ್ತುವರಿ:
ಗ್ರಾಮದ ಸರ್ವೇ ನಂ.6 ಮತ್ತು 7ರ ನಡುವೆ ಇರುವ ಸುಮಾರು 110 ಮೀಟರ್ ಉದ್ದ ಹಾಗೂ 82 ಅಡಿ ಅಗಲದ ರಸ್ತೆಯನ್ನು ಶಿವಶಂಕರ್ ಎಂಬಾತ ತಮ್ಮ ಜಮೀನಿಗೆ ಸಂಪೂರ್ಣವಾಗಿ ಸೇರಿಸಿಕೊಂಡು ರಸ್ತೆಯನ್ನು ಬಂದ್ ಮಾಡಿದ್ದಾನೆ. ಇದರಿಂದ ಊರಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಒತ್ತುವರಿ ರಸ್ತೆಯನ್ನು ಸಂಪೂರ್ಣವಾಗಿ ಬಿಡಿಸಿಕೊಟ್ಟು ಶಾಲೆಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಗ್ರಾಮಸ್ಥರು, ಶಾಲಾ ಮಕ್ಕಳಿಗೆ ಅನಾನುಕೂಲ:
ರಸ್ತೆಯಿಲ್ಲದೇ ಅಂಗನವಾಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಮಾರು 60ಕ್ಕೂ ಹೆಚ್ಚು ಮಕ್ಕಳಿಗೆ ಅನಾನುಕೂಲವಾಗಿದೆ. ಕಳೆದ 20 ವರ್ಷಗಳಿಂದಲೂ ಇದೇ ಸಮಸ್ಯೆ ಇದ್ದು, ಗ್ರಾಮದ ಮುಖಂಡರು ಒತ್ತುವರಿಯಾಗಿರುವ ರಸ್ತೆ ಕೇಳುವುದಕ್ಕೂ ಭಯಪಡುವ ಸ್ಥಿತಿ ಉಂಟಾಗಿದೆ. ಈ ವಿಷಯವನ್ನು ಈಗಾಗಲೇ ತಹಸೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಅವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒತ್ತುವರಿ ತೆರವು ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದರೆ, ಅದಿನ್ನೂ ಕಾರ್ಯಗತವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರ್ಜಿ ಕೊಟ್ಟರೂ ಪ್ರಯೋಜನವಿಲ್ಲ:
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಎಂಬ ಕಾರ್ಯಕ್ರಮದಲ್ಲಿಯೂ ಗ್ರಾಮಸ್ಥರು ಅರ್ಜಿ ನೀಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ತಾಲೂಕು ಸರ್ವೇಯರ್ ಅಳತೆ ಮಾಡಲು ಬಂದಾಗ ಶಿವಶಂಕರ್ ಜಗಳಮಾಡಿ ಕಳುಹಿಸಿದ್ದಾರೆಂದು ದೂರಲಾಗಿದೆ. ಹಲವು ರಾಜಿ-ಸಂಧಾನಗಳನ್ನು ಮಾಡಿದರೂ ಸಹ ಯಾವುದೇ ದಾಖಲೆಯನ್ನು ಇಟ್ಟುಕೊಳ್ಳದೇ ಪ್ರಭಾವಿಗಳ ಬೆಂಬಲದಿಂದ ಗ್ರಾಮದ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ತಕ್ಷಣವೇ ರಸ್ತೆಯ ಒತ್ತುವರಿ ತೆರವು ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಗ್ರಾಮಸ್ಥರು ಒಟ್ಟುಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಎಂ.ಎನ್.ಬಲರಾಮು ಎಚ್ಚರಿಕೆ ನೀಡಿದರು.
ನೊದೆಕೊಪ್ಪಲು ಗ್ರಾಮದ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಒತ್ತುವರಿ ರಸ್ತೆ ಬಿಡಿಸಿಕೊಡುವ ಉದ್ದೇಶದಿಂದ ಗ್ರಾಮಸ್ಥರು ಮನವಿ ಮಾಡಿದ್ದಾರೆ. ರೈತರು ಹಿಡುವಳಿ ಮಾಡುತ್ತಿರುವ ಜಮೀನಿನಲ್ಲಿ ಏಕಾಏಕಿ ಹೋಗಿ ತೆರವು ಕಾರ್ಯಾಚರಣೆ ಮಾಡಿಸಲು ದಾಖಲಾತಿಗಳು ಬೇಕಿದೆ. ಅದರಂತೆ ಸರ್ವೇಯರ್‌ಗಳಿಗೂ ತಿಳಿಸಿದ್ದೇನೆ. ದಾಖಲಾತಿ ಸಮೇತ ರಸ್ತೆ ನಕ್ಷೆ ತೆಗೆದುಕೊಂಡು ಹೋಗಿ ತೆರವು ಮಾಡಿಸುತ್ತೇನೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಡುತ್ತೇನೆ.
- ಕುಂಞ ಅಹಮದ್, ತಹಶೀಲ್ದಾರ್, ಮಂಡ್ಯ
ಸವಾಲಾದ ರಕ್ಕಸ ಗುಂಡಿಗಳು
ಮಂಡ್ಯ ಮಂಜುನಾಥ
ಮಂಡ್ಯ(ಅ.22): ನಗರ ವ್ಯಾಪ್ತಿಯ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದು ದಶಕಗಳಾಗಿವೆ. ಮುಖ್ಯ ರಸ್ತೆಯಿಂದ ಸಣ್ಣ ರಸ್ತೆಯವರೆಗೂ ಸಂಪೂರ್ಣವಾಗಿ ಹಾಳಾಗಿಹೋಗಿದೆ. ರಕ್ಕಸ ಗುಂಡಿಗಳು ಒಂದೆಡೆ ಸವಾರರಿಗೆ ಸವಾಲಾಗಿ ಪರಿಣಮಿಸಿದರೆ, ಮತ್ತೊಮ್ಮೆ ಮೃತ್ಯುಕೂಪದಂತೆ ಗೋಚರಿಸುತ್ತಿವೆ. ಇಷ್ಟಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ನಗರಾಭಿವೃದ್ಧಿ ಬಗ್ಗೆ ಯಾರೊಬ್ಬರಿಗೂ ಆಲೋಚನೆಯೂ ಇಲ್ಲ, ಆಸಕ್ತಿಯೂ ಇಲ್ಲ. ದಶಕದಿಂದ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಹಾಳಾದ ರಸ್ತೆಗಳ ಕಡೆ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ. ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಮಗೂ ರಸ್ತೆಗಳಿಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ನಗರದ ಯಾವುದೇ ರಸ್ತೆಗಿಳಿದರೂ ಹಳ್ಳ-ಗುಂಡಿಗಳದ್ದೇ ಕಾರು-ಬಾರು. ಮಳೆ ಹೊಯ್ದರಂತೂ ರಸ್ತೆ ಯಾವುದು, ಗುಂಡಿ ಯಾವುದು ಎಂದೇ ಕಾಣುವುದಿಲ್ಲ. ಇದರ ನಡುವೆಯೂ ರಸ್ತೆಗಳನ್ನು ಬಗೆದು ಹಾಳುವ ಪ್ರಕ್ರಿಯೆಯಂತೂ ಕೊನೆಗೊಂಡಿಲ್ಲ. ಹಾಳಾಗಿರುವ ರಸ್ತೆಗಳ ಸುಧಾರಣೆ ಯಾವಾಗ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
Mandya : ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ಇದೆ : ಮತ್ತೆ ಚುನಾವಣೆ ಸ್ಪರ್ಧೆ
ನಗರ ಪ್ರದಕ್ಷಿಣೆಗೆ ಪುರುಸೊತ್ತಿಲ್ಲ:
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ನಗರ ಪ್ರದಕ್ಷಿಣೆ ಹಾಕುವುದಕ್ಕೆ ಪುರುಸೊತ್ತೇ ಇಲ್ಲ. ಸದಾಕಾಲ ಸಭೆಗಳನ್ನು ನಡೆಸುವುದರಲ್ಲೇ ನಿರತರಾಗಿದ್ದಾರೆಯೇ ವಿನಃ ನಗರದ ರಸ್ತೆಗಳ ಪರಿಸ್ಥಿತಿ ಹೇಗಿದೆ?, ಜನರ ಸಂಚಾರ ವ್ಯವಸ್ಥೆ ಹೇಗಿದೆ?, ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುರ್ತಾಗಿ ನಡೆಸಬೇಕಾಗಿರುವ ರಸ್ತೆ ಕಾಮಗಾರಿಗಳು ಯಾವುವು ಎಂಬ ಬಗ್ಗೆ ವಿವೇಚಿಸುವ, ವೀಕ್ಷಿಸುವ, ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಇಲ್ಲದಿರುವುದೇ ನಗರದ ರಸ್ತೆಗಳು ದಶಕಗಳಿಂದ ಗುಂಡಿಗಳಿಂದ ಆವೃತವಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ.