ರಾಜ್ಯದಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈರುಳ್ಳಿ ಕೊರತೆ ನೀಗಿಸಲು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇತ್ತ ಕಾರವಾರ ಮಾರುಕಟ್ಟೆಗೂ ಟರ್ಕಿ ಈರುಳ್ಳಿ ಬಂದಿದ್ದು, ಆದ್ರೆ ಇದನ್ನು ತಿರು ನೋಡೋರು ಇಲ್ಲದಂತಾಗಿದೆ.
ಕಾರವಾರ [ಡಿ.16]: ಟರ್ಕಿ ಈರುಳ್ಳಿ ಭಾನುವಾರ ಕಾರವಾರ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಆದರೆ ಗ್ರಾಹಕರು ಮಾತ್ರ ಟರ್ಕಿ ಈರುಳ್ಳಿ ಖರೀದಿಗೆ ಮುಂದಾಗುತ್ತಿಲ್ಲ. ಟರ್ಕಿ ಈರುಳ್ಳಿ ಪ್ರತಿ ಕಿಗ್ರಾಂಗೆ 160 ರು. ಇದೆ. ಬೆಳಗಾವಿಯಿಂದ ಶೌಕತ್ ಎನ್ನುವ ತರಕಾರಿ ಮಾರಾಟಗಾರರು 4 ಕ್ವಿಂಟಲ್‌ಗೂ ಹೆಚ್ಚು ಉಳ್ಳಾಗಡ್ಡೆಯನ್ನು ಮಾರಾಟಕ್ಕೆ ತಂದಿದ್ದಾರೆ. ಆದರೆ ಭಾನುವಾರವಿಡಿ ಕೇವಲ ಒಂದು ಕ್ವಿಂಟಲ್‌ನಷ್ಟು ಈರುಳ್ಳಿಯೂ ಮಾರಾಟವಾಗಿಲ್ಲ.
ಟರ್ಕಿ ಈರುಳ್ಳಿ ಗಾತ್ರದಲ್ಲಿ ದೊಡ್ಡದಾಗಿದೆ. ಆದರೆ ರುಚಿ ಮಾತ್ರ ಸಪ್ಪೆ ಎಂದು ಗ್ರಾಹಕರು ಅಭಿಪ್ರಾಯಪಡುತ್ತಿದ್ದಾರೆ. ಜತೆಗೆ 120 - 140 ರು.ದರದಲ್ಲಿ ಉತ್ತರ ಕರ್ನಾಟಕದ ಈರುಳ್ಳಿಯೆ ದೊರೆಯುವಾಗ ಅದಕ್ಕಿಂತ 20 - 30 ಹೆಚ್ಚು ಹಣ ನೀಡಿ ಟರ್ಕಿ ಈರುಳ್ಳಿಯನ್ನು ಯಾಕೆ ಕೊಳ್ಳಬೇಕು ಎಂದು ಗ್ರಾಹಕರು ಅಭಿಪ್ರಾಯಪಡುತ್ತಿದ್ದಾರೆ. ಭಾನುವಾರ ನಗರದಲ್ಲಿ ಸಂತೆ. ಉತ್ತರ ಕರ್ನಾಟಕದ ಈರುಳ್ಳಿಯೂ ಮಾರಾಟಕ್ಕೆ ಬಂದಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಮತ್ತಿತರ ಕಡೆಗಳಿಂದ ಕಾಯಿಪಲ್ಲೆ ಮಾರಾಟಗಾರರು ಈರುಳ್ಳಿ ಹೊತ್ತು ತಂದಿದ್ದಾರೆ. ಆದರೆ 120 - 140 ರು. ಇರುವುದರಿಂದ ಗ್ರಾಹಕರು ಈರುಳ್ಳಿ ಖರೀದಿಗೆ ಮುಂದಾಗುತ್ತಿಲ್ಲ. ತೀರ ಅಗತ್ಯ ಇದ್ದವರು ಹಾಗೂ ಧನಿಕರು ಮಾತ್ರ ಈರುಳ್ಳಿ ಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ರೇಟು ಕೇಳಿ ಮುಂದಕ್ಕೆ ಹೋಗುತ್ತಿದ್ದಾರೆ.
undefined
ದಿಢೀರ್ ಭಾರೀ ಕುಸಿತವಾಯ್ತು ಈರುಳ್ಳಿ ಬೆಲೆ : ಈಗೆಷ್ಟು...
ನಗರದ ಗ್ರೀನ್ ಸ್ಟ್ರೀಟ್, ಕೋರ್ಟ್ ರಸ್ತೆ, ಪಿಕಳೆ ರಸ್ತೆಗಳ ಪಕ್ಕದ ಅಲ್ಲಲ್ಲಿ ಈರುಳ್ಳಿ ರಾಶಿ ಹಾಕಿಕೊಂಡು ಮಾರಾಟಗಾರರು ಕುಳಿತಿದ್ದರೂ ಗ್ರಾಹಕರು ಈರುಳ್ಳಿಗೆ ಮುಗಿಬೀಳುತ್ತಿಲ್ಲ. ಅದಕ್ಕೆ ಬದಲಾಗಿ ಬೇರೆ ಬೇರೆ ಕಾಯಿಪಲ್ಲೆಗಳನ್ನೇ ಕೊಂಡೊಯ್ಯುತ್ತಿದ್ದಾರೆ. ಕಳೆದ ಭಾನುವಾರದ ಸಂತೆಗಿಂತ ಈರುಳ್ಳಿ ದರದಲ್ಲಿ ಕೊಂಚ ಇಳಿಕೆಯಾದರೂ ಈ ಹಿಂದಿನಂತೆ ಪ್ರತಿ ಕಿಗ್ರಾಂಗೆ 20 - 30 ರು. ಒಂದೆರಡು ವಾರದಲ್ಲಿ ಬಾರದು ಎಂದು ವ್ಯಾಪಾರಸ್ಥರು ಅಭಿಪ್ರಾಯಪಡುತ್ತಿದ್ದಾರೆ. ಮಹಾರಾಷ್ಟ್ರದ ಈರುಳ್ಳಿ ಇನ್ನೂ ಕಾರವಾರ ಮಾರುಕಟ್ಟೆಗೆ ಬಂದಿಲ್ಲ. ಅಲ್ಲಿನ ಈರುಳ್ಳಿ ಬಂದರೆದರದಲ್ಲಿ ಇಳಿಮುಖವಾಗಬಹುದು ಎನ್ನುವುದು ತರಕಾರಿ ಮಾರಾಟಗಾರರ ಅಭಿಪ್ರಾಯ.
ಈಗ ಬಹುತೇಕ ಹೋಟೆಲ್‌ಗಳ ಮೆನುವಿನಿಂದ ಈರುಳ್ಳಿ ಬಳಸುವ ತಿಂಡಿಗಳು ಕಣ್ಮರೆಯಾಗಿವೆ. ಈರುಳ್ಳಿ ದೋಸೆ, ಪಕೋಡಾ ಸಿಗುತ್ತಿಲ್ಲ.ಅಲ್ಲೊಂದು ಇಲ್ಲೊಂದು ಕಡೆ ಸಿಕ್ಕರೂ ದರ ಮಾತ್ರ ಭಾರಿ ದುಬಾರಿ. ಮನೆ ಮನೆಗಳಲ್ಲೂ ಅಡುಗೆ, ತಿಂಡಿಯಲ್ಲಿ ಈರುಳ್ಳಿ ಬಳಕೆ ಸ್ಥಗಿತಗೊಂಡುತಿಂಗಳುಗಳೇ ಆಗಿವೆ.