ನಗರದ ಅಭಿವೃದ್ಧಿಗೆ ಒಂದೇ ಪ್ರಾಧಿಕಾರ?

By Web DeskFirst Published Aug 15, 2019, 8:38 AM IST
Highlights

ಬೆಂಗಳೂರಿನ ಅಭಿವೃದ್ಧಿಗಾಗಿ ಒಂದೇ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಲು ಮುಂದಾಗಿದೆ.

ಬೆಂಗಳೂರು [ಆ.15]:  ವಿವಿಧ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆಯಿಂದ ನಗರದ ಅಭಿವೃದ್ಧಿ ವೇಗ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾದ ಒಂದೇ ಯೋಜನಾ ಪ್ರಾಧಿಕಾರ ರಚಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಲು ಮುಂದಾಗಿದೆ.

ಬೆಂಗಳೂರು ಅಭಿವೃದ್ಧಿ ಕುರಿತು ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸುವ ಶಾಸಕರ ಸಭೆಯಲ್ಲಿ ಕೆಲವರು ನಗರದಲ್ಲಿ ಒಂದೊಂದು ಕಾರ್ಯಗಳಿಗೆ ಒಂದೊಂದು ಸಂಸ್ಥೆಗಳಿವೆ. ಇದರಿಂದ ಅವುಗಳ ನಡುವೆ ಸಮನ್ವಯ ಕೊರತೆಯಿಂದ ನಗರದ ಸರಾಗ ಅಭಿವೃದ್ಧಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಬಿಡಿಎ, ಬಿಎಂಆರ್‌ಡಿಎ, ಬಿಡ್ಲ್ಯುಎಸ್‌ಎಸ್‌ಬಿ ಸೇರಿದಂತೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳನ್ನು ಒಂದೇ ಸೂರಿನಡಿ ತರಲು ಪ್ರತ್ಯೇಕ ಬೆಂಗಳೂರು ಅಭಿವೃದ್ಧಿ ಯೋಜನಾ ಪ್ರಾಧಿಕಾರ ರಚಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪರಿಶೀಲಿಸಿ ಸೂಕ್ತ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ, ಮಾಗಡಿ ರಸ್ತೆಯ ಮೆಟ್ರೋ ಮಾರ್ಗವನ್ನು ತಾವರೆಕೆರೆವರೆಗೆ ವಿಸ್ತರಿಸುವಂತೆ, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹಳೆ ಮದ್ರಾಸು ರಸ್ತೆವರೆಗೂ ಮೆಟ್ರೋ ಮಾರ್ಗ ವಿಸ್ತರಿಸುವಂತೆ ಮನವಿ ಮಾಡಿದರು. ಇನ್ನು ಕೆಲ ಶಾಸಕರು ನಗರದ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಅಲ್ಲಿನ ನಿವಾಸಿಗಳಿಗೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿಕೊಡಬೇಕು. ನಗರದ ಘನತ್ಯಾಜ್ಯ ಸಮಸ್ಯೆ ಶಾಶ್ವತ ಪರಿಹಾರವಾಗಿ ಕಸದಿಂದ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಆರಂಭಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಶಾಸಕ ಎಲ್ಲ ಮನವಿ ಸಲಹೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಬ್‌-ಅರ್ಬನ್‌ ರೈಲು ವ್ಯವಸ್ಥೆ ಅಗತ್ಯವಿದೆ. ಹೊರವರ್ತುಲ ರಸ್ತೆಗೆ ಹಾಗೂ ಪೆರಿಫೆರಲ್ ರಿಂಗ್‌ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಾಹನ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಹಾಗೂ ಉಪನಗರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಅಲ್ಲಿನ ನಿವಾಸಿಗಳಿಗಾಗಿ ಬಹುಮಹಡಿ ವಸತಿ ಸಮುಚ್ಛಯ ಕಲ್ಪಿಸುವ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನಿಸುತ್ತೇನೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ನಮ್ಮ ಮೆಟ್ರೊ ಯೋಜನೆಯ ಮಾರ್ಗವನ್ನು ತಾವರೆಕೆರೆ ಮತ್ತು ಹಳೇ ಮದ್ರಾಸ್‌ ರಸ್ತೆಯವರೆಗೆ ವಿಸ್ತರಿಸಲು ಪರಿಶೀಲಿಸುವುದಾಗಿ ಭರವಸೆ ನೀಡಿದರು ಎಂದು ಗೊತ್ತಾಗಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಕೇವಲ ಕಾವೇರಿ ನದಿ ನೀರಿನ ಮೂಲವನ್ನು ಮಾತ್ರ ಅವಲಂಬಿಸದೇ ಈ ಹಿಂದೆ ರೂಪಿಸಿದ್ದ ಶ್ರೀರಂಗ ಯೋಜನೆಯಡಿ ಹೇಮಾವತಿ, ಮೇಕೆದಾಟು ಹಾಗೂ ಎತ್ತಿನಹೊಳೆಯಿಂದ ನೀರು ತರುವ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದ್ದು ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ, ರಾಜ್ಯ ಸಭಾ ಸದಸ್ಯರಾದ ರಾಜೀವ್‌ ಚಂದ್ರಶೇಖರ್‌, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಅರವಿಂದ ಲಿಂಬಾವಳಿ, ಆರ್‌.ಅಶೋಕ್‌, ವಿ.ಸೋಮಣ್ಣ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೃಷ್ಣಪ್ಪ, ಎಸ್‌.ಆರ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಕೆ.ಪಿ.ನಂಜುಂಡಿ, ಎಸ್‌.ರಘು, ಎಲ್‌.ಎ.ರವಿಸುಬ್ರಹ್ಮಣ್ಯ, ನಂದೀಶ್‌ ರೆಡ್ಡಿ, ಡಾ.ಉದಯ್‌ ಬಿ.ಗರುಡಾಚಾರ್‌, ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಸಭೆಯಲ್ಲಿ ಉಪಸ್ಥಿತರಿದ್ದರು.

click me!