ಮಗು ಮೃತಪಟ್ಟ ಮರುದಿನವೇ ಕೊರೋನಾ ಡ್ಯೂಟಿಗೆ ಹಾಜರ್‌: ಪುತ್ರ ಶೋಕದ ಮಧ್ಯೆಯೂ ಕೆಲಸ..!

By Kannadaprabha NewsFirst Published Apr 19, 2020, 9:15 AM IST
Highlights

ಹುಟ್ಟಿದ ತಿಂಗಳಲ್ಲೇ ಗಂಡು ಮಗು ಕಳೆದುಕೊಂಡ ಆಘಾತ| ಶೋಕದ ಮಧ್ಯೆಯೇ ಕೆಲಸ ನಿಭಾಯಿಸಿದ ಅಧಿಕಾರಿ| ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆಯ ಪರಿಸರ ಎಂಜಿನೀಯರ್ ಹರೀಶ ಸಜ್ಜನಶೆಟ್ಟಿ ಕರ್ತವ್ಯ ನಿಷ್ಠೆ| ಕೊರೋನಾ ಆತಂಕ: ನಗರದ ನೈರ್ಮಲ್ಯ ವ್ಯವಸ್ಥೆಯ ಹತೋಟಿಗೆ ನಿಂತ ಹರೀಶ್|

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಏ.19): ಹೊತ್ತು ಹೆತ್ತ ತಿಂಗಳೊಪ್ಪತ್ತಿನ ಮಗು ಮೃತಪಟ್ಟಾಗ ತಾಯಿ ಕರುಳನ್ನು ಸಮಾಧಾನಿಸುವುದರ ಜೊತೆಗೆ, ಕೊರೋನಾ ಪಿಡುಗಿನಿಂದಾಗಿ ಸಾವಿರಾರು ಜನರ ಆರೋಗ್ಯದಲ್ಲಿ ಏರುಪೇರಾಗಬಾರದು ಎಂಬ ಕಾಳಜಿ ವಹಿಸಿ ಮರುದಿನವೇ ಡ್ಯೂಟಿಗೆ ಹಾಜರಾದ ಆ ಅಧಿಕಾರಿಯ ಕರ್ತವ್ಯ ನಿಷ್ಠೆ ನಿಜಕ್ಕೂ ಕಣ್ಣೀರಾಗಿಸುತ್ತದೆ.

ತಿಂಗಳ ಹಿಂದಷ್ಟೇ ಹೊರಜಗತ್ತಿಗೆ ಕಾಲಿಟ್ಟ ಪುಟ್ಟ ಮಗುವಿನ ಸಾವು ಬರಸಿಡಿಲಿನಂತೆ ಬಂದೆರಗಿದರೂ, ಕೊರೋನಾ ಸೋಂಕು ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ, ನಗರದ ಜನತೆಯ ಆರೋಗ್ಯದ ಕಾಳಜಿಯೂ ಮುಖ್ಯ ಎಂದು ಮಾರನೇ ದಿನವೇ ಕರ್ತವ್ಯಕ್ಕೆ ಹಾಜರಾಗಿ ಅಂದಿನಿಂದ ಇಂದಿನವರೆಗೂ ಪುತ್ರ ಶೋಕದ ಮಧ್ಯೆಯೂ ಡ್ಯೂಟಿ ನಿಭಾಯಿಸುತ್ತಿರುವ ಶಹಾಪುರ ನಗರಸಭೆಯ ಪರಿಸರ ಅಭಿಯಂತರ (ಎನ್ವೈರೋನ್ಮೆಂಟ್ ಎಂಜಿನೀಯರ್) ಹರೀಶ ಸಜ್ಜನಶೆಟ್ಟಿ ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯಕ್ಕೆ ಪಾತ್ರ.

ಮಗಳಿಗೆ ಡೆಂಘೀ ಜ್ವರ ಇದ್ರೂ, ಕೊರೋನಾ ಡ್ಯೂಟಿ ಬಿಡದ ಡಾಕ್ಟರ್‌!

ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕೋನ ಮೇಳಕುಂದಾ ಗ್ರಾಮದ ಹರೀಶ ಸಜ್ಜನಶೆಟ್ಟಿ ಅವರು ಕಳೆದ ಮೂರು ವರ್ಷಗಳಿಂದ ಶಹಾಪುರ ನಗರಸಭೆಯಲ್ಲಿ ಪರಿಸರ ಎಂಜಿನೀಯರ್ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯ ಕುಟುಂಬದ ಕುಡಿ ಹರೀಶ, ಕೆಮಿನಕಲ್ ಎಂಜಿನೀಯರಿಂಗ್ ವಿಷಯದಲ್ಲಿ ಎಂ.ಟೆಕ್. ಸ್ನಾತಕೋತ್ತರ ಮುಗಿಸಿದವರು.

ಹೈದರಾಬಾದಿನ ರೆಡ್ಡೀಸ್ ಲ್ಯಾಬೋರೇಟರೀಸ್ ಸೇರಿದಂತೆ ಮುಂತಾದ ಔಷಧ ಕಂಪನಿಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಕೆಲಸ ಮಾಡಿರುವ ಹರೀಶ್ ಎರಡು ವರ್ಷಗಳ ಹಿಂದೆಯೇ ಮದುವೆಯಾದವರು. ಮಗುವಿನ ನಿರೀಕ್ಷೆಯಲ್ಲಿದ್ದ ಯುವದಂಪತಿಗೆ ಹುಟ್ಟಿದ ತಿಂಗಳೊಪ್ಪತ್ತಿನಲ್ಲೇ ಮಗು ಕಳೆದುಕೊಂಡಾಗ ಆದ ಆಘಾತ ಅಷ್ಟಿಷ್ಟಲ್ಲ.

ಎಲ್ಲೆಡೆ ಕೊರೋನಾ ದುಗುಡ.. ಪ್ರಧಾನಿ ಕರೆ ಮೇರೆಗೆ ಮಾ.22 ರಂದು ಜನತಾ ಕರ್ಫ್ಯೂ, ಇಡೀ ದೇಶವೇ ಸ್ತಬ್ಧಗೊಂಡ ದಿನ.. ಮಗು ಹುಟ್ಟಿದ ಸಂಭ್ರಮದಲ್ಲಿದ್ದ ಹರೀಶ್ ಮನೆಯಲ್ಲಿ ಅವತ್ತು ಸೂತಕದ ಛಾಯೆ. ಕಾಮಾಲೆ ಹಾಗೂ ಕುಂಠಿತಗೊಂಡ ಬೆಳವಣಿಗೆಯಿಂದಾಗಿ ನವಜಾತ ಶಿಶು ಮೃತಪಟ್ಟಿತು. ಎರಡು ದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪತ್ನಿಯ ಸಹೋದರ ಹೈರಾಣಾಗಿದ್ದ ಘಟನೆಯ ಬೆನ್ನಲ್ಲೇ, ಮಗುವಿನ ಸಾವು ಇವರೆಲ್ಲರ ಕುಟುಂಬಕ್ಕೆ ಸಿಡಿಲು ಬಡಿದಂತಾಗಿತ್ತು.

ನಗರದ ಸ್ವಚ್ಛತೆ ಸೇರಿದಂತೆ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವುದು ಕೊರೋನಾ ಆತಂಕದ ಇಂತಹ ಸಮಯದಲ್ಲಿ ಆದ್ಯ ಕರ್ತವ್ಯ. ಇದರಲ್ಲಿ ಲೋಪವಾದರೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದರಿತ ಹರೀಶ್ ರಾತೋರಾತ್ರಿಯೇ ಶಹಾಪುರಕ್ಕೆ ವಾಪಸ್ಸಾದರು.

ಲಾಕ್ ಡೌನ್ ಘೋಷಣೆಯಾದಾಗಿನಿಂದ ಈವರೆಗೆ ಅವರ ಕೆಲಸಕ್ಕೆ ಚ್ಯುತಿ ಬಂದಿಲ್ಲ. ಮಗು ಕಳೆದುಕೊಂಡ ದು:ಖದಲ್ಲಿದ್ದ ಪತ್ನಿಗೆ ಸಮಾಧಾನ ಪಡಿಸುವುದರ ಜೊತೆಗೆ, ನಗರ ನೈರ್ಮಲ್ಯ ಕಾಪಾಡುವ ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಹರೀಶ ಸಜ್ಜನಶೆಟ್ಟಿ ಅಂತಹವರ ಕರ್ತವ್ಯನಿಷ್ಠೆಗೆ ಹ್ಯಾಟ್ಸಾಫ್.
 

click me!