ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕೊರೋನಾ ಲಾಕ್ ಡೌನ್ ರಿಲೀಸ್ ಬಳಿಕ ಸಂಖ್ಯೆ ಏರಿದೆ.
ಕೆ.ಎಂ. ಮಂಜುನಾಥ್
ಬಳ್ಳಾರಿ (ಸೆ.13): ಎರಡು ತಿಂಗಳಿಂದ ಬಿಕೋ ಎನ್ನುತ್ತಿದ್ದ ವಿಶ್ವ ಪಾರಂಪರಿಕ ತಾಣ, ಸ್ಮಾರಕಗಳ ನಗರಿ ಎಂದೇ ಖ್ಯಾತಿಯಾಗಿರುವ ಹಂಪಿಯಲ್ಲಿ ಜನರ ಓಡಾಟ ಮತ್ತೆ ಶುರುವಾಗಿದೆ. ವಾಹನಗಳ ಭರಾಟೆ ಎಂದಿನಂತಾಗಿದೆ. ಹೋಟೆಲ್, ಲಾಡ್ಜ್ ಮತ್ತಿತರ ಸಣ್ಣಪುಟ್ಟವ್ಯವಹಾರಗಳು ಮೈ ಕೊಡವಿ ಎದ್ದು ಕುಳಿತಿವೆ. ವ್ಯಾಪಾರ, ವ್ಯವಹಾರ ನಿಧಾನವಾಗಿ ಮೊದಲಿನಂತೆ ಕುದುರುತ್ತಿದೆ. ಬಿಸಿಲೆನ್ನದೆ ಯುವಕರು, ಮಹಿಳೆಯರು, ಮಕ್ಕಳು, ವೃದ್ಧರ ಸ್ಮಾರಕಗಳ ವೀಕ್ಷಣೆಗಾಗಿನ ಸುತ್ತಾಟ ಚುರುಕಾಗಿದೆ.
ಲಾಕ್‌ಡೌನ್ ವೇಳೆ ಸಂಪೂರ್ಣ ಸ್ತಬ್ಧವಾಗಿದ್ದ ಪ್ರವಾಸಿಗರಿಂದ ದೂರವೇ ಉಳಿದಿದ್ದ ಹಂಪಿಯಲ್ಲೀಗ ಮತ್ತೆ ಲವಲವಿಕೆ ಕಂಡು ಬರುತ್ತಿದೆ. ಜು.7ರಿಂದ ಪ್ರವಾಸಿತಾಣಗಳ ಮೇಲಿನ ಲಾಕ್‌ಡೌನ್ ತೆರವುಗೊಳಿಸುತ್ತಿದ್ದಂತೆಯೇ ಹಂಪಿಗೆ ನಿತ್ಯ ನೂರಾರು ಜನರು ಆಗಮಿಸುತ್ತಿದ್ದು, ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಹಂಪಿಯತ್ತ ಲಗ್ಗೆ ಇಡುತ್ತಿದೆ. ಕಳೆದ ಎರಡು ತಿಂಗಳು ಹಿಂದೆ ಇಡೀ ಹಂಪಿ ರಣರಣ ಎನ್ನುತ್ತಿತ್ತು. ಪ್ರವಾಸಿ ತಾಣಗಳಿದ್ದ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಹಂಪಿಗೆ ಬರುವವರ ಸಂಖ್ಯೆ ಏರಿಕೆ ಕಂಡು ಬರಲಿಲ್ಲ. ಆರಂಭದಲ್ಲಿ ಬೆರಳೆಣಿಕೆಯಲ್ಲಿದ್ದ ಪ್ರವಾಸಿಗರ ಸಂಖ್ಯೆ ಇದೀಗ ನೂರಾರು ಸಂಖ್ಯೆ ದಾಟಿದೆ.
ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆ .
ವಾರಾಂತ್ಯದಲ್ಲಿ 2500ಕ್ಕೂ ಹೆಚ್ಚು ಜನ(ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ದಿನ 5000 ಮಂದಿ ಭೇಟಿ) ಹಂಪಿಯಲ್ಲಿ ಬೀಡು ಬಿಡುತ್ತಿದ್ದಾರೆ. ಪರಿಣಾಮ, ಹಂಪಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅರ್ಚಕರಿಂದ ಹಿಡಿದು, ಗೈಡ್‌ಗಳು, ಹಂಪಿ ಪುಸ್ತಕಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ ಹುಡುಗರ ವರೆಗೆ, ಬೀದಿಬದಿಯ ವ್ಯಾಪಾರಿಗಳಿಂದ ಹಿಡಿದು ಸ್ಟಾರ್ ಹೋಟೆಲ್‌ಗಳು, ಲಾಡ್ಜ್‌ಗಳ ವರೆಗೆ ವ್ಯಾಪಾರ ನಿಧಾನವಾಗಿ ಕುದುರಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.17ರಷ್ಟುಕುದುರಿಕೊಂಡಿದೆ. ವಿದೇಶಿಗರು ಆಗಮಿಸಿದರೆ ಹಂಪಿಯ ವ್ಯಾಪಾರ, ವಹಿವಾಟಿನ ವೈಭವ ಮೊದಲಿನ ಸ್ಥಿತಿಗೆ ಮರಳು ನಿರೀಕ್ಷೆ ಇದೆ.