ಚಿಕ್ಕೋಡಿ ಉಪವಿಭಾಗ ದಲ್ಲಿರೋ ಸರ್ಕಾರಿ ವಾಹನಗಳಿಗಿಲ್ಲ ವಾಹನ ವಿಮೆ. RTO ಓಡಾಡಲು ಬಳಸುವ ವಾಹನಕ್ಕೂ ಇಲ್ಲ ಇನ್ಸೂರೆನ್ಸ್. ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್, ಅಗ್ನಿ ಶಾಮಕ ದಳದ ವಾಹನ, ಪೊಲೀಸ್ ಇಲಾಖೆ ಬಳಸುವ ವಾಹನಗಳಿಗೂ ಇಲ್ಲ ವಾಹನ ವಿಮೆ.
ಬೆಳಗಾವಿ (ಆ.25): ನಾವು ದಿನನಿತ್ಯ ಓಡಾಡುವ ವಾಹನಗಳಿಗೆ ಇನ್ಸೂರೆನ್ಸ್, ಸರಿಯಾದ ದಾಖಲೆಗಳು ಇಲ್ಲ ಕಾನೂನು ಉಲ್ಲಂಘನೆಯಾಗಿದೆ ಎಂದು ಜನ ಸಾಮಾನ್ಯನಿಗೆ ದಂಡದ ರೂಪದಲ್ಲಿ ಪೊಲೀಸರು ಕೋಟ್ಯಂತರ ಹಣ ವಸೂಲಿ ಮಾಡ್ತಾರೆ. ಆದರೆ ಕಾನೂನು ಪಾಲಿಸುವ ಸರ್ಕಾರಿ ಇಲಾಖೆ ಅಧಿಕಾರಿಗಳಿಂದಲೆ ಕಾನೂನು ಉಲ್ಲಂಘನೆಯಾಗ್ತಿದೆ. ಅಷ್ಟಕ್ಕೂ ಸರ್ಕಾರಿ ಅಧಿಕಾರಿಗಳು ಮಾಡಿರುವ ಯಡವಟ್ಟು ಏನು ಎಂಬುದಕ್ಕೆ ಈ ಸುದ್ದಿ ಓದಿ. ಚಿಕ್ಕೋಡಿ ಉಪವಿಭಾಗ ದಲ್ಲಿರೋ ಸರ್ಕಾರಿ ವಾಹನಗಳಿಗಿಲ್ಲ ವಾಹನ ವಿಮೆ. RTO ಓಡಾಡಲು ಬಳಸುವ ವಾಹನಕ್ಕೂ ಇಲ್ಲ ಇನ್ಸೂರೆನ್ಸ್. ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್, ಅಗ್ನಿ ಶಾಮಕ ದಳದ ವಾಹನ, ಪೊಲೀಸ್ ಇಲಾಖೆ ಬಳಸುವ ವಾಹನಗಳಿಗೂ ಇಲ್ಲ ವಾಹನ ವಿಮೆ. ಜನರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯ ಎನ್ನುವಂತಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿರೋ ಅನೇಕ ಸರ್ಕಾರಿ ವಾಹನಗಳು ವಿಮೆರಹಿತವಾಗಿವೆ. ಚಿಕ್ಕೋಡಿ ಪಟ್ಟಣದಲ್ಲಿರೋ ಅಗ್ನಿ ಶಾಮಕ ದಳದ ವಾಹನಕ್ಕೆ ವಿಮೆ ಮಾಡಿಸಿಲ್ಲ. ಇನ್ನೂ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸಗಳಿಗೂ ವಿಮೆ ಮುಗಿದಿವೆ. ಪೊಲೀಸ್ ಇಲಾಖೆಯ ಐದಾರು ವಾಹನಗಳಿಗೆ ಇನ್ಸೂರೆನ್ಸ್ ಮುಗಿದು ವರ್ಷಗಳೇ ಕಳೆದಿವೆ. ಅಲ್ಲದೇ ಹಲವು ಸರ್ಕಾರಿ ವಾಹನಗಳಿಗೆ ಕಳೆದ ನಾಲ್ಕು ವರ್ಷದ ಹಿಂದೆಯೇ ವಾಹನ ವಿಮೆ ಮುಗಿದಿದೆ.
ಸರ್ಕಾರ ಜನಸಾಮಾನ್ಯರಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುತ್ತೆ ಆದರೆ ಚಿಕ್ಕೋಡಿ ಉಪವಿಭಾಗದ ತಾಲೂಕಿನ ಹಲವು ಇಲಾಖೆ ಅಧಿಕಾರಿಗಳ ವಾಹನಗಳ ವಿಮೆ ಮುಕ್ತಾಯಗೊಂಡರು ಅದೆಷ್ಟೋ ಸರ್ಕಾರಿ ವಾಹನಗಳಿಗೆ ವಿಮೆ ಮಾಡಿಸಿಲ್ಲ. ಹೀಗಾಗಿ ಸಾರ್ವಜನಿಕರು ಕಾನೂನು ಪಾಲಿಸಿ ಸಾರ್ವಜನಿಕರಿಗೆ ಮಾದರಿಯಾಗಿರಬೇಕಿದ್ದ ಅಧಿಕಾರಿಗಳೇ ಕಾನೂನು ಉಲ್ಲಂಘಿಸುತ್ತಿದ್ದು ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು ಎಂದು ಸರ್ಕಾರಕ್ಕೆ ಪ್ರಶ್ನಿಸುವಂತಾಗಿದೆ.
ಇನ್ನೂ ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಸರ್ಕಾರಿ ಸ್ವಾಮ್ಯದ ವಾಹನಗಳಿಗೆ ಇನ್ಸುರೆನ್ಸ್ ಖಡ್ಡಾಯಗೊಳಿಸುವ ಕುರಿತು ರಾಜ್ಯ ಸರ್ಕಾರಗಳಿಗೆ ತರಾಟೆಗೆ ತೆಗೆದುಕೊಂಡಿತ್ತು. ಆದರೂ ಕೂಡ ಚಿಕ್ಕೋಡಿ ಉಪವಿಭಾಗದಲ್ಲಿರೋ ಸರ್ಕಾರಿ ವಾಹನಗಳಿಗೆ ವಿಮೆ ಪಾವತಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆಂದು ಚಿಕ್ಕೋಡಿ ಆರ್‌ಟಿಓ ಅಧಿಕಾರಿಯನ್ನು ಕೇಳಿದರೆ ಕೆಲವೊಂದಿಷ್ಟು ವಾಹನಗಳ ವಿಮೆಯನ್ನು ಪಾವತಿಸಲಾಗಿದೆ ಆದರೂ ಮಾಹಿತಿಯೂ ಇನ್ನು ಸಾಪ್ಟವೇರ್‌ಗಳಲ್ಲಿ ಅಪಡೇಟ್ ಆಗದೇ ಇರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರಬಹುದು. ಹೀಗಾಗಿ ಈ ಕುರಿತು ಕುಲಂಕೂಶವಾಗಿ ಪರಿಶೀಲಿಸಿ. ಯಾವ್ಯಾವ ವಾಹನಗಳ ವಿಮೆ ಮುಗಿದಿದೆಯೋ ಅಂತಹ ವಾಹನಗಳಿಗೆ ವಿಮೆ ಮಾಡಿಸಲಾಗುವುದಾಗಿ ಹೇಳುತ್ತಿದ್ದಾರೆ.
ಇನ್ಸುರೆನ್ಸ್ ಮುಗಿದು 4 ವರ್ಷವಾದ್ರೂ ರಾಜರೋಷವಾಗಿ ಓಡಾಡುತ್ತಿರುವ ಸರ್ಕಾರಿ ಕಾರು
ಒಟ್ಟಿನಲ್ಲಿ ಸರ್ಕಾರಿ ವಾಹನಗಳಿಗೆ ಇನ್ಸುರೆನ್ಸ್ ತುಂಬುವ ಮೂಲಕ ಜವಾಬ್ದಾರಿ ಮೆರೆಯಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು. ಸಾರ್ವಜನಿಕರು ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುವಂತಾಗಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರಿ ವಾಹನಗಳಿಗೆ ವಿಮೆ ಮಾಡಿಸುವ ಮೂಲಕ ಕಾನೂನು ಪಾಲಿಸುತ್ತಾರೋ ಇಲ್ಲವೋ ಅನ್ನುವುದನ್ನು ಕಾದು ನೀಡಬೇಕಾಗಿದೆ.