ಬಿಡದಿ ಟೌನ್‌ಶಿಪ್‌ ಯೋಜನೆ ಇನ್ಮುಂದೆ ನನ್ನ, ಎಚ್‌ಡಿಕೆ ಹೋರಾಟ: ನಿಖಿಲ್ ಕುಮಾರಸ್ವಾಮಿ ಆಶ್ವಾಸನೆ

Published : May 28, 2026, 06:41 PM IST
Nikhil Kumaraswamy

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಅವರ ಮಗನಾಗಿ, ನಾನು ನಿಮಗೆ ಮಾತು ನೀಡುತ್ತಿದ್ದೇನೆ. ಇಂದಿನಿಂದ ಇದು ನಿಮ್ಮ ಹೋರಾಟ ಮಾತ್ರವಲ್ಲ ನನ್ನ ಮತ್ತು ಕುಮಾರಸ್ವಾಮಿರವರ ಹೋರಾಟ ಎಂದು ನಿಖಿಲ್ ಕುಮಾರಸ್ವಾಮಿ ಆಶ್ವಾಸನೆ ನೀಡಿದರು.

ರಾಮನಗರ (ಮೇ.28): ಮಣ್ಣಿನ ಮಗ ಎಚ್.ಡಿ.ಕುಮಾರಸ್ವಾಮಿ ಅವರ ಮಗನಾಗಿ, ನಾನು ನಿಮಗೆ ಮಾತು ನೀಡುತ್ತಿದ್ದೇನೆ. ಇಂದಿನಿಂದ ಇದು ನಿಮ್ಮ ಹೋರಾಟ ಮಾತ್ರವಲ್ಲ ನನ್ನ ಮತ್ತು ಕುಮಾರಸ್ವಾಮಿರವರ ಹೋರಾಟ. ಸರ್ಕಾರ ತಂದೊಡ್ಡಿರುವ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸುವುದೇ ನನ್ನ ಗುರಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರೈತರಿಗೆ ಆಶ್ವಾಸನೆ ನೀಡಿದರು.

ಬಿಡದಿ ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಗ್ರಾಮಗಳಿಗೆ ಭೇಟಿ ನೀಡಿ ರಿಯಾಲಿಟಿ ಚೆಕ್ ಡೆಸುವುದಕ್ಕೂ ಮುನ್ನ ಬೈರಮಂಗಲ ವೃತ್ತದಲ್ಲಿ ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರೈತರನ್ನು ವಿಶ್ವಾಸಕ್ಕೆ ಪಡೆಯದೆ ಒಕ್ಕಲೆಬ್ಬಿಸಲು ಹೊಂಚು ಹಾಕುತ್ತಿರುವ ಸರ್ಕಾರದ ವಿರುದ್ಧ ನೀವು ನಡೆಸುತ್ತಿರುವ ಹೋರಾಟದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಧೈರ್ಯ ತುಂಬಿದರು.

ಅಧಿಕಾರ ನೀವು ನೀಡಿರುವ ಭಿಕ್ಷೆ: ಮಹಾನ್ ವ್ಯಕ್ತಿಗಳು (ಡಿ.ಕೆ.ಶಿವಕುಮಾರ್) ಕುಳಿತಿರುವ ಕುರ್ಚಿ ನೀವು ನೀಡಿರುವ ಭಿಕ್ಷೆ. ಅದನ್ನು ಮರೆತರೆ ಯಾರೂ ಕೂಡ ರಾಜಕೀಯದಲ್ಲಿ ಮುಂದುವರಿಯಲು ಅಸಾಧ್ಯ. ನಿಮ್ಮ ಜಮೀನು ಕಸಿಯಲು ಬಂದಿರುವವರು ಇದನ್ಮು ಅರ್ಥ ಮಾಡಿಕೊಳ್ಳಬೇಕು. ನಿವು ಏಕಾಂಗಿಯಲ್ಲ ನಿಮ್ಮ ಹಿಂದೆ ಇಡೀ ಕನ್ನಡ ನಾಡಿನ ಏಳು ಕೋಟಿ ಜನ ಇದ್ದಾರೆ. ನೀವು ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ ಎಂದು ಹೇಳಿದರು.

ಈ ತಿಂಗಳ ಅಂತ್ಯಕ್ಕೆ ಅಂತಿಮ ಅಧಿಸೂಚನೆಗೆ ಸಿದ್ಧತೆ ನಡೆದಿದೆ, ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ, ಎಂತಹ ಸನ್ನಿವೇಶ ಬಂದರೂ ನಾನು, ನಮ್ಮ ಕುಟುಂಬ ನಿಮ್ಮ ಜತೆಗೆ ಸದಾ ಕಾಲ ಇರುತ್ತೇವೆ. ರಾಜ್ಯದ ಒಬ್ಬ ಪ್ರಜೆಯಾಗಿ, ಒಬ್ಬ ಕನ್ನಡಿಗನಾಗಿ, ಈ ಜಿಲ್ಲೆಯ ಮತದಾರನಾಗಿ ನಾನು ನಿಮ್ಮೊಡನಿರುತ್ತೇನೆ ಎಂದು ಭರವಸೆ ನೀಡಿದರು.

ಸ್ವಾಭಿಮಾನದ ಹೋರಾಟ : ಭೂ ಸ್ವಾಧೀನ ವಿರೋಧಿಸಿ 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಗ್ರಾಮಗಳ ಜನರು ಕಳೆದ 436 ದಿನಗಳಿಂದ ಹೋರಾಟ ಮಾಡುತ್ತಿದ್ದೀರಿ. ಇದು ಕೇವಲ ಭೂಮಿ ಉಳಿಸಿಕೊಳ್ಳುವ ಹೋರಾಟ ಮಾತ್ರವಲ್ಲ. ಇದು ರೈತರ ಸ್ವಾಭಿಮಾನದ ಹೋರಾಟ. ರಾಜ್ಯ ಸರ್ಕಾರ ನಿಮ್ಮ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಹಾಗೂ ಸರ್ಕಾರದ ವಿರುದ್ಧ ರೈತರು ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವ ಜತೆಗೆ ದಪ್ಪ ಚರ್ಮದ ಸರ್ಕಾರವನ್ನು ಎಚ್ಚರಿಸಲು ನಾನಿಲ್ಲಿಗೆ ಬಂದಿದ್ದೇನೆ ಎಂದರು.

ಈ ಯೋಜನೆ ಕುಮಾರಸ್ವಾಮಿ ಅವರ ಕನಸಿನ ಕೂಸು ಎಂದು ಬಿಂಬಿಸಿ, ಅದನ್ನು ಅವರ ತಲೆಗೆ ಕಟ್ಟಲು ಈ ಯೋಜನೆಯನ್ನು ಜಾರಿಗೆ ಮುಂದಾಗಿರುವ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. 2006ರಲ್ಲಿ ಯೋಜನೆ ಮುಂದಾಗಿದ್ದು ನಿಜ. ಆದರೆ, ರೈತರ ಭಾವನೆಗಳಿಗೆ ಬೆಲೆ ನೀಡಿ ಯೋಜನೆಯನ್ನು ಕೈಬಿಡಲಾಗಿತ್ತು.

ಒಂದು ವೇಳೆ ಈ ಯೋಜನೆ ಮುಂದುವರಿಸಬೇಕು ಎಂಬ ದುರುದ್ದೇಶ ಕುಮಾರಸ್ವಾಮಿ ಅವರಿಗಿದ್ದಿದ್ದರೆ 2018ರಲ್ಲಿ ಎರಡನೇ ಬಾರಿಗೆ ಸಿಎಂ ಆಗಿದ್ದಾಗ ಆ ಯೋಜನೆಯನ್ನು ಮುಂದುವರಿಸುತ್ತಿದ್ದರು. ನಮ್ಮ ಕುಟುಂಬ ಮತ್ತು ಪಕ್ಷವಾಗಲೀ ಎಂದೆಂದಿಗೂ ರೈತಪರವಾಗಿಯೇ ರಾಜಕೀಯ ಮಾಡಿದ್ದೇವೆ. ರೈತರಿಗಾಗಿಯೇ ಇರುವ ಏಕೈಕ ಪಕ್ಷ ನಮ್ಮ ಜೆಡಿಎಸ್. ಹಾಗಾಗಿ ನಮ್ಮ ಪಕ್ಷದ ವಿರುದ್ಧದ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಶೋ ಕೊಡಲು ಬಂದಿಲ್ಲ

ನಾನು ಶೋ ಕೊಟ್ಟು ಹೋಗಲು ಇಲ್ಲಿಗೆ ಬಂದಿಲ್ಲ. ಸರ್ಕಾರಕ್ಕೆ ಯೋಜನೆಯನ್ನು ಹಿಂಪಡೆಯುವ ಮನಸ್ಥಿತಿ ಇಲ್ಲ. ಇದು ನಿಮಗೂ ತಿಳಿದಿರುವ ವಿಚಾರ. ಆದರೆ, ನಾವು ಈ ನೆಲದ ಕಾನೂನಿನ ಪ್ರಕಾರವೇ ಹೋರಾಟ ಮಾಡೋಣ. ಯಾರೂ ಧೈರ್ಯಗೆಡುವುದು ಬೇಡ.

ಯಾವುದೇ ಜನಪ್ರತಿನಿಧಿಗಳಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ನಮ್ಮ ಗ್ರಾಮಕ್ಕೆ ಆಗಮಿಸಿ ನೀವು ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೀರಾ ಎಂಬುದಾಗಿ ಕೇಳಿಲ್ಲ. ಪ್ರತಿಭಟನೆ ಮಾಡುತ್ತಿರುವವರು ರೈತರೇ ಅಲ್ಲ, ಇಲ್ಲಿ ಯಾರೂ ವ್ಯವಸಾಯವನ್ನೇ ಮಾಡುತ್ತಿಲ್ಲ ಎಂಬುದಾಗಿ ಸುಳ್ಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

PREV
Read more Articles on
click me!

Recommended Stories

Onam Special Trains: ಓಣಂ ಪ್ರಯಾಣಿಕರಿಗೆ ಸಿಹಿಸುದ್ದಿ! ಮಂಗಳೂರು-ಚೆನ್ನೈ ನಡುವೆ ವಿಶೇಷ ರೈಲು ಘೋಷಣೆ
Lokayukta Raid: ಬೆಂಗಳೂರಿನ 3 ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿ ನೋಡಿ ದಂಗಾಗುತ್ತೀರಿ! ಕೋಟಿ ಕೋಟಿ ಹಣ-ಚಿನ್ನ ಜಪ್ತಿ