Chikkamagaluru: 5 ದಿನಗಳ ಹಿಂದಷ್ಟೇ ಮದುವೆ, ಜೀವಂತವಾಗಿ ಸುಟ್ಟು ಕರಕಲಾದ ನವವಿವಾಹಿತ

Published : Oct 26, 2026, 03:39 PM IST
Chikkamagaluru Nagaraj

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಬಸ್-ಬೈಕ್ ಡಿಕ್ಕಿಯಾಗಿ ನವವಿವಾಹಿತ ಸಜೀವ ದಹನವಾಗಿದ್ದರೆ, ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರ ಮೃತಪಟ್ಟಿದ್ದಾನೆ. ಮತ್ತೊಂದೆಡೆ ಲಕ್ಯಾ ಗ್ರಾಮದಲ್ಲಿ ಕೊಳವೆಬಾವಿ ಮೋಟಾರ್ ಕೇಬಲ್ ಕದಿಯಲು ಯತ್ನಿಸಿದ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಚಿಕ್ಕಮಗಳೂರು: ಐದು ದಿನಗಳ ಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆ ಬಳಿ ನಡೆದಿದೆ. ಮೃತ ದುರ್ದೈವಿಯನ್ನು 32 ವರ್ಷದ ನಾಗರಾಜ್ ಎಂದು ಗುರುತಿಸಲಾಗಿದೆ.

ಮೃತ ನಾಗರಾಜ್ ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿಯಾಗಿದ್ದು, ಜಯಪುರದಿಂದ ಶೃಂಗೇರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ಸಿಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ರಸ್ತೆ ಮಧ್ಯೆ ಬೈಕ್ ಹೊತ್ತಿ ಉರಿದಿದ್ದು, ಬೈಕ್ ಗೆ ಬೆಂಕಿ ಹತ್ತುತ್ತಿದ್ದಂತೆ ಬೈಕ್ ಸವಾರನಿಗೂ ಬೆಂಕಿ ಹೊತ್ತಿಕೊಂಡಿದೆ. ಇದರೊಂದಿಗೆ ಜೀವಂತ ಇರುವಾಗಲೇ ಬೈಕ್ ಸವಾರನ ದೇಹ ಬೆಂಕಿಯಲ್ಲಿ ಅರ್ಧಂಬರ್ಧ ಸುಟ್ಟು ಹೋಗಿದೆ.

ಅಪಘಾತದ ಬಳಿಕ ರಸ್ತೆ ಬದಿಯ ಕಂದಕದಲ್ಲಿ ಸರ್ಕಾರಿ ಬಸ್ ಉರುಳಿ ಬಿದಿದ್ದು, ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದಿಮ್ಮಿ ಎಳೆಯಲು ಕಟ್ಟಿದ್ದ ಹಗ್ಗ ಸಿಲುಕಿ ವ್ಯಕ್ತಿ ಸಾವು

ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ.

ನಗರದ ಸೈಯದ್ ಗಲ್ಲಿಯ ನಿವಾಸಿ ಮಹಮ್ಮದ್ ಗೌಸ್ ಖಾನ್ (36) ಮೃತ ಸವಾರ. ಪತ್ನಿಯೊಂದಿಗೆ ಸ್ಕೂಟರ್‌ನಲ್ಲಿ ತೇಗೂರು ಗ್ರಾಮದಿಂದ ಚಿಕ್ಕಮಗಳೂರು ನಗರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತೇಗೂರು ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಮರದ ದಿಮ್ಮಿಗಳನ್ನು ಎಳೆದು ಲೋಡ್ ಮಾಡುವ ಉದ್ದೇಶದಿಂದ ರಸ್ತೆಗೆ ಅಡ್ಡಲಾಗಿ ಹಗ್ಗ ಕಟ್ಟಲಾಗಿತ್ತು ಎನ್ನಲಾಗಿದೆ.

ಈ ಹಗ್ಗ ಸವಾರನಿಗೆ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಮಹಮ್ಮದ್ ಗೌಸ್ ಖಾನ್ ಅವರ ಕುತ್ತಿಗೆಗೆ ಸಿಲುಕಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳವೆಬಾವಿ ಮೋಟಾರ್ ಕೇಬಲ್ ಕಳ್ಳತನಕ್ಕೆ ಯತ್ನ

ಲಕ್ಯಾ ಗ್ರಾಮದ ಜಮೀನಿನಲ್ಲಿ ಕೊಳವೆಬಾವಿಯ ಮೋಟಾರ್‌ಗೆ ಅಳವಡಿಸಿದ್ದ ಕೇಬಲ್ ವೈರ್ ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಯಾ ಗ್ರಾಮದ ಯೋಗೀಶ್ ಎಲ್.ಒ. ಅವರ ಜಮೀನಿನಲ್ಲಿದ್ದ ಸುಮಾರು 5 ಮೀಟರ್ ಉದ್ದದ, ₹1,500 ಮೌಲ್ಯದ ಕೇಬಲ್ ವೈರ್ ಅನ್ನು ಅ.24ರಂದು ಕತ್ತರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಗ್ರಾಮದ ನಂಜುಂಡಪ್ಪ ಅವರ ಬಾವಿಯಲ್ಲಿದ್ದ ವಿದ್ಯುತ್ ಮೋಟಾರ್ ಕಳವು ಮಾಡಲು ಇಬ್ಬರು ಯತ್ನಿಸಿದ್ದು, ಪ್ರಶ್ನಿಸಿದಾಗ ಚಾಕು ತೋರಿಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಗ್ರಾಮಸ್ಥರು ಸೇರಿ ರಾಮಚಂದ್ರಗೌಡ ಎಂಬಾತನನ್ನು ಹಿಡಿದಿದ್ದು, ಮತ್ತೊಬ್ಬ ಆರೋಪಿ ಉಮೇಶ್ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಹೆಬ್ಬಾಳ ಕೆರೆ ಅಂಚಿನಲ್ಲೇ ಬರಲಿದೆ 12 ಮೀಟರ್ ಅಗಲದ ಹೊಸ ರಸ್ತೆ: ಜಿಬಿಎ ಪ್ರಸ್ತಾವನೆಗೆ ಪ್ರಕೃತಿ ಪ್ರೇಮಿಗಳ ಕಳವಳ!
ಹಾಸನಾಂಬೆ ದರ್ಶನಕ್ಕೆ KSRTC ಭರ್ಜರಿ ಕೊಡುಗೆ: ಕೇವಲ ₹375 ರಿಂದ ಸ್ಪೆಷಲ್ ಪ್ಯಾಕೇಜ್ ಟೂರ್‌ ಆರಂಭ !