ಬೆಳಗಾವಿ ಕಸದ ತಿಪ್ಪೆಯಿಂದ ಕೇಳಿಬಂತು ಹಸುಗೂಸು ಅರ್ತನಾದ! ಕುರಿಗಾಹಿಯಿಂದ ಗಂಡು ಮಗುವಿನ ರಕ್ಷಣೆ

Published : Jul 07, 2026, 11:07 AM ISTUpdated : Jul 09, 2026, 01:21 PM IST
newborn baby found in Belagavi

ಸಾರಾಂಶ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ, ಹೆತ್ತ ತಾಯಿಯೇ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದ ಅಮಾನವೀಯ ಘಟನೆ ನಡೆದಿದೆ. ಕುರಿಗಾಹಿಯೊಬ್ಬರು ಮಗುವನ್ನು ರಕ್ಷಿಸಿದ್ದು, ಸದ್ಯ ಮಗು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದೆ. ಪೊಲೀಸರು ನಿರ್ದಯಿ ತಾಯಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ: ಹೆತ್ತ ತಾಯಿಯೇ ಮಮತೆಯನ್ನೇ ಮರೆತು, ತಾನು ಜನ್ಮ ನೀಡಿದ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದು ಪರಾರಿಯಾಗಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ತಿಪ್ಪೆಯಲ್ಲಿ ಮಗು ಪತ್ತೆಯಾಗಿದೆ.

ಸೇತುವೆ ಕೆಳಗೆ ಪತ್ತೆಯಾದ ಗಂಡು ಮಗು

ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಸೇತುವೆಯ ಕೆಳಭಾಗದಲ್ಲಿ ಅನಾಥವಾಗಿ ಬಿದ್ದಿದ್ದ ಗಂಡು ಮಗುವಿನ ಅಳುವಿನ ಧ್ವನಿ ಕೇಳಿ, ಆ ಭಾಗದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಯೊಬ್ಬರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಮಗು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು, ತಡಮಾಡದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮಾನವೀಯತೆ ಮೆರೆದ ಕುರಿಗಾಹಿ

ಮಗುವನ್ನು ರಕ್ಷಿಸಿದ ತಕ್ಷಣವೇ ಜಾಗರೂಕರಾದ ಕುರಿಗಾಹಿ, ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ತಕ್ಷಣವೇ ಮಗುವನ್ನು ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿಗೆ ವೈದ್ಯರ ಉಸ್ತುವಾರಿಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸುರೇಬಾನ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ರಾಮದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಎಸೆದು ಹೋದ ನಿರ್ದಯಿ ತಾಯಿ ಯಾರು? ಈ ಕೃತ್ಯದ ಹಿಂದಿನ ಕಾರಣವೇನು? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಶಿಶುವನ್ನು ಕಸಕ್ಕೆ ಎಸೆದು ಹೋಗಿರುವ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಾಹಿತಿ ಹಾಗೂ ಲಭ್ಯವಿರುವ ಸುಳಿವುಗಳ ಆಧಾರದ ಮೇಲೆ ಪರಿಶೀಲನೆ ಮುಂದುವರಿದಿದೆ. ಪ್ರಕರಣವು ರಾಮದುರ್ಗ ತಾಲೂಕಿನ ಸುರೇಬಾನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪಿಎಸ್‌ಐ ಗುರುರಾಜ ಕಲಬುರ್ಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

PREV
Read more Articles on
click me!

Recommended Stories

ಬಾತ್‌ರೂಮ್‌ನಲ್ಲೇ ಅಡಗಿದ್ದ ಚಿರತೆ, ಸಾವಿನ ದವಡೆಯಿಂದ ಪಾರಾದ ಬೆಳಗಾವಿ ಮಹಿಳೆ!
Mandya: ಗಾಳಿ-ಬೆಳಕು ಸೋಂಕಿಲ್ಲದೇ ಬರುವ ಸಾವಯವ ಹಾಲು; ಬೆಂಗಳೂರು, ಹೈದರಾಬಾದ್‌ನಲ್ಲಿ ಮಾರುಕಟ್ಟೆ