ಕಲಬುರಗಿ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೂರು ದಿನಗಳ ತರಹೇವಾರಿ ಅಡುಗೆಯಲ್ಲೂ ಹೊಸ ದಾಖಲೆ ಸೃಷ್ಟಿ | ಸಾಹಿತ್ಯದ ರಸದೌತಣದ ಜೊತೆಗೇ ಭರ್ಜರಿ ಭೋಜನ ಮಾಡಿ ಬಾಯಿ ಚಪ್ಪರಿಸಿದ ಜನ|
ಅವಧಾನಿ/ಬಿಂದು/ನಾಗರಾಜ
ಕಲಬುರಗಿ[ಫೆ.08]: ಕಲಬುರಗಿ ಸಾಹಿತ್ಯ ಸಮ್ಮೇಳನ ಊಟೋಪಚಾರದಲ್ಲಿಯೂ ಹೊಸ ದಾಖಲೆ ನಿರ್ಮಿಸಿದೆ, ಈಗಾಗಲೇ ಅತ್ಯಧಿಕ ಪ್ರತಿನಿಧಿಗಳ ನೋಂದಣಿ (23 ಸಾವಿರ) ದಿಂದಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಸಮ್ಮೇಳನ ಇದೀಗ ವಿಶಾಲ ಶ್ರೀ ವಿಜಯ ಮುಖ್ಯ ವೇದಿಕೆ, ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆ, ದಾಖಲೆ ತರಹೇವಾರಿ ಅನ್ನಾಹಾರ ಸೇವನೆ, ಸಿಹಿ ತಿನಿಸಿನಂತಹ ಊಟೋಪಚಾರ, ಅಚ್ಚುಕಟ್ಟುತನದಿಂದಾಗಿ ಸುದ್ದಿ ಮಾಡಿದೆ.
ಸಮ್ಮೇಳನದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾಡಳಿತದ ಅಧಿಕಾರಿಗಳ ಪ್ರಕಾರ ಕಳೆದ 3 ದಿನಗಳಲ್ಲಿ ಸಮ್ಮೇಳನಕ್ಕೆ ಬಂದು ಹೋದವರ ಸಂಖ್ಯೆ 6 ಲಕ್ಷ ದಾಟಿದೆ. ಫೆ.5ರ ಸಮ್ಮೇಳನದ ಮೊದಲ ದಿನ ಜನಜಾತ್ರೆ, 2 ಲಕ್ಷಕ್ಕೂ ಹೆಚ್ಚು ಜನ ಅಂದೇ ಬಂದಿದ್ದರು, 2ನೇ ದಿನವಾದ ಗುರುವಾರ 1.50 ಲಕ್ಷದಷ್ಟು ಜನ ಭೇಟಿ ನೀಡಿದ್ದ ಸಮ್ಮೇಳನದಲ್ಲಿ ಕೊನೆಯ ದಿನವಾದ ಶುಕ್ರವಾರವೂ ಒಂದೂವರೆ ಲಕ್ಷದಷ್ಟು ಜನ ಬಂದು ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಮನೆ ಮಂದಿ ಎಲ್ಲರು ಕುಟುಂಬ ಸಮೇತ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ಈ ಸಮ್ಮೇಳನದ ಪ್ರಮುಖ ಸಂಗತಿಯಾಗಿತ್ತು.ಸಮ್ಮೇಳನಕ್ಕೆ ಬಂದವರಲ್ಲಿ ಶಾಲಾ ಮಕ್ಕಳು, ಯುವಕ, ಯುವತಿಯರ ಸಂಖ್ಯೆಯೇ ಹೆಚ್ಚಾಗಿತ್ತು. ಜಿಲ್ಲಾಡಳಿತ 3 ದಿನ ಶಾಲೆ, ಕಾಲೇಜು ರಜೆ ಘೋಷಿಸಿದ್ದರಿಂದ ಎಲ್ಲರೂ ಸಮ್ಮೇಳನದತ್ತ ಮುಖ ಮಾಡಲು ಇದರಿಂದ ಅನುಕೂಲವಾಗಿತ್ತು.
ಕಲಬುರಗಿ ಅಕ್ಷರ ಜಾತ್ರೆಗೆ ತೆರೆ: 8 ಲಕ್ಷ ಜನ ಸಮ್ಮೇಳನಕ್ಕೆ ಭೇಟಿ
ದಾಖಲೆ ದವಸ ಧಾನ್ಯ ಬಳಕೆ:
ಸಮ್ಮೇಳನದ ಮೂರು ದಿನಗಳಲ್ಲಿ ನಾನಾ ಭಾಗಗಳಿಂದ ಆಗಮಿಸಿದ್ದ ಸುಮಾರು ಆರು ಲಕ್ಷ ಸಾಹಿತ್ಯಾಸಕ್ತರು ಉತ್ತರ ಕರ್ನಾಟಕದ ಊಟ ಸವಿದು ನಾಲಿಗೆ ಚಪ್ಪರಿಸಿದರು. ಸಾಂಪ್ರದಾಯಿಕ ಶೈಲಿಯ ಊಟವೆಂದರೆ ಅದರ ರುಚಿಯೆ ಬೇರೆ. ಸಮ್ಮೇಳನಕ್ಕೆ ಬರುವ ಜನರಿಗಾಗಿ ವಿಶೇಷ ಆಹಾರ ಪಟ್ಟಿ ಸಿದ್ಧಪಡಿಸಲಾಗಿತ್ತು. ಜನ ನಾ ಮುಂದು ತಾ ಮುಂದು ಎನ್ನುವಂತೆ ಊಟ ಸವಿಯುತ್ತಿದ್ದರು.
200 ಕೌಂಟರ್ ತರೆದು ಅನ್ನ ದಾಸೋಹ:
ಬೆಳಗ್ಗೆ 11ರಿಂದ ಸಂಜೆ 4 ರವರೆಗೆ ನಿರಂತರವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರಿಗೆ ತೊಂದರೆಯಾಗದಂತೆ 200 ಕೌಂಟರ್ ತೆರೆಯಲಾಗಿತ್ತು. ಮುಖ್ಯ ವೇದಿಕೆ ಸಮೀಪವೇ ಊಟದ ವ್ಯವಸ್ಥೆ ಮಾಡಿದ್ದರಿಂದ ಜನ ಕಾರ್ಯಕ್ರಮ ನೋಡಿ ಊಟದ ಕಡೆ ಧಾವಿಸುತ್ತಿದ್ದರು. ಅದರಲ್ಲಿ 100 ಕೌಂಟರ್ ಪುರುಷರಿಗೆ, ಉಳಿದ 100ರಲ್ಲಿ ಮಹಿಳೆಯರು, ಮಕ್ಕಳು ವಿಕಲಚೇತನರಿಗೆ ಕೌಂಟರ್ ಮೀಸಲಿಡಲಾಗಿತ್ತು. ಮೂರನೇ ದಿನ ಬೆಳಗ್ಗೆ ಉಪಹಾರಕ್ಕೆ 50 ಸಾವಿರ ಬೇಸನ್ ಲಾಡು 30 ಕ್ವಿಂಟಲ್ ಉದ್ದಿನ ಹಿಟ್ಟು 30 ಕ್ವಿಂಟಲ್ ಕಡಲೆ ಹಿಟ್ಟು ಸೇರಿ ಒಟ್ಟು 60 ಕ್ವಿಂಟಲ್ ಮೈಸೂರು ಬಜ್ಜಿ ತಯಾರಿಸಲಾಗಿತ್ತು. ಸುಮಾರು 50 ಸಾವಿರ ಜನರು ಉಪಹಾರ ಸೇವಿಸಿದರು.
ಗಡಿನಾಡಲ್ಲಲ್ಲ , ಕನ್ನಡಕ್ಕೆ ಬೆಂಗಳೂರಲ್ಲೇ ಆತಂಕ ಇರೋದು: ರವಿ ಹೆಗಡೆ
ಸಾಹಿತ್ಯ ಸಮ್ಮೇಳನದ ಮೂರನೆ ದಿನ ಗೋಧಿ ಹುಗ್ಗಿ ಖಡಕ್ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಬಿಸಿ ಚಪಾತಿ, ಉದುರು ಬೇಳೆ ಪಲ್ಲೆ, ಶೇಂಗಾ ಚಟ್ನಿ, ಮಾವಿನ ಚಟ್ನಿ, ಅನ್ನ, ಸಾರು, ಮಜ್ಜಿಗೆ ನೀಡಲಾಯಿತು, ಒಂದುವರೆ ಲಕ್ಷಕ್ಕೂ ಹೆಚ್ಚು ಜನ ಉತ್ತರ ಕರ್ನಾಟಕದ ಊಟ ಸವಿದರು. ಮೂರನೆ ದಿನದ ಅಡುಗೆಯಲ್ಲಿ 125 ಕ್ವಿಂಟಲ್ ಅಕ್ಕಿ, 40 ಕ್ವಿಂಟಲ್ ತೊಗರೆ ಬೇಳೆ, 80 ಕ್ವಿಂಟಲ್ ಗೋಧಿ ಹಿಟ್ಟು (ಚಪಾತಿಗೆ) 2 ಲಕ್ಷ ಜೋಳದ ಖಡಕ್ ರೊಟ್ಟಿ, 2 ಲಕ್ಷ ಸಜ್ಜೆ ರೊಟ್ಟಿ, 100ಕ್ವಿಂಟಲ್ ತರಕಾರಿ ಬಳಸಿ ಅಡುಗೆ ತಯಾರಿಸಲಾಗಿತ್ತು.
ನೆಲಹಾಸು, ಕುಳಿತೇ ಊಟ ಸವಿದ ಜನ:
ಬೃಹಾದಾಕಾರದ ಪೆಂಡಾಲ್ ಹಾಕಿ ನೆಲಹಾಸು ಹಾಕಿದ್ದರಿಂದ ಜನ ನೆಲದ ಮೆಲೆಯೇ ಪಂಕ್ತಿ ಪ್ರಕಾರ ಕುಳಿತು ಭೋಜನ ಸವಿದರು. ಅಡುಗೆ ತಯಾರಿಕೆ ಸಂಸ್ಥೆಯ ಎರಡು ಸಾವಿರ ನೌಕರರ ಜೊತೆಗೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೂಡ ಊಟ ಬಡಿಸಿದರು. ಆಯೋಜಕರು ಶಿಸ್ತು ಕಾಪಾಡುವಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿದದ್ದುಕಂಡು ಬಂದಿತು. ವಿಐಪಿ ವ್ಯಕ್ತಿಗಳಿಗೆ, ಮಾಧ್ಯಮದವರಿಗೆ, ಜನಸಾಮಾನ್ಯ ಸಾಹಿತ್ಯಾಸಕ್ತರಿಗೆ ಒಂದೇ ಬಗೆಯ ಊಟ ತಯಾರಿಸಲಾಯಿತು. ಮೂರು ದಿನದಲ್ಲಿ ಪ್ರತಿನಿತ್ಯ 10 ಸಾವಿರ ಲೀಟರ್ ನಂತೆ 30 ಸಾವಿರ ಮೊಸರು, ಚಹ ಸಲುವಾಗಿ 6 ಸಾವಿರ ಹಾಲು, ಬಳಸಲಾಯಿತು.
ಮೂರನೇ ದಿನಕ್ಕೆ ಬಳಸಿದ ದಿನಸಿ 125 ಕ್ವಿಂಟಲ್ ಮೂರನೇ ದಿನಕ್ಕೆ ಬಳಸಿದ ಅಕ್ಕಿ 40 ಕ್ವಿಂಟಲ್ ಸಾಂಬರ್‌ಗೆ ಬಳಸಿದ ತೊಗರೆ ಬೇಳೆ 80 ಕ್ವಿಂಟಲ್ ಸಮ್ಮೇಳನದಲ್ಲಿ ಚಪಾತಿ ಮಾಡಲು ಬಳಸಿದ ಗೋಧಿ ಹಿಟ್ಟು 2 ಲಕ್ಷ ಸಾಹಿತ್ಯಾಸ್ತರಿಗೆ ಮಾಡಿದ ಜೋಳದ ಖಡಕ್ ರೊಟ್ಟಿ 2 ಲಕ್ಷ ಸಮ್ಮೇಳನದಲ್ಲಿ ಜನರ ಊಟಕ್ಕೆ ತಯಾರಿಸಿದ ಸಜ್ಜೆ ರೊಟ್ಟಿ 100 ಕ್ವಿಂಟಲ್ ಮೂರನೇ ಊಟಕ್ಕೆ ಬಳಸಿದ ತರಕಾರಿ 3 ಲಕ್ಷ ಮೂರನೇ ದಿನಕ್ಕೆ ಬಳಸಿದ ಶೇಂಗಾ ಹೋಳಿಗೆ.