ಕಲಬುರಗಿ ಅಕ್ಷರ ಜಾತ್ರೆಗೆ ತೆರೆ: 6 ಲಕ್ಷ ಜನ ಸಮ್ಮೇಳನಕ್ಕೆ ಭೇಟಿ
ಅಲಕ್ಷಿತ ಅಕ್ಷರಪ್ರಿಯರ ಅಪೂರ್ವ ಸಮ್ಮೇಳನ | 5 ನಿರ್ಣಯಗಳ ಅಂಗೀಕಾರ | ಮುಂದಿನ ಸಮ್ಮೇಳನ ಹಾವೇರಿಯಲ್ಲಿ| ಅಚ್ಚು ಕಟ್ಟಾದ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಭಾರಿ ಮೆಚ್ಚುಗೆ|
ಜೋಗಿ
ಕಲಬುರಗಿ(ಫೆ.08): ಪ್ರತಿಮಾತಿಗೂ ಚಪ್ಪಾಳೆ, ಸಿಳ್ಳೆ. ನಿಮಿಷಕ್ಕೊಂದು ಹರ್ಷೋದ್ಗಾರ, ಗಿಜಿಗುಡುವ ಜನಸಂದಣಿ, ಪ್ರತಿಯೊಬ್ಬರ ಮುಖದಲ್ಲೂ ಉಕ್ಕಿಹರಿಯುವ ಸಂತೋಷ, ಪುಸ್ತಕದ ಮಳಿಗೆಗಳಲ್ಲಿ ಸಾಲುಗಟ್ಟಿದ ಅಕ್ಷರ ಪ್ರಿಯರು, ರಸ್ತೆಗಳ ತುಂಬ ವಾಹನಗಳು ಓಡಾಡಲಿಕ್ಕೂ ಅವಕಾಶವಾಗದಂತೆ ಆರೇಳು ಕಿಲೋ ಮೀಟರ್ ನಡೆದು ಬರುತ್ತಿದ್ದ ರೈತಾಪಿ ಮಂದಿ. ಕನ್ನಡಿಗರ ಮಾತೃಸಂಸ್ಥೆ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಾಹಿತ್ಯ ಜಾತ್ರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಸ್ಸಂದೇಹವಾಗಿ ಜಗತ್ತಿನ ಅತಿದೊಡ್ಡ ಸಾಹಿತ್ಯ ಮೇಳವೆಂದು ಕರೆಸಿಕೊಳ್ಳಲಿಕ್ಕೆ ಎಲ್ಲ ಅರ್ಹತೆಯನ್ನು ಹೊಂದಿರುವುದು ಕಲಬುರಗಿಯಲ್ಲಿ ಮತ್ತೊಮ್ಮೆ ಸಾಬೀತಾಯಿತು.
ದಲಿತರಿಂದಲೇ ದಲಿತರ ಶೋಷಣೆ: ಡಾ.ಸುಬ್ರಾವ ಎಂಟೆತ್ತಿನವರ
ಕಲಬುರಗಿಯ ಕುರಿತು ಕರ್ನಾಟಕಕ್ಕೆ ಇದ್ದ ಅಭಿಪ್ರಾಯವನ್ನು ಬದಲಾಯಿಸಿದ್ದು ಕೂಡ 85ನೇ ಸಾಹಿತ್ಯ ಸಮ್ಮೇಳನದ ಸಾಧನೆ. ಬಿಸಿಲಿನ ಬರಡು ನೆಲದ ಧೂಳಿನ ಊರು ಎಂಬ ಹಳೆಯ ನಂಬಿಕೆಯ ನ್ನು ತೊಡೆದುಹಾಕಿ, ಕಲಬುರಗಿ ತನ್ನ ಆಂತರಿಕ ಸಮೃದ್ಧತೆ ಮತ್ತು ಶ್ರೀಮಂತಿಕೆಯನ್ನು ಮೆರೆಯಿತು. ಶ್ರಮಜೀವನದ, ಗ್ರಾಮ್ಯ ಚೈತನ್ಯದ ತರುಣ ತರುಣಿಯರು ಸಮ್ಮೇಳನದ ಅಂಗಳದಲ್ಲಿ ಆಹ್ಲಾ ದದ ಗಾಳಿ ಸುಳಿಯುವಂತೆ ಮಾಡಿದರು. ಇಡೀ ಕಲ ಬುರಗಿ ಬೊಜ್ಜುರಹಿತ ಪ್ರದೇಶ ಎಂದು ಘೋಷಿ ಸಬಹುದಾದಷ್ಟು ಆರೋಗ್ಯವಂತ ದೇಹ ಹೊಂದಿ ರುವ ಕಲಬುರಗಿ ಜನಪದ, ತನ್ನ ಮನಸ್ಸು ಕೂಡ ಬೊಜ್ಜಿಲ್ಲದ ಆರೋಗ್ಯ ತುಳುಕುವ ಜಾಗವೆಂಬು ದನ್ನು ಸಮ್ಮೇಳನದಲ್ಲಿ ತೋರಿಸಿಕೊಟ್ಟರು
ಸಮ್ಮೇಳನ ಸಂಪನ್ನ
ಮೊದಲ ಪುಟದಿಂದ ಸಣ್ಣ ಸಣ್ಣ ವಸತಿ ನಿಲಯಗಳ, ಪುಟ್ಟ ಹೋಟೆಲುಗಳ, ಕಿರಿದಾದ ರಸ್ತೆಗಳ, ಬೋಳು ಬಯಲಿನ ಕರಬುರಗಿಯಲ್ಲಿ ಮೂರು ದಿನಗಳ ಕಾಲ ಬೀಸಿದ್ದು ಸಾಹಿತ್ಯದ ತಂಗಾಳಿ. ಕವಿತೆಯ ಕಂಪು ಅವರನ್ನು ಅಕ್ಷರಶಃ ರೋಮಾಂಚಗೊಳಿಸಿತು. ನಾವೆಲ್ಲ ರೈತರು. ಈ ಸಾಹಿತ್ಯ ನಮಗೆ ಗೊತ್ತಿಲ್ಲ. ಅಕ್ಷರ ಜಗತ್ತು ನಮಗೆ ಹೊಸತು. ಈ ಸಲ ಅದರ ರುಚಿ ಸಿಕ್ಕಿತು ಅಂತ ಹೇಳಿದ್ದು ಜೇವರ್ಗಿಯ ಸಮೀಪದ ಹಳ್ಳಿಯಿಂದ ಬಂದ ಹನುಮ. ಕಲಬುರಗಿಯ ಸಹೃದಯ ಸಭಿಕರಿಗೆ ಹುರಿದುಂಬಿಸುವ ಕಲೆ ಕರಗತ. ಅವರು ಪ್ರತಿ ಮಾತನ್ನೂ ಚಪ್ಪರಿಸಿ ಎರಡು ಗಂಟೆಗಳ ಕಾಲ ಕವಿಗೋಷ್ಠಿಯ ಅಧ್ಯಕ್ಷ ಭಾಷಣವನ್ನು ಕೇಳಿಸಿಕೊಂಡರು.
ಸಾಹಿತ್ಯ ಸಮ್ಮೇಳನದಲ್ಲಿ ಮೊಳಗಿದ ಸಿಎಎ ವಿರೋಧಿ ಧ್ವನಿ!
ನಡುನಡುವೆ ಹೊಮ್ಮಿದ ಸಾಲುಗಳಲ್ಲಿ ಕರಗಿಹೋದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಂತೆ ಎದ್ದು ನಿಂತು ಕೂಗು ಹಾಕಿ ಸ್ವಾಗತಿಸಿದರು. ಅವರ ಮಾತುಗಳಿಗಾಗಿ ಕಾತರಿಸಿ ಕಾದು ಕೂತರು. ಸಮ್ಮೇಳನ ಇನ್ನೊಂದೆರಡು ದಿನ ಮುಂದುವರಿಯಲಿ ಎಂಬ ಬೇಡಿಕೆಯನ್ನು ಕಣ್ಣುಗಳಲ್ಲಿಟ್ಟುಕೊಂಡು ಕಾದು ಕುಳಿತರು. ಜನ ಪ್ರಾತಿನಿಧ್ಯದ ವಿಚಾರದಲ್ಲಿ, ಊಟದ ಮನೆಯ ಒಪ್ಪಓರಣದಲ್ಲಿ, ಪುಸ್ತಕದ ಅಂಗಡಿಯ ಅಚ್ಚುಕಟ್ಟುತನದಲ್ಲಿ, ವಿಶ್ವವಿದ್ಯಾಲಯದ ನೂರಾರು ಎಕರೆಗಳನ್ನು ಆವರಿಸಿದ ಶ್ರೀವಿಜಯ ಮಂಟಪ ಮತ್ತು ಪ್ರಧಾನ ವೇದಿಕೆಯ ಮೇಲಿನ ಉತ್ಸವದಲ್ಲಿ ಸಮ್ಮೇಳನ ಸಂಪನ್ನಗೊಂಡಿತು.
ಪ್ರತಿ ವರ್ಷದಂತೆ ಈ ವರ್ಷವೂ ಗೋಷ್ಠಿಗಳಲ್ಲಿ ಹೊಸತನವೇನೂ ಇರಲಿಲ್ಲ. ಆದರೆ ಕಲಬುರಗಿಯ ಮಂದಿಗೆ ಪ್ರಾಚೀನತೆಯಲ್ಲೇ ನಾವೀನ್ಯವಿತ್ತು. ಇಂಥ ಯಾವ ಗೋಷ್ಠಿಯನ್ನಾಗಲೀ, ಸಂವಾದವನ್ನಾಗಲೀ ಎಂದೂ ಕೇಳದ ಅವರಿಗೆ ಮಾಧ್ಯಮ ಗೋಷ್ಠಿಯಂಥ ತೀರಾ ತಾಂತ್ರಿಕವಾದ ಮಾತುಕತೆಗಳು ಕೂಡ ಆಪ್ತವೆನಿಸಿದವು. ಯಾವುದೋ ಪೂರ್ವಸೂಚನೆಯಿಲ್ಲದೇ ಆಡಿದ ಚಿತ್ರರಂಗದ ಕುರಿತ ಮಾತು, ತಂತ್ರಜ್ಞಾನದ ಹೊಸತನ, ನೀರಾವರಿಯ ಸಂಕಷ್ಟಗಳ ಚರ್ಚೆಯೂ ಅವರ ಮನಸ್ಸಿಗೆ ಇಳಿಯಿತು. ಒಂದು ಸಮ್ಮೇಳನವನ್ನು ಲೋಪಗಳಿಲ್ಲದೇ ಮಾಡಲು ಸಾಧ್ಯ ಅನ್ನುವುದನ್ನು ತೋರಿಸಿದ ಖ್ಯಾತಿ ಕಲಬುರಗಿ ಸಾಹಿತ್ಯ ಸಮ್ಮೇಳನದ್ದು. ಬಹುತೇಕ ‘ಎರರ್ ಫ್ರೀ’ ಆಗಿದ್ದ ಈ ಸಮ್ಮೇಳನದ ಕೊರತೆಯೆಂದರೆ ಉತ್ತರ ಸಿಗದ ಪ್ರಶ್ನೆಗಳು ಮತ್ತು ಹಳೆಯ ಧಾಟಿಯಲ್ಲಿದ್ದ ಅಧ್ಯಕ್ಷರ ಭಾಷಣ. ಸಂವಾದದಲ್ಲೂ ಅಧ್ಯಕ್ಷರು ಮುಜುಗರದ ಪ್ರಶ್ನೆಗಳನ್ನು ಯಾವ ಮುಜುಗರವೂ ಇಲ್ಲದೇ ತೇಲಿಸಿಬಿಟ್ಟರು.
ಬಹುತೇಕ ಗೋಷ್ಠಿಗಳು ಸಮನ್ವಯ ಸೂತ್ರವನ್ನು ಅಳವಡಿಸಿಕೊಂಡು ಮುಂದೆ ಬಂದರೆ ಹಾಯದೇ, ಹಿಂದೆ ಬಂದರೆ ಒದೆಯದೇ ಸಜ್ಜನಿಕೆ ಮೆರೆದವು. ಬೆರಳೆಣಿಕೆಯ ಗೋಷ್ಠಿಗಳಲ್ಲಿ ಬಂಡಾಯದ ದನಿಯೂ ಆಕ್ರೋಶದ ಕೂಗೂ ಕೇಳಿಬಂದಿತಾದರೂ ಅವುಗಳು ಬಂದದ್ದು ಪ್ರತಿಸಮ್ಮೇಳನದಲ್ಲೂ ಅಂಥದ್ದೇ ಮಾತುಗಳನ್ನು ಆಡುವ ವೃತ್ತಿಪರ ಬಂಡಾಯಗಾರರಿಂದಲೇ ಹೊರತು, ಹೊಸ ತಲೆಮಾರಿನ ತರುಣ ಭಾಷಣಕಾರರಿಂದ ಅಲ್ಲ ಎನ್ನುವುದು ಮಾತ್ರ ಗಮನಾರ್ಹ. ಅಂದಹಾಗೆ ಸಮ್ಮೇಳನ ತೆಗೆದುಕೊಂಡ ನಿರ್ಣಯಗಳಲ್ಲಿ ಬಹುಶಃ ಜಾರಿಯಾಗುವುದು ಮುಂದಿನ ಸಮ್ಮೇಳನ ಏಲಕ್ಕಿ ನಾಡು ಹಾವೇರಿಯಲ್ಲಿ ಅನ್ನುವುದೊಂದೇ. ತೊಗರಿಯ ಪೋಷಕಾಂಶದಿಂದ ಏಲಕ್ಕಿಯ ಘಮಕ್ಕೆ ಸಮ್ಮೇಳನ ಚಲಿಸಿದೆ. ಹೀಗಾಗಿ ಸತ್ವಕ್ಕಿಂತ ಘಮ ಹೆಚ್ಚಿರುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ.