
ಬೆಂಗಳೂರು(ಡಿ.30): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗು ವವರಿಗಾಗಿ ಡಿ.31ರಂದು ನಮ್ಮ ಮೆಟ್ರೋ ರೈಲು ಸೇವೆಯನ್ನು ಮಧ್ಯರಾತ್ರಿ 1.30ರವರೆಗೆ ವಿಸ್ತರಿಸಲಾಗಿದೆ.
ಮಹಾತ್ಮ ಗಾಂಧಿ ರಸ್ತೆ (ಎಂಜಿ ರಸ್ತೆ), ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ತಡ ರಾತ್ರಿವರೆಗೆ ಹೊಸ ವರ್ಷದ ಸಂಭ್ರಮಾಚರಣೆ ನಡೆಯುವ ಸಾಧ್ಯತೆಗಳಿವೆ. ಆ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರು ವಾಪಾಸು ತಮ್ಮ ಆವಾಸ ಸ್ಥಾನಕ್ಕೆ ತೆರಳುವುದಕ್ಕೆ ಅನುಕೂಲವಾಗುವಂತೆ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ತಡರಾತ್ರಿ 1.30ರವರೆಗೆ ಮೆಟ್ರೋ ರೈಲು ಸೇವೆ ನೀಡಲಾಗುತ್ತಿದೆ. ಅದೇ ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ತಡರಾತ್ರಿ 2.15ಕ್ಕೆ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಸಂಚರಿಸಲಿದೆ.
ನಮ್ಮ ಮೆಟ್ರೋಗೆ ನಿರೀಕ್ಷೆಯಷ್ಟು ಪ್ರಯಾಣಿಕರು ಬರುತ್ತಲೇ ಇಲ್ಲ: ಬೋಗಿ ಕೊರತೆ ಕಾರಣ?
ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಮಾತ್ರ ರಾತ್ರಿ 11 ಗಂಟೆ ಮುಚ್ಚಲಾಗುತ್ತದೆ. ಅಲ್ಲದೆ, ವಿಸ್ತರಿಸಲಾದ ಸೇವಾವಧಿಯಲ್ಲಿ ಎಂಜಿ ರಸ್ತೆ ನಿಲ್ದಾಣದಲ್ಲಿ ಯಾವುದೇ ರೈಲು ನಿಲುಗಡೆ ಮಾಡುವುದಿಲ್ಲ. ಅದರ ಬದಲು ಎಂಜಿ ರಸ್ತೆ ನಿಲ್ದಾಣದ ಅಕ್ಕಪಕ್ಕದ ನಿಲ್ದಾಣಗಳಾದ ಟ್ರಿನಿಟಿ ವೃತ್ತ ಹಾಗೂ ಕಬ್ಬನ್ ಉದ್ಯಾನ ನಿಲ್ದಾಣಗಳಲ್ಲಿ ರೈಲು ನಿಲುಗಡೆ ನೀಡಲಾಗುತ್ತದೆ. ಜತೆಗೆ ಟ್ರಿನಿಟಿ ವೃತ್ತ ಹಾಗೂ ಕಬ್ಬನ್ ಉದ್ಯಾನ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11 ಗಂಟೆ ನಂತರ ಟೋಕನ್‌ಗಳನ್ನು ವಿತರಿಸುವುದಿಲ್ಲ. ಅದರ ಬದಲು ಪ್ರಯಾಣಿಕರು ರಾತ್ರಿ 8 ಗಂಟೆಯಿಂದ 11 ಗಂಟೆಯೊಳಗೆ ₹50 ಮುಖಬೆಲೆಯ ಹಿಂದಿರುಗುವ ಪ್ರಯಾಣಕ್ಕಾಗಿ ಪೇಪರ್ ಟಿಕೆಟನ್ನು ಖರೀದಿಸಬೇಕಿದೆ. ಅದನ್ನು ಹೊರತುಪಡಿಸಿಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್, ಎನ್‌ಸಿಎಂಸಿ ಕಾರ್ಡ್‌ಗಳನ್ನು ಬಳಸಿ ಸಂಚರಿಸಬಹುದಾಗಿದೆ. ಉಳಿದ ನಿಲ್ದಾಣಗಳಲ್ಲಿ ಮಾಮೂಲಿಯಂತೆ ಟೋಕನ್‌ಗಳನ್ನು ನೀಡಲಾಗುತ್ತದೆ ಎಂದು ಬಿಎಂ ಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.