ಪೌರತ್ವ ವಿರೋಧಿ ಕಾಂಗ್ರೆಸ್ಸಿಗರು ದೇಶದ್ರೋಹಿಗಳು| ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಆರೋಪ|ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಮುಸ್ಲಿಂ ಸಮುದಾಯಕ್ಕೆ ತೊಂದರೆಯಿಲ್ಲ|
ಬಳ್ಳಾರಿ(ಫೆ.09): ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧದ ನೆಪದಲ್ಲಿ ಹಿಂಸಾಚಾರಕ್ಕೆ ಪ್ರೇರೇಪಿಸುತ್ತಿರುವ ಕಾಂಗ್ರೆಸ್ಸಿಗರು ದೇಶದ್ರೋಹಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಇಲ್ಲಿನ ಬಸವಭವನದಲ್ಲಿ ಜಿಲ್ಲಾ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ನೂತನ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಅವರ ಪದ್ರಗಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಈ ನೆಲದ ಮುಸ್ಲಿಂ ಸಮುದಾಯಕ್ಕೆ ಯಾವ ತೊಂದರೆಯಿಲ್ಲ. ಪೌರತ್ವ ಕೊಡುವುದೇ ಹೊರತು, ಕಿತ್ತುಕೊಳ್ಳುವುದಲ್ಲ. ಆದರೆ, ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಚಳುವಳಿ ಹೆಸರಿನಲ್ಲಿ ದೇಶದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿದೆ. ದೇಶದಲ್ಲಿ ಗಲಭೆ ಸೃಷ್ಟಿಸುವವರು ದೇಶದ್ರೋಹಿಗಳು ಆಗುತ್ತಾರೆ ಎಂದು ಮಹಾತ್ಮಗಾಂಧೀಜಿ ಹೇಳಿದ್ದರು. ಅವರ ಮಾತಿನಲ್ಲಿಯೇ ಹೇಳುವುದಾದರೆ ಕಾಂಗ್ರೆಸ್ಸಿಗರು ದೇಶದ್ರೋಹಿಗಳು ಎಂದರು.
ಸೋಮಶೇಖರ ರೆಡ್ಡಿ, ಶ್ರೀರಾಮುಲು ಅಸಮಾಧಾನ?: ಕಟೀಲ್ ಕಾರ್ಯಕ್ರಮಕ್ಕೆ ಗೈರು
ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರೇ ಪೌರತ್ವ ಕೊಡುವ ಕುರಿತು ಪ್ರಶ್ನಿಸಿದ್ದರು. ಅದನ್ನು ಕಾಂಗ್ರೆಸ್‌ನವರು ಮರೆತಂತಿದೆ. ಅವರೇ ಪಕ್ಷದ ನಾಯಕರು ಹೇಳಿದ್ದನ್ನು ನೆನಪು ಮಾಡಿಕೊಳ್ಳಬೇಕು. ವಿನಾಕಾರಣ ಕಾಯ್ದೆಯ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಕೆಲಸ ಮಾಡಬಾರದು. ಕಾಂಗ್ರೆಸ್‌ನವರು ಬರೀ ಗಾಂಧೀಜಿ ಅವರ ಹೆಸರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಾರೆ. ಆದರೆ, ನರೇಂದ್ರ ಮೋದಿ ಅವರ ಸರ್ಕಾರ ಗಾಂಧೀಜಿಯವರ ತತ್ವಗಳು ಹಾಗೂ ವಿಚಾರಗಳನ್ನು ಆಚರಣೆಗೆ ತರುವ ಮಹತ್ವದ ಕಾರ್ಯ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಶಿಥಿಲಗೊಳ್ಳುತ್ತಿದೆ. ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವಷ್ಟುಸಂಖ್ಯಾಬಲವನ್ನು ಸಹ ಕಾಂಗ್ರೆಸ್ ಕಳೆದುಕೊಂಡಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಜನಮಾನಸದಿಂದ ದೂರವಾಗಲಿದೆ. ದೇಶದೆಲ್ಲೆಡೆ ಕಮಲ ಧ್ವಜ ಹಾರಾಡಲಿದ್ದು ಈ ಎಲ್ಲದಕ್ಕೂ ಪಕ್ಷದ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಹೇಳಿದರು.
ಬಿಎಸ್‌ವೈ ಮಾತು ಉಳಿಸಿಕೊಂಡ ನಾಯಕ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತು ಉಳಿಸಿಕೊಂಡ ದಿಟ್ಟನಾಯಕ. ನುಡಿದಂತೆ ನಡೆದ ಮುಖ್ಯಮಂತ್ರಿ. ಅವರು ಹೇಳಿದಂತೆ ಉಪ ಚುನಾವಣೆಯಲ್ಲಿ ಗೆದ್ದವರನ್ನು ಮಂತ್ರಿ ಮಾಡಿದ್ದಾರೆ. ಬಿಎಸ್‌ವೈ ಜನಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅತ್ಯದ್ಭುತ ಕಾರ್ಯನಿರ್ವಹಿಸುತ್ತಿದ್ದಾರೆ. ದೂರದೃಷ್ಟಿಯುಳ್ಳ ಯಡಿಯೂರಪ್ಪ ಅವರು ಜನಕಲ್ಯಾಣದ ಕಾರ್ಯಕ್ರಮ ನೀಡುತ್ತಿದ್ದಾರೆ. ಕಾಂಗ್ರೆಸ್ ವಿನಾಕಾರಣ ಟೀಕೆಯಲ್ಲಿ ತೊಡಗಿಸಿಕೊಂಡಿದ್ದು ಆ ಪಕ್ಷಕ್ಕೆ ಆರು ತಿಂಗಳಾದರೂ ರಾಜ್ಯಾಧ್ಯಕ್ಷರನ್ನು ನೇಮಿಸಿಕೊಳ್ಳುವ ಯೋಗ್ಯತೆ ಸಹ ಇಲ್ಲವಲ್ಲ ಎಂದು ಟೀಕಿಸಿದರು.
ಅಧ್ಯಕ್ಷ ಎಂದರೆ ಜವಾಬ್ದಾರಿ ಎಂದರ್ಥ:
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಎಂದರೆ ಹೆಚ್ಚಿನ ಜವಾಬ್ದಾರಿ ಎಂದರ್ಥ. ಚೆನ್ನಬಸವನಗೌಡ ಪಾಟೀಲ್ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಘಟನೆ ಚತುರರಾಗಿದ್ದಾರೆ. ಎಲ್ಲರನ್ನೂ ಜೊತೆಗಿಟ್ಟುಕೊಂಡು ಜಿಲ್ಲೆಯಲ್ಲಿ ಪಕ್ಷ ಗಟ್ಟಿಗೊಳಿಸುವತ್ತ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಹೀಗಾಗಿಯೇ ಇಡೀ ರಾಜ್ಯದಲ್ಲಿ ಎರಡನೇ ಬಾರಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿದ್ದಾರೆ ಎಂದರು.
ಜಿಲ್ಲೆಯ ಎಲ್ಲ ಕ್ಷೇತ್ರಗಳ ಮನೆಮನೆಗಳಲ್ಲಿ ಬಿಜೆಪಿ ಕಮಲ ಅರಳಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಅಧಿಕಾರಕ್ಕೆ ಬರುವಂತಾಗಬೇಕು. ಈ ದಿಸೆಯಲ್ಲಿ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರಲ್ಲದೆ, ಪಕ್ಷಕ್ಕಾಗಿ ದುಡಿದವರನ್ನು ಪರಿಗಣಿಸುವುದು ಬಿಜೆಪಿಯಲ್ಲಿ ಮಾತ್ರ ಎಂದು ಹೇಳಿದರು.
ಅಧ್ಯಕ್ಷ ಎಂದರೆ ವಿಸಿಟಿಂಗ್ ಕಾರ್ಡ್ ಅಲ್ಲ:
ರಾಜ್ಯಾಧ್ಯಕ್ಷರಿಂದ ಮತ್ತೊಮ್ಮೆ ಜಿಲ್ಲಾಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಮಾಡಿಕೊಂಡ ಚೆನ್ನಬಸವನಗೌಡ ಪಾಟೀಲ್ ಮಾತನಾಡಿ, ಜಿಲ್ಲಾಧ್ಯಕ್ಷನಾದ ಬಳಿಕ ಎಲ್ಲ ನಾಯಕರು ಹಾಗೂ ಕಾರ್ಯಕರ್ತರ ಸಹಕಾರ ಪಡೆದು ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿದವರಿಗೆ ಆದ್ಯತೆ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಬಿಜೆಪಿಯ ಪದಾಧಿಕಾರಿಗಳು ಎಂದರೆ ಬೇರೆ ಪಕ್ಷದಲ್ಲಿದ್ದಂತೆ ಬರೀ ವಿಸಿಟಿಂಗ್ ಕಾರ್ಡ್ ಹಾಕಿಸಿಕೊಳ್ಳಲು ಅಲ್ಲ; ಪಕ್ಷಕ್ಕಾಗಿ ಪ್ರಮಾಣಿಕವಾಗಿ ದುಡಿಯುತ್ತಾರೆ. ಪಕ್ಷದ ಸಿದ್ಧಾಂತದಡಿ ಕಾರ್ಯಕ್ರಮ ರೂಪಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಎಂದರಲ್ಲದೆ, ನಿಮ್ಮೆಲ್ಲರ ಸಹಕಾರ ಪಡೆದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಪಕ್ಷದ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ, ಮಾಜಿ ಶಾಸಕ ನೇಮಿರಾಜ ನಾಯ್ಕ ಮಾತನಾಡಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಡು ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಚಂದ್ರನಾಯ್ಕ, ಜಿ.ಪಂ. ಉಪಾಧ್ಯಕ್ಷೆ ದೀನಾ ಮಂಜುನಾಥ್, ಗೋನಾಳ್ ರಾಜಶೇಖರಗೌಡ, ಎಸ್. ಗುರುಲಿಂಗನಗೌಡ, ಗುತ್ತಿಗನೂರು ವಿರುಪಾಕ್ಷಗೌಡ, ಎಚ್. ಹನುಮಂತಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ, ಡಾ. ಮಹಿಪಾಲ್, ಬಿ. ಶಿವಕುಮಾರ್, ಶ್ರೀನಿವಾಸ ಪಾಟೀಲ್ ಮತ್ತಿತರರಿದ್ದರು.
ಮುರಹರಿಗೌಡ ಗೋನಾಳ್ ಕಾರ್ಯಕ್ರಮ ನಿರ್ವಹಿಸಿದರು. ಲಕ್ಷ್ಮಿ ಪವನಕುಮಾರ್ ಪ್ರಾರ್ಥನೆಗೀತೆ ಹಾಡಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಬಿಜೆಪಿಯ ನೂರಾರು ಕಾರ್ಯಕರ್ತರು ಸಮಾರಂಭದಲ್ಲಿ ಹಾಜರಿದ್ದರು.
ಗೈರಾದ ಪ್ರಮುಖರು
ರಾಜ್ಯ ಅಧ್ಯಕ್ಷರೇ ಪಾಲ್ಗೊಂಡಿದ್ದ ಈ ಮಹತ್ವದ ಕಾರ್ಯಕ್ರಮದಲ್ಲಿ ನೂತನ ಸಚಿವರಾಗಿರುವ ವಿಜಯನಗರ ಕ್ಷೇತ್ರದ ಶಾಸಕರೂ ಆಗಿರುವ ಆನಂದಸಿಂಗ್, ಬಳ್ಳಾರಿಯವರೇ ಆಗಿರುವ ಪ್ರಭಾವಿ ನಾಯಕ ಬಿ. ಶ್ರೀರಾಮುಲು, ಬಳ್ಳಾರಿ ನಗರ ಕ್ಷೇತ್ರದ ಶಾಸಕ ಜಿ. ಸೋಮಶೇಖರ ರೆಡ್ಡಿ, ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲ ಕೃಷ್ಣ ಗೈರಾಗಿದ್ದುದು ವಿಶೇಷವಾಗಿತ್ತು. ಬಹುತೇಕ ರೆಡ್ಡಿ ಮತ್ತು ಶ್ರೀರಾಮುಲು ಪಾಳೆಯದ ಪ್ರಮುಖರು ಕಾರ್ಯಕ್ರಮದಿಂದ ದೂರ ಉಳಿದಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.