'ದಾರಿಯಿಲ್ಲದ ಊರಿಗೆ ಮಳೆಯೇ ಸೇತುವೆ'!

By Web Desk  |  First Published Aug 11, 2019, 12:40 PM IST

ಒದ್ದೆಯಾಗಿರುವುದು ಬರೀ ನೆಲವಷ್ಟೇ ಅಲ್ಲ, ಕಣ್ಣು ಕೂಡ. ಇಂಥ ಹೊತ್ತಲ್ಲಿ ಮಳೆಯನ್ನು ಎದುರಿಸಿ ನಿಂತು ಹಲ್ಲುಕಚ್ಚಿಹಿಡಿದು ಕಾಯುತ್ತಿರುವ ಎಲ್ಲರಿಗೂ ನಮನಗಳನ್ನು ಸಲ್ಲಿಸುತ್ತಾ ಈ ಮಳೆ ಸಂಚಿಕೆಯ ಮೂಲಕ ಕೃತಜ್ಞತೆ ಸಲ್ಲಿಸುತ್ತಿದೆ ಸಾಪ್ತಾಹಿಕ ಪ್ರಭ.


ನಾಗರಾಜ ವೈದ್ಯ

ಸದ್ಯಕ್ಕೀಗ ನಾನು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ಪ್ರದೇಶದಲ್ಲಿದ್ದೀನಿ. ಇಲ್ಲಿಗೆ ಗಂಗಾವಳಿ ನೆರೆಯಿಂದ ಪ್ರವಾಹ ಬಂದಿದೆ. ಇದಕ್ಕೂ ಹಿಂದೆ ಅಂದರೆ  1963ನೇ ಇದೇ ಪ್ರಮಾಣದ ನೆರೆ ಬಂದಿತ್ತು. ಬಳಿಕ ಈಗ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಬಂದಿದೆ. ಇಲ್ಲಿ 50ಕ್ಕೂ ಹೆಚ್ಚು ಮನೆಗಳು ಮುಳುಗಿ ಹೋಗಿವೆ. ಅಷ್ಟೇ ಅಲ್ಲ,ಇನ್ನೂ ಹಲವು ಮನೆಗಳು ಜಖಂ ಆಗಿವೆ.

Tap to resize

Latest Videos

'ಹೊಳೆ ಆಲೂರಲ್ಲಿ ಊರೇ ಇಲ್ಲ, ಹೊಳೆ ಮಾತ್ರ'!

ಸುಮಾರು 250 ರಿಂದ 300 ಎಕರೆಗಳಷ್ಟು ಜಮೀನು ನೀರಲ್ಲಿ ಮುಳುಗಿ ಹೋಗಿದೆ. ಈ ಹೊಳೆ ನೀರು ಇಳಿಯದ ಹೊರತು ಆ ಹೊಲಗಳ ಕತೆಯೇನು ಅನ್ನುವುದು ತಿಳಿಯದು. ಯಾವುದರ ಬಗ್ಗೆಯೂ ಈಗ ಅಂದಾಜೇ ಸಿಗುತ್ತಿಲ್ಲ. ಈ ಊರಿನ ಸುಮಾರು 250 ಜನ ನಿರಾಶ್ರಿತರಾಗಿದ್ದಾರೆ.  ಸುಮಾರು ಮೂರ್ನಾಲ್ಕು ಗಂಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ ಊಟ,ವಸತಿಗೆ ವ್ಯವಸ್ಥೆ ಮಾಡಿದ್ದಾರೆ.

'ಮಳೆ ನೀಡಿದ ಶಾಪ ನಮ್ಮೂರು ಈಗ ದ್ವೀಪ'!

ತಲುಪಲು ಮೂರು ದಿನಗಳು ಬೇಕಾದವು!: ಡೋಂಗ್ರಿ ಪ್ರದೇಶದ ಗಂಜಿ ಕೇಂದ್ರದಲ್ಲಿ ಅಕ್ಕಿ, ದಿನಸಿ, ಮೆಡಿಸಿನ್ ಕೊರತೆ ಇತ್ತು. ನಾವು ಬೆಂಗಳೂರಿನಿಂದ ಸಾಧ್ಯವಾದಷ್ಟನ್ನು ತಗೊಂಡು ಬಂದಿದ್ದೀವಿ. ಬೆಂಗಳೂರಿನಿಂದ ಹೊರಟು ಮೂರು ದಿನಗಳಾದ ಮೇಲೆ ಇಲ್ಲಿಗೆ ತಲುಪಿದ್ದೇವೆ. ಈ ಊರುಗಳಿಗೆ ಸಂಪರ್ಕ ಕಲ್ಪಿಸುವ ಯಾವ ರಸ್ತೆಯೂ ಸುಸ್ಥಿತಿಯಲ್ಲಿಲ್ಲ. ಹಾಗಾಗಿ ಸಾಧ್ಯತೆ ಇರುವ ಎಲ್ಲ ದಾರಿಗಳಲ್ಲೂ ಸಂಚರಿಸಿದೆವು. ಮುಖ್ಯರಸ್ತೆಗಳು ಯಾವುವೂ ಇರಲಿಲ್ಲ. ಕೊನೆಗೆ ಕಾಡುದಾರಿಯಲ್ಲಿ ಮತ್ತೀಘಟ್ಟದಿಂದ ಹಲವು ಕಿಲೋಮೀಟರ್ ಕ್ರಮಿಸಿ ಸುತ್ತು ಬಳಸಿ ಎಲ್ಲೆಲ್ಲೋ ನಡೆದು ಇಲ್ಲಿಗೆ ಬಂದು ತಲುಪಿದ್ದೀವಿ. ಇಲ್ಲಿನವರಿಗೆ ಸಾಧ್ಯವಾದಷ್ಟು ಆಹಾರ, ಔಷಧ ವಿತರಣೆ ಮಾಡುತ್ತಿದ್ದೇವೆ. ಈಗಾಗಲೇ ಮೂರು ಗ್ರಾಮಗಳ ಜನಕ್ಕೆ ಅಗತ್ಯ ಸಾಮಗ್ರಿ ಪೂರೈಸಿದ್ದೀವಿ. ಹಲವು ಕಡೆ ಔಷಧವಿಲ್ಲದೇ, ಅನಾರೋಗ್ಯದಿಂದ ಬಳಲುವ ಹಿರಿಯರು ಮಕ್ಕಳ ಕಥೆ ಕರುಳು ಹಿಂಡುವ ಹಾಗಿದೆ. ಅವ್ರಿಗೆ ಔಷಧ ತಲುಪಿಸಿದಾಗ ಒಂದು ಬಗೆಯ ಸಾರ್ಥಕ ಭಾವ.

ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹದ ಅಪಾಯ ತಪ್ಪುತ್ತಿತ್ತು!

ದಾರಿಗಳೇ ಇಲ್ಲ!: ಉತ್ತರ ಕನ್ನಡದ ತೀರಾ ಹಿಂದುಳಿದ ಡೋಂಗ್ರಿ ಮೊದಲಾದ ಗ್ರಾಮಗಳಿಗೆ ಬರಲು ಯಾವುದೇ ದಾರಿಯಿಲ್ಲ. ಒಂದು ಸೇತುವೆ ಕೊಚ್ಚಿಕೊಂಡು ಹೋಗಿದೆ. ಇನ್ನೊಂದು ಸೇತುವೆ ಪೂರ್ತಿ ಜಲಾವೃತವಾಗಿದೆ. ಇರುವ ಏಕೈಕ ದಾರಿ ಮತ್ತೀಘಟ್ಟದಿಂದ ಬರುವಂಥಾದ್ದು. ಅದು ದಾರಿ ಅಂತ ಹೇಳಬಹುದಷ್ಟೇ, ಅಲ್ಲಿ ಜೀಪ್‌ನಂಥ ವಾಹನ ಬಿಟ್ಟರೆ ಬೇರ‌್ಯಾವ ವಾಹನವೂ ಓಡಾಡಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅದೊಂದು ದಾರಿ ಕ್ಲಿಯರ್ ಇದೆ ಅಂತ ಪ್ರಚಾರವಾಗುತ್ತಿದೆ. ಹಾಗಾಗಿ ಎಲ್ಲರೂ ಆ ದಾರಿಯಾಗಿ ಬರುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಕಳಕಳಿ ಇಷ್ಟೇ, ಆ ದಾರಿಯನ್ನು ಎಮರ್ಜೆನ್ಸಿ ಇದ್ದಾಗ ಮಾತ್ರ ಬಳಸಿ. ಇಲ್ಲವಾದರೆ ಆ ರಸ್ತೆಯೂ ಹಾಳಾಗಿ ಯಾರೂ ಬಳಸದ ಸ್ಥಿತಿಗೆ ಬರಬಹುದು. ಎಮರ್ಜೆನ್ಸಿ ಸನ್ನಿವೇಶ ಬಂದರೆ ಊರವರನ್ನು ದೇವರೇ ಕಾಯಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು, ಅಂಥ ಸ್ಥಿತಿಗೆ ಇಲ್ಲಿಯ ಜನರನ್ನು ನೂಕುವುದು ಬೇಡ. 

 

click me!