ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು ಮೇಯರ್‌ ತಸ್ಲೀಂ ಫುಲ್ ಗರಂ

By Kannadaprabha NewsFirst Published Oct 22, 2020, 11:31 AM IST
Highlights

ಮೈಸೂರು ಮೇಯರ್ ತಸ್ಲೀಂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಫುಲ್ ಗರಂ ಆಗಿದ್ದಾರೆ. ಕಾರಣ

ಮೈಸೂರು (ಅ.22):  ನಗರದ ಲಲಿತಮಹಲ್‌ ಜಂಕ್ಷನ್‌ಗೆ ನಗರ ಪಾಲಿಕೆಯ ಮೃತ ಸದಸ್ಯರ ಹೆಸರನ್ನು ನಾಮಕರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ ಸಿಂಹ ಮತ್ತು ಮೇಯರ್‌ ತಸ್ನೀಂ ನಡುವೆ ಪತ್ರ ಸಮರ ನಡೆದಿದೆ. ಅಲ್ಲದೆ ಶಿಷ್ಟಾಚಾರ ಪಾಲನೆ ಸಂಬಂಧ ಜಿಲ್ಲಾಧಿಕಾರಿ ವಿರುದ್ಧವೂ ಮೇಯರ್‌ ಹರಿಹಾಯ್ದಿದ್ದಾರೆ.

ಈ ಸ್ಥಳವು ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ ಈ ರಸ್ತೆಗೆ ನಾಮಕರಣ ಮಾಡುವ ಅಧಿಕಾರ ನಗರ ಪಾಲಿಕೆಗೆ ಇಲ್ಲ. ಇದು ಕಾನೂನು ಬಾಹಿರ. ಲಲಿತಮಹಲ್‌ ಜಂಕ್ಷನ್‌ಗೆ ಮೃತ ನಗರ ಪಾಲಿಕೆ ಸದಸ್ಯರ ಹೆಸರಿಡುವ ನಿರ್ಣಯವನ್ನು ಕೈಬಿಡಬೇಕು ಎಂದು ಸಂಸದ ಪ್ರತಾಪಸಿಂಹ ಪತ್ರ ಬರೆದಿದ್ದರು. ಈ ಬಗ್ಗೆ ತಿರುಗೇಟು ನೀಡಿರುವ ಮೇಯರ್‌ ತಸ್ನೀಂ, ಸಂಸದರು ಸೂಚಿಸಿದ ಹೆಸರನ್ನು ಪುರಸ್ಕರಿಸದ ಕಾರಣ ಪಾಲಿಕೆ ವಿರುದ್ದ ದ್ವೇಷ ಸಾಧಿಸುತ್ತಿದ್ದಾರೆ. ರಾಷ್ಟೀಯ ಹೆದ್ದಾರಿ ವ್ಯಾಪ್ತಿಯ ವೃತ್ತ ಅಥವಾ ರಸ್ತೆಗಳಿಗೆ ಪಾಲಿಕೆ ನಾಮಕರಣ ಮಾಡುವ ಅಧಿಕಾರ ಇಲ್ಲ ಎಂದಿದ್ದಾರೆ. ಇದು ಸಂಸದರು ಹೆಸರು ಸೂಚಿಸುವಾಗ ನೆನಪಿರಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಎರಡು ಬಾರಿ ಕೌನ್ಸಿಲ್‌ ಸಭೆಗೆ ಬಂದು ವೈದ್ಯರೊಬ್ಬರ ಹೆಸರು ಇಡುವಂತೆ ಸಂಸದರೇ ಮನವಿ ಮಾಡಿದ್ದರು. ಆದರೆ ಪಾಲಿಕೆ ಕೌನ್ಸಿಲ್‌ ಸಭೆ ಒಮ್ಮತದ ನಿರ್ಣಯದಂತೆ ನಗರ ಪಾಲಿಕೆಯ ಮಾಜಿ ಸದಸ್ಯರೊಬ್ಬರ ಹೆಸರಿಡಲು ತೀರ್ಮಾನ ಮಾಡಲಾಗಿದೆ. ನಾವು ಕಾನೂನಾತ್ಮಕವಾಗಿಯೆ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿ ಸರ್ಕಾರದ ಅನುಮತಿ ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಏಕಾಏಕಿ ನಗರ ಪಾಲಿಕೆ ಈ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಇಷ್ಟವಿಲ್ಲ-2 ವಾರ ಕೊಡಿ : ರೋಹಿಣಿ ಸಿಂಧೂರಿ ...

ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಸರಿಡುವ ಅಧಿಕಾರ ಇಲ್ಲ ಎಂದು ಕೇಂದ್ರ ಸರ್ಕಾರ ಸೂಚಿಸಿರುವ ಸುತ್ತೋಲನೆ ನೀಡಲಿ. ಸಂಸದರಿಗೆ ನಗರ ಪಾಲಿಕೆಯ ಮೇಲೆ ಮನಸ್ತಾಪವಿದ್ದರೆ ಖುದ್ದಾಗಿ ಬಂದು ಬಗೆಹರಿಸಿಕೊಳ್ಳಲಿ. ಅದನ್ನು ಬಿಟ್ಟು ಕೌನ್ಸಿಲ್‌ ತೀರ್ಮಾನ ತಿರಸ್ಕರಿಸುವುದು ಸರಿಯಲ್ಲ. ಕಳೆದ ಹತ್ತು ವರ್ಷದಿಂದ ನಗರ ಪಾಲಿಕೆ ಮಾಡಿರುವ ನಾಮಕರಗಳನ್ನು ಹಿಂದಕ್ಕೆ ಪಡೆಯಲು ಸಾಧ್ಯವೇ ಎಂದರು.

ಡಿಸಿ ವಿರುದ್ಧವೂ ಕಿಡಿ:  ಮುಖ್ಯಮಂತ್ರಿಗಳು ಮೈಸೂರು ನಗರಕ್ಕೆ ಆಗಮಿಸಿದ ವೇಳೆ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಪಾಲಿಸಿಲ್ಲ ಎಂದು ಮೇಯರ್‌ ದೂರಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಶಿಷ್ಟಾಚಾರ ಪಾಲಿಸಿಲ್ಲ. ದಸರಾ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಸ್ವಾಗತಿಸುವಾಗ ಪ್ರಥಮ ಪ್ರಜೆಗೆ ಅವಕಾಶ ನೀಡಬೇಕು. ಆದರೆ ಮೇಯರ್‌ ಅವರನ್ನು ಒಳಗೆ ಬಿಡದಂತೆ ಡಿಸಿ ಪೊಲೀಸರಿಗೆ ಸೂಚಿಸಿದ್ದಾರೆ. ಉದ್ಘಾಟನೆ ವೇಳೆ ಉಸ್ತುವಾರಿ ಸಚಿವರ ಪಕ್ಕ ನಮ್ಮ ಆಸನ ಇರಿಸಬೇಕು. ಆದರೆ ಕಡೆಯಲ್ಲಿ ಕೂರಿಸಿದ್ದಾರೆ. ಯಾರ ಮನವೊಲಿಸಲು ಈ ಕೆಲಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ಆಂಧ್ರದ ಹೆಣ್ಣಿಗಾಗಿ ದಲಿತ ಅಧಿಕಾರಿ ಎತ್ತಂಗಡಿ : ರೋಹಿಣಿ ವಿರುದ್ಧ ಸಾರಾ ಆಕ್ರೋಶ ...

ಲೋಕೇಶ್‌ ಪಿಯಾ ಖಂಡನೆ:

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೇಯರ್‌ರನ್ನು ಅಗೌರವಿಸತ್ತಿದ್ದಾರೆ ಎಂದು ಪಾಲಿಕೆ ಸದಸ್ಯ ಲೋಕೇಶ್‌ ಪಿಯಾ ಟೀಕಿಸಿದ್ದಾರೆ.

ಶಿಷ್ಟಾಚಾರ ಪಾಲಿಸದೇ ಇಡೀ ಮೈಸೂರಿನ ಜನತೆಗೆ ಅಪಮಾನ ಮಾಡುತ್ತಿದ್ದಾರೆ. ಇದಲ್ಲದೇ ಜಂಬೂ ಸವಾರಿಯಲ್ಲಿ ಮೇಯರ್‌ ಕುದುರೆ ಸವಾರಿ ಮಾಡುವುದಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸಿ, ಕುದುರೆ ಸವಾರಿಗೆ ಅವಕಾಶ ಮಾಡಿಕೊಡಲಿಲ್ಲ ಎಂದರೇ ಎಲ್ಲಾ ಪಾಲಿಕೆ ಸದಸ್ಯರ ಜೊತೆಗೂಡಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

click me!