ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮೂಡಾ) 50:50 ಮಾದರಿಯಲ್ಲಿ ನಿವೇಶನ ಹಂಚಿಕೆ ಮಾಡಿರುವುದನ್ನು ರದ್ದುಗೊಳಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್
ಮೈಸೂರು (ಜು.01): ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧಿಕಾರಿಗಳು 50:50 ಮಾದರಿಯಲ್ಲಿ ನಿವೇಶನ ಹಂಚಿಕೆ ಮಾಡಿರುವುದನ್ನು ರದ್ದುಗೊಳಿಸಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಆದೇಶ ಹೊರಡಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮೂಡಾ ಕಚೇರಿಯಲ್ಲಿ ಸೈಟು ಹಂಚಿಕೆ ಕುರಿತ ಕೇಸಿನ ಪರಿಶೀಲನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂಡಾದಲ್ಲಿ 50-50 ಅನುಪಾತದಲ್ಲಿ ನಿಯಮ ಬಾಹೀರ ಹಂಚಿಕೆಯನ್ನು ರದ್ದು ಮಾಡಲಾಗಿದೆ. ಈ ನಿವೇಶನಗಳ ಹಂಚಿಕೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 87ರ ಅನ್ವಯ ರದ್ದು ಪಡಿಸಲು ಆದೇಶ ಮಾಡಲಾಗಿದೆ. 27-102023ರಲ್ಲಿ ಈ ಆದೇಶ ಮಾಡಲಾಗಿದೆ. ಆದರೆ, 50-50 ಅನುಪಾತದ ನಿವೇಶನ ಹಂಚಿಕೆ 2020ನೇ ಇಸವಿಯಲ್ಲಿ ಜಾರಿಗೆ ಬಂದಿದೆ. ಇನ್ನು ಜಾಗ ನೀಡಲು ಕ್ಯಾಬಿನೆಟ್ ಸಮ್ಮತಿ ಬೇಕು ಎಂದು ನಿಯಮದಲ್ಲಿದೆ. ಆದರೆ ಈವರೆಗೆ ಮೂಡಾ ನೀಡಿರುವ ಜಾಗಕ್ಕೆ ಯಾವುದೇ ಕ್ಯಾಬಿನೆಟ್ ತೀರ್ಮಾನ ಆಗಿಲ್ಲ. ಆದರೂ, ಇದೇ ನಿಯಮವನ್ನು ಮೀರಿ ಮೂಡಾ ಅಧಿಕಾರಿಗಳು ಸಾಕಷ್ಟು ಸೈಟ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.
undefined
ಮಂತ್ರಿಗಳ ಆಪ್ತರ ಕಂಪನಿಗಳಿಗೆ ಟೆಂಡರ್, ಉಳಿದ ಕಂಪನಿಗಳು ಬ್ಲಾಕ್ ಲಿಸ್ಟ್; ವಿನಯ್ ಕುಲಕರ್ಣಿ ಆಕ್ರೋಶ
ಮೂಡಾ ಅಧಿಕಾರಿಗಳ ಸೈಟು ಹಂಚಿಕೆಯಲ್ಲಿ ಎಷ್ಟು ಅಕ್ರಮ ಆಗಿದೆ ಅಂತ ಗೊತ್ತಿಲ್ಲ. ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ತನಿಖೆ ನಡೆಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಈ ನಿಯಮ ಜಾರಿಗೆ ತಂದಿದೆ. ಅಲ್ಲಿಂದ ಏನಾಗಿದೆ ಎಂಬುದನ್ನು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಮೂಡಾದಿಂದ 50:50 ಮಾದರಿಯಲ್ಲಿ ಮಾಡಲಾದ ನಿವೇಶನ ಹಂಚಿಕೆಯಲ್ಲಿ ನಡೆದ ಅಕ್ರಮದ ಬಗ್ಗೆ 4 ವಾರಗಳಲ್ಲಿ ವರದಿ ನೀಡುವಂತೆ ಆದೇಶ ಮಾಡಲಾಗಿದೆ. ಇದಕ್ಕಾಗಿ ಇಬ್ಬರು ಐಎಎಸ್ ಅಧಿಕಾರಿಗಳಾದ ವೆಂಕಟಚಲಪತಿ, ಕವಳಗಿ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನು ಮೂಡಾದಲ್ಲಿ ನಡೆದಿರುವ ಹಗರಣದ ಆರೋಪಿಗಳಾಗಿರುವ ಮೂಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಹಾಗೂ ಕಾರ್ಯದರ್ಶಿ ಮತ್ತು ಎಇಇ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
ಮೈಸೂರಿನ ಮೂಡಾ ಕಚೇರಿಯಲ್ಲಿ ಮುಂದಿನ ಒಂದು ತಿಂಗಳು ಯಾವುದೇ ಸೈಟ್ ಹಂಚಿಕೆ ಮಾಡುವುದು ಅಥವಾ ಸಭೆ ನಡೆಸುವುದನ್ನು ಮಾಡುವಂತಿಲ್ಲ. ಈ ಹಿಂದೆ ಹಂಚಿಕೆಯಾಗಿರೋ ಎಲ್ಲಾ ಸೈಟುಗಳನ್ನ ಕೂಡ ತಡೆ ಹಿಡಿಯಲಾಗುತ್ತದೆ. ಇನ್ನು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆಯೇ ಹೊರತು, ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮವಲ್ಲ. ನಿಷ್ಪಕ್ಷಪಾತ ತನಿಖೆ ಹಿನ್ನಲೆ ಅಧಿಕಾರಿಗಳ ವರ್ಗಾವಣೆಗೆ ಮಾಡಲಾಗಿದೆ. ತನಿಖೆಯಲ್ಲಿ ಅವರ ತಪ್ಪು ಕಂಡುಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೀಲ್ಸ್ ಶೋಕಿದಾರಿನಿಗೆ ಜೈಲು ತೋರಿಸಿದ ಖಾಕಿ; ಅರುಣ್ ಕಟಾರೆ ಈಗ ಕೇರ್ ಆಫ್ ಪರಪ್ಪನ ಅಗ್ರಹಾರ
ಮೂಡಾ ಅಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರವಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಇಲ್ಲಿ ಯತೀಂದ್ರ ಸಿದ್ದರಾಮಯ್ಯನವರ ಪಾತ್ರ ಈ ಕ್ಷಣದಲ್ಲಿ ಕಂಡು ಬರುತ್ತಿಲ್ಲ. ಹಿಂದೆ ಶಾಸಕರಾಗಿದ್ದ ಅವರು, ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಇನ್ನು ಹೆಚ್. ವಿಶ್ವನಾಥ್ ನಮಗಿಂತ ಹಿರಿಯರು, ಅವರ ಬಳಿ ಯಾವುದಾದರು ಸಾಕ್ಷಿ ಇದಿಯಾ ಯತೀಂದ್ರ ಬಗ್ಗೆ ಹೇಳೋಕೆ. ಅವರ ಹೇಳಿಕೆ ಬಗ್ಗೆ ದೇವರೇ ನೋಡಿಕೊಳ್ಳಬೇಕು. ಸಾಕ್ಷಿ ಇದ್ದರೆ ತಂದುಕೊಡಲಿ ಪರಿಶೀಲನೆ ಮಾಡಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.