
ಮೈಸೂರು: ಕಳೆದ ವರ್ಷ ಮೈಸೂರು ದಸರಾ ವೇಳೆ ಡ್ರೋನ್ ಚಿತ್ರವನ್ನು ರಚಿಸಿ ಗಿನ್ನೆಸ್ ದಾಖಲೆ ಬರೆದಿದ್ದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಈ ಬಾರಿ ಮತ್ತೊಂದು ಗಿನ್ನೆಸ್ ದಾಖಲೆ ನಿರ್ಮಿಸಿದೆ. 3473 ಡ್ರೋನ್‌ಗಳನ್ನು ಬಳಸಿ ರಚಿಸಿದ್ದ ನವಿಲು ವಿನ್ಯಾಸ ಗಿನ್ನೆಸ್ ದಾಖಲೆ ನಿರ್ಮಿಸಿದೆ.
ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಡ್ರೋನ್ ಪ್ರದರ್ಶನದಲ್ಲಿ ಈ ನೂತನ ಸಾಧನೆ ದಾಖಲಾಗಿದೆ. ಡ್ರೋನ್‌ಗಳು ಏಕಕಾಲದಲ್ಲಿ ವಿವಿಧ ಬಣ್ಣಗಳ ಬೆಳಕಿನೊಂದಿಗೆ ಸಂಯೋಜನೆಗೊಂಡು ರಾಷ್ಟ್ರೀಯ ಪಕ್ಷಿ ನವಿಲಿನ ವಿನ್ಯಾಸವನ್ನು ರಚಿಸಿದ್ದು, ಇಡೀ ಮೈದಾನದಲ್ಲಿ ನೆರೆದಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಒಟ್ಟು 12 ವಿನ್ಯಾಸಗಳಲ್ಲಿ 3473 ಡ್ರೋನ್‌ಗಳ ಮೂಲಕ ರಚಿಸಲಾದ ನವಿಲಿನ ವಿನ್ಯಾಸ, ಅತಿ ಹೆಚ್ಚು ಡ್ರೋನ್‌ಗಳನ್ನು ಬಳಸಿಕೊಂಡು ರಚಿಸಲಾದ ಪಕ್ಷಿಯ ವಿನ್ಯಾಸವೆಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್ ದಾಖಲೆಯ ಪುಟ ಸೇರಿತು.
ಡ್ರೋನ್ ಪ್ರದರ್ಶನದ ನಂತರದ ಲಂಡನ್‌ನಿಂದ ಆಗಮಿಸಿದ್ದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡ ಸದಸ್ಯರು, ಸೆಸ್ಕ್ ವತಿಯಿಂದ ನಿರ್ಮಿಸಲಾದ ನೂತನ ಗಿನ್ನಿಸ್ ದಾಖಲೆಯನ್ನು ಅಧಿಕೃತವಾಗಿ ಘೋಷಿಸುವುದರೊಂದಿಗೆ, ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್ ಹಾಗೂ ಇತರೆ ಅಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು.
ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ವರ್ಷ ಕಂಬಳ ಕ್ರೀಡಾಕೂಟ ಸೇರ್ಪಡೆಗೊಂಡಿದ್ದು, ನಾಡಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಆಯೋಜಿಸಿದ್ದ ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ ‘ಕಂಬಳ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದರು.
ಸಾಕಷ್ಟು ವಿರೋಧದ ನಡುವೆಯೂ ಮೊದಲ ಬಾರಿಗೆ ಪರಿಚಯಿಸಲಾದ ಕಂಬಳಾ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಂಬಳಾ ಓಟಗಾರರನ್ನು ಸಾವಿರಾರು ಮಂದಿ ಪ್ರೇಕ್ಷಕರು ಕಿರುಚಾಟ, ಚಪ್ಪಾಳೆ, ಶಿಳ್ಳೆಯೊಂದಿಗೆ ಪ್ರೋತ್ಸಾಹಿಸಿದರು. ಕಂಬಳದಲ್ಲಿ 150 ಜೊತೆ ಕೋಣಗಳು ಭಾಗವಹಿಸಿದ್ದು, ಸ್ಪರ್ಧೆ ಸೋಮವಾರ ಮುಂಜಾನೆವರೆಗೂ ನಿರಂತರವಾಗಿ ನಡೆಯಿತು. ಆರು ವಿಭಾಗಗಳಲ್ಲಿ ಕಂಬಳ ಆಯೋಜಿಸಲಾಗಿತ್ತು. ಜೋಡುಕರೆ ಕಂಬಳವನ್ನು ಸಾವಿರಾರು ಮಂದಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. 20 ಎಕರೆ ವಿಶಾಲ ಪ್ರದೇಶದಲ್ಲಿ ಆಯೋಜಿಸಿರುವ ಸ್ಪರ್ಧೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ಬಗೆಯ ಅನುಭವ ನೀಡಿತು. ಇದರಿಂದಾಗಿ ದಸರಾದಲ್ಲಿ ಕರಾವಳಿ-ಮೈಸೂರು ಭಾಗದ ಸಂಸ್ಕೃತಿಗಳ ಸಮ್ಮಿಲನವಾಯಿತು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಜೆ ಮೈಸೂರಿಗೆ ಆಗಮಿಸಿ ಕಂಬಳ ವೀಕ್ಷಿಸಿದರು. ಬೆಂಗಳೂರಿನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಸಾತಗಳ್ಳಿ ಬಳಿ ಆಯೋಜಿಸಿರುವ ಕಂಬಳದ ಸ್ಥಳಕ್ಕೆ ತೆರಳಿ ಜೋಡುಕರೆ ಕಂಬಳ ವೀಕ್ಷಿಸಿದರು.