ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಆ.31ರಂದು ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಮಂಡ್ಯ (ಆ.30): ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಆ.31ರಂದು ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಭಾನುವಾರ ಕಬ್ಬು ಅರೆಯಲು ಸಜ್ಜಾಗಿರುವ ಕಾರ್ಖಾನೆಯ ಎಲ್ಲ ಘಟಕಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆ.31ಕ್ಕೆ ಕಾರ್ಖಾನೆಗೆ ಕಬ್ಬು ತರಲು ರೈತರಿಗೆ ತಿಳಿಸಿದ್ದೇವೆ. ಅಂದೇ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಾಗುವುದು. ಸೆ.10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಕಾರ್ಖಾನೆ ಆರಂಭಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದರು.
ಮೈಷುಗರ್ ಕಾರ್ಖಾನೆಯ ಕಷ್ಟದ ದಿನಗಳು ಮುಗಿದಿವೆ. ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ದಿಸೆಯಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅನುದಾನದ ಕೊರೆತೆ ಉಂಟಾಗದಂತೆ ಎಚ್ಚರ ವಹಿಸಿದ್ದೇವೆ. ಹಿಂದಿನ ವ್ಯವಸ್ಥೆ ಹಾಗೂ ಹಿಂದಿನ ಕಹಿ ಘಟನೆಗಳು ನಮ್ಮ ಕಣ್ಮುಂದಿವೆ. ಅದನ್ನು ಗಮನದಲ್ಲಿಟ್ಟುಕೊಂಡು ತಾಂತ್ರಿಕ ವರದಿಯನ್ನು ಆಧರಿಸಿ ಎಲ್ಲರ ಸಹಕಾರದಿಂದ ಕಾರ್ಖಾನೆ ಪುನಶ್ಚೇತನಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
Mandya: ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ: ರಸ್ತೆ ಸಂಪರ್ಕ ಕಡಿತ
ನಷ್ಟದ ಹಾದಿ ಹಿಡಿಯದಂತೆ ಎಚ್ಚರಿಕೆ: ಕಂಪನಿ ಮುಂದೆ ನಷ್ಟದ ಹಾದಿಗೆ ಹೋಗದ ರೀತಿಯಲ್ಲಿ ತಾಂತ್ರಿಕ ವರದಿ ಮತ್ತು ಹಣಕಾಸಿನ ವ್ಯವಸೆ ಮಾಡಿಕೊಂಡು ಹೆಜ್ಜೆ ಇಡಲಾಗುತ್ತಿದೆ. ಹಿಂದೆ ಎಲ್ಲೆಲ್ಲಿ ಹಣ ಪೋಲಾಗುತ್ತಿತ್ತು. ಯಾವ ಘಟಕದಲ್ಲಿ ನಷ್ಟಉಂಟಾಗುತ್ತಿತ್ತು ಎಂಬುದನ್ನು ಪತ್ತೆ ಹಚ್ಚಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಭಾಗದ ರೈತರಿಗೆ ನೀಡಿದ್ದ ಮಾತಿನಂತೆ ಕಾರ್ಖಾನೆಯನ್ನು ಪ್ರಾರಂಭಿಸಿದ್ದೇವೆ. ಮುಂದೆ ಕಾರ್ಖಾನೆ ಎಂದಿಗೂ ನಿಲ್ಲದ ರೀತಿಯಲ್ಲಿ ನಡೆಸಿ ತೋರಿಸುತ್ತೇವೆ ಎಂದು ದೃಢವಾಗಿ ಹೇಳಿದರು.
ತಾಂತ್ರಿಕ ಅಡೆ-ತಡೆ: ನಿಗದಿತ ಅವಧಿಯೊಳಗೆ ಕಾರ್ಖಾನೆ ಪ್ರಾರಂಭ ಮಾಡಲು ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿದ್ದವು. ಯಂತ್ರೋಪಕರಣಗಳನ್ನು ಬೇರೆಡೆಗೆ ಕೊಂಡೊಯ್ದು ದುರಸ್ತಿ ಮಾಡಬೇಕಾದ ಪರಿಸ್ಥಿತಿ ಇತ್ತು. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲ ಅಡೆ ತಡೆಗಳನ್ನೂ ನಿವಾರಿಸಿ ಕಾರ್ಖಾನೆ ಪ್ರಾರಂಭಿಸುತ್ತಿದ್ದೇವೆ. ಅದಕ್ಕೆ ಸ್ವಲ್ಪ ತಡವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೈಷುಗರ್ ಕಾರ್ಖಾನೆ ಕರ್ನಾಟಕಕ್ಕೆ ಹೆಮ್ಮೆಯ ಕಾರ್ಖಾನೆಯಾಗಿದೆ. ಇದನ್ನು ಹೇಗಾದರೂ ಮಾಡಿ ಪುನಶ್ಚೇತನ ಮಾಡಬೇಕು ಎಂಬುದು ಮುಖ್ಯಮಂತ್ರಿಯವರ ಉದ್ದೇಶವಾಗಿತ್ತು.
ಅದಕ್ಕಾಗಿ ತಾಂತ್ರಿಕ ಸಮಿತಿ ರಚಿಸಿ ಅಧ್ಯಯನ ಮಾಡಿ ವರದಿ ತೆಗೆದುಕೊಂಡ ಬಳಿಕ ಹಣಕಾಸಿನ ವ್ಯವಸ್ಥೆಯನ್ನೂ ನೋಡಿಕೊಂಡು ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ಪುನರಾರಂಭಕ್ಕೆ ಯೋಜನೆ ರೂಪಿಸಿದೆವು. ಪ್ರಾಮಾಣಿಕ ಅಧಿಕಾರಿಗಳನ್ನು ಕಾರ್ಖಾನೆಗೆ ನಿಯೋಜನೆ ಮಾಡಿ ಎಲ್ಲವನ್ನೂ ಸಜ್ಜುಗೊಳಿಸಲಾಯಿತು. ಅದರಿಂದಾಗಿ ಸುಸೂತ್ರವಾಗಿ ಕಾರ್ಖಾನೆ ಆರಂಭವಾಗುತ್ತಿದೆ ಎಂದರು. ಕಾರ್ಖಾನೆಯಲ್ಲಿ ಸಹ ವಿದ್ಯುತ್ ಘಟಕ ಇದೆ. ಡಿಸ್ಟಿಲರಿ ಇದೆ. ಇದನ್ನೂ ಸಹ ಉಪಯೋಗಿಸಿಕೊಂಡು ಲಾಭದಾಯಕವಾಗಿ ಕಾರ್ಖಾನೆಯನ್ನು ಮುನ್ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಕಾರ್ಖಾನೆಯಲ್ಲಿ ಎಥನಾಲ್ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು.
4 ಲಕ್ಷ ಟನ್ ಕಬ್ಬು ಒಪ್ಪಿಗೆ: ಮೈಷುಗರ್ ವ್ಯಾಪ್ತಿಯಲ್ಲಿ ಸಧ್ಯ 4 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಇನ್ನೂ ಹೆಚ್ಚುವರಿ ಕಬ್ಬಿನ ಅಗತ್ಯವಿದ್ದು, ಈ ಹಿಂದೆ ಮೈಷುಗರ್ ವ್ಯಾಪ್ತಿಯಲ್ಲಿ ಬರಬಹುದಾದ ಕಬ್ಬನ್ನೂ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ವ್ಯವಹರಿಸಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಇತರೆ ಕಾರ್ಖಾನೆಗಳಿಗೂ ನಷ್ಟವಾಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು ಎಂದರು.
ಸೆಸ್ಕ್ಗೆ 31 ಕೋಟಿ ರು. ಪಾವತಿ: ಕಾರ್ಖಾನೆಗೆ ಸರಬರಾಜು ಮಾಡಿದ ವಿದ್ಯುತ್ಗಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ 31 ಕೋಟಿ ರು. ಬಾಕಿ ಪಾವತಿ ಮಾಡಲಾಗಿದೆ. ಉಳಿದಂತೆ ಕಾರ್ಖಾನೆಗೆ ಅಗತ್ಯವಾಗಿರುವ ದುಡಿಯುವ ಬಂಡವಾಳವನ್ನೂ ಹಂತ ಹಂತವಾಗಿ ಪರಿಶೀಲನೆ ನಡೆಸಿ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಗಣೇಶ, ಸಾವರ್ಕರ್ ಹೆಸರಲ್ಲಿ ಬಿಜೆಪಿ ರಾಜಕೀಯ: ಚಲುವರಾಯಸ್ವಾಮಿ
33 ಕಾರ್ಖಾನೆಗಳಿಗೆ ಅನುಮತಿ: ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳ ಪೈಕಿ 33 ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಶೀಘ್ರ ಎಲ್ಲ ಕಾರ್ಖಾನೆಗಳೂ ಎಥೆನಾಲ್ ಘಟಕಗಳನ್ನು ಅಳವಡಿಸಿಕೊಂಡು ಶೀಘ್ರ ಕಾರಾರಯರಂಭ ಮಾಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪಾ ಸಾಹೇಬ, ಪ್ರಧಾನ ವ್ಯವಸ್ಥಾಪಕ ಬಿ.ಸಿ. ಶಿವಾನಂದಮೂರ್ತಿ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ, ರೈತ ಮುಖಂಡರಾದ ಸುನಂದಾ ಜಯರಾಂ, ಕೆ. ಬೋರಯ್ಯ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಇತರರಿದ್ದರು.