ಜೆಡಿಎಸ್‌ಗೆ ಪ್ರಭಾವಿ ಮುಖಂಡರ ಸಾಮೂಹಿಕ ರಾಜೀನಾಮೆ..? ದಳಪತಿಗಳಿಗೆ ಕಂಟಕ

By Kannadaprabha NewsFirst Published Feb 28, 2021, 10:38 AM IST
Highlights

ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೂ ಅಂದಿನಿಂದಲೂ ಸಮಸ್ಯೆ ಮಾತ್ರ ತಪ್ಪುಲ್ಲ. ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಿದೆ ಜೆಡಿಎಸ್.. ಇದೀಗ ಪ್ರಭಾವಿ ಮುಖಂಡರಿಂದ ಸಾಮೂಹಿಕ ರಾಜೀನಾಮೆ ಸಂದೇಶ ಬಂದಿದೆ. 

 ಮೈಸೂರು (ಫೆ.28):  ಮೈಸೂರು ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ಮತದಾನಕ್ಕೆ ಗೈರಾದ ಶಾಸಕ ಜಿ.ಟಿ. ದೇವೇಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಜೆಡಿಎಸ್‌ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷದ ವರಿಷ್ಠರು ಜಿ.ಟಿ. ದೇವೇಗೌಡ ಮತ್ತು ಸಂದೇಶ್‌ ನಾಗರಾಜ್‌ ಅವರನ್ನು ಪಕ್ಷದಿಂದ ಉಚ್ಛಾಟಿಸದಿದ್ದರೆ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು.

'2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ

ಜಿ.ಟಿ. ದೇವೇಗೌಡ ಪಕ್ಷದಲ್ಲೇ ಇರಲಿದ್ದಾರೆಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಿ.ಟಿ. ದೇವೇಗೌಡ ಅವರು ಎಚ್‌.ಡಿ. ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕೂಡಲೇ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಜಿ.ಟಿ. ದೇವೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡದಿದ್ದರೆ, ಮೈಸೂರಿನಲ್ಲಿ ಹಲವರು ಜೆಡಿಎಸ್‌ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಕೊಡುವುದಾಗಿ ಅವರು ಎಚ್ಚರಿಸಿದರು.

ಜಿ.ಟಿ. ದೇವೇಗೌಡ ಅವರಿಗೆ ಕುಟುಂಬ ರಾಜಕಾರಣ ಮತ್ತು ಹಣವೇ ಮುಖ್ಯವಾಗಿದೆ. ಮೇಯರ್‌ ಚುನಾವಣೆಯಲ್ಲಿ ಮತ ಹಾಕದೆ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಶಾಸಕ ಸಾ.ರಾ. ಮಹೇಶ್‌ ಮತ್ತು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಸುಳ್ಳು ಮಾಹಿತಿ ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ. ಜಿ.ಟಿ. ದೇವೇಗೌಡರೇ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಮೇಯರ್‌ ಚುನಾವಣೆಯಲ್ಲಿ ಮತ ಹಾಕಲು ಅವರು ಗೈರಾಗಿದ್ದೆ ಸಾಕ್ಷಿ. ಈಗಾಗಲೇ ಜೆಡಿಎಸ್‌ ಪಕ್ಷದಲ್ಲಿ ಜಿ.ಟಿ. ದೇವೇಗೌಡ ಅವರು ಇಲ್ಲ, ಅವರು ಸ್ವತಂತ್ರರಾಗಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶಕ್ತಿ ಪ್ರದರ್ಶಿಸಲಿ ಎಂದು ಅವರು ಸವಾಲು ಹಾಕಿದರು.

ಮೇಯರ್‌ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ನಾವು ಭರವಸೆ ನೀಡಿರಲಿಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಮಾನ ದೂರ ಕಾಯ್ದುಕೊಂಡಿದ್ದೇವೆ. ಕಾಂಗ್ರೆಸ್‌ನವರು ಜೆಡಿಎಸ್‌ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದರು. ಅದಕ್ಕೆ ಉತ್ತರ ನೀಡಲು ಎಚ್‌.ಡಿ. ಕುಮಾರಸ್ವಾಮಿ ಅವರೇ ನೇರ ರಂಗ ಪ್ರವೇಶ ಮಾಡಿದರು ಎಂದರು.

ನಾನೇನು ದ್ರೋಹ ಮಾಡಿದೆ?

ಜಿಪಂ ಸದಸ್ಯ ಎಸ್‌. ಮಾದೇಗೌಡ ಮಾತನಾಡಿ, ಜಿ.ಟಿ. ದೇವೇಗೌಡ ಅವರು ನನಗೆ ತಂದೆ ಸಮಾನ. ರಾಜಕಾರಣದಲ್ಲಿ ಅವರು ನನಗೆ ತಂದೆ. ನನ್ನ ಪತ್ನಿಯನ್ನು (ರುಕ್ಮಿಣಿ) ಮೇಯರ್‌ ಚುನಾವಣೆಯಲ್ಲಿ ಕಣಕ್ಕೆ ಇಳಿಸುವುದಾಗಿ ಹೇಳಿದಾಗ ಮತ ಹಾಕುವುದಾಗಿ ಹೇಳಿದ್ದರು. ಆದರೆ, ಚುನಾವಣೆ ದಿನ ಅವರು ನಮ್ಮ ಕರೆ ಸ್ವೀಕರಿಸಲಿಲ್ಲ. ನನ್ನ ಪತ್ನಿ ಮೇಯರ್‌ ಆಗಿ ಆಯ್ಕೆಯಾದ ಬಳಿಕವು ಕರೆ ಮಾಡಿದಾಗ ಸ್ಪಂದಿಸಲಿಲ್ಲ. ಅವರಿಂದ ಇದನ್ನು ನಾನು ನಿರೀಕ್ಷಿಸಿರಲಿಲ್ಲ. ನಾನೇನು ದ್ರೋಹ ಮಾಡಿದೆ ಎಂದು ಬೇಸರಗೊಂಡ ಸುಮ್ಮನಾಗಿದ್ದಾಗಿ ತಿಳಿಸಿದರು.

ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಜೆಡಿಎಸ್‌ ಮುಖಂಡ ಅಬ್ದುಲ್ಲಾ (ಅಜೀಜ್‌) ಮಾತನಾಡಿ, ಬಿಜೆಪಿಯೊಂದಿಗೆ ಕುಮಾರಸ್ವಾಮಿ ಅವರು ಡೀಲ್‌ ಮಾಡಿಕೊಂಡಿದ್ದರು. ಅಲ್ಪಸಂಖ್ಯಾತರಿಗೆ ಸ್ಥಾನಮಾನವಿಲ್ಲ ಎಂದು ಮಾಜಿ ಮೇಯರ್‌ಗಳಾದ ಆರೀಫ್‌ ಹುಸೇನ್‌, ಅಯೂಬ್‌ ಖಾನ್‌ ಹೇಳಿರುವುದು ಖಂಡನಿಯ. ಆರೀಫ್‌ ಹುಸೇನ್‌, ಆಯೂಬ್‌ ಖಾನ್‌ ಬಿಜೆಪಿಗೆ ಡೀಲ್‌ ಆಗಿ, ಮೇಯರ್‌ ಚುನಾವಣೆಯಲ್ಲಿ ತಟಸ್ಥ ನೀತಿ ಅನುಸರಿಸಿದ್ದರು ಎಂದು ಆರೋಪಿಸಿದರು.

click me!