ಬೆಳಗಾವಿ: CAA ವಿರೋಧಿಸಿ ಮುಸ್ಲಿಂ ಮಹಿಳೆಯರಿಂದ ಬೃಹತ್ ಮೌನ ಪ್ರತಿಭಟನೆ

By Kannadaprabha NewsFirst Published Feb 20, 2020, 2:44 PM IST
Highlights

ಸಿಎಎ ಕಾಯಿದೆ ವಿರೋಧಿಸಿ ಮುಸ್ಲಿಂ ಮಹಿಳೆಯರಿಂದ ಮೌನ ಪ್ರತಿಭಟನೆ| ಬೆಳಗಾವಿ ನಡೆದ ಪ್ರತಿಭಟನೆ| ಯಾವುದೇ ಕಾರಣಕ್ಕೂ ನಾವು ಈ ಕಾಯ್ದೆ ಒಪ್ಪುವುದಿಲ್ಲ| ಈ ಕಾಯ್ದೆ ಮಾನವೀಯತೆ ವಿರೋಧಿ| ಸಂವಿಧಾನ ನಮಗೆ ಕೊಟ್ಟಿರುವ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ|

ಬೆಳಗಾವಿ(ಫೆ.20): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಳಗಾವಿಯಲ್ಲಿ ಮುಸ್ಲಿಮ್ ಸಮಾಜದ ಮಹಿಳೆಯರು ಬುಧವಾರ ಬೃಹತ್ ಮೌನ ಪ್ರತಿಭಟನಾ ರ‌್ಯಾಲಿ ನಡೆಸಿದ್ದಾರೆ. 

ಜಾಯಿಂಟ್ ಆಕ್ಷನ್ ಕಮೀಟಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಸಂಚಯನಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದರು. ಸಂಚಯನಿ ವೃತ್ತದಿಂದ ಹೊರಟ ಈ ರ್ಯಾಲಿಯು ಗೋಗಟೆ ವೃತ್ತದವರೆಗೆ ತೆರಳಿತು. 

ಪ್ರತಿಭಟನಾನಿರತ ಮಹಿಳೆಯರು ಕೈಯಲ್ಲಿ ರಾಷ್ಟ್ರಧ್ವಜ, ಸಂವಿಧಾನ ಉಳಿಸಿ, ಧರ್ಮ ಒಡೆಯಬೇಡಿ, ಸೇವ್ ಇಂಡಿಯಾ ಮತ್ತಿತರ ಫಲಕಗಳನ್ನು ಪ್ರದರ್ಶಿಸಿದರು. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ, ನಾಗರಿಕ ನೋಂದರಣಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಿಎಎ, ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ದೆಹಲಿಯ ಜಾಮೀಯಾ ಮತ್ತು ಶಾಹೀನ್ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಆದರೆ, ಇದ್ಯಾವುದನ್ನು ಲೆಕ್ಕಿಸದೇ ಕೇಂದ್ರ ಸರ್ಕಾರ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಖಂಡನೀಯ ಎಂದರು. 

ಯಾವುದೇ ಕಾರಣಕ್ಕೂ ನಾವು ಈ ಕಾಯ್ದೆ ಒಪ್ಪುವುದಿಲ್ಲ. ಈ ಕಾಯ್ದೆ ಮಾನವೀಯತೆ ವಿರೋಧಿಯಾಗಿದೆ. ಸಂವಿಧಾನ ನಮಗೆ ಕೊಟ್ಟಿರುವ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಹಿಂದು ರಾಷ್ಟ್ರ ನಿರ್ಮಾಣ ಮಾಡುವ ಷಡ್ಯಂತ್ರ ನಡೆಸಿದೆ. ಇದರಿಂದ ಭಾರತ ದೇಶದ ಅಲ್ಪಸಂಖ್ಯಾತರ ಮೇಲೆ ಒಂದು ದಬ್ಬಾಳಿಕೆ, ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿದರು. ನೂರಾರು ಮಹಿಳೆಯರು ಈ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.
 

click me!