
ಮಂಗಳೂರು : ಒಎನ್ಜಿಸಿಯ ಅಂಗಸಂಸ್ಥೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಸ್ಕರಣಾಗಾರದಲ್ಲಿನ ನಾವೀನ್ಯತೆಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ ವತಿಯಿಂದ ನೀಡಲಾಗುವ 2025-26ನೇ ಸಾಲಿನ ನಾವೀನ್ಯತೆ ಪ್ರಶಸ್ತಿಗಳಲ್ಲಿ ಎಂಆರ್ಪಿಎಲ್ ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಸ್ಕರಣಾಗಾರದಲ್ಲಿನ ಅತ್ಯುತ್ತಮ ನಾವೀನ್ಯತೆ ವಿಭಾಗಗಳಲ್ಲಿ ವಿಜೇತ ಸಂಸ್ಥೆಯಾಗಿ ಹೊರಹೊಮ್ಮಿದೆ.
ಗೋವಾದ ಎಟಿಐ-ಒಎನ್ಜಿಸಿಯಲ್ಲಿ ನಡೆದ 29ನೇ ಇಂಧನ ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ಸಂಸ್ಕರಣಾಗಾರದಲ್ಲಿನ ಅತ್ಯುತ್ತಮ ನಾವೀನ್ಯತೆಗೆ ಈ ಪ್ರಶಸ್ತಿಗಳು ಲಭಿಸಿವೆ.
ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಗೆ ವೈಜ್ಞಾನಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಜಿ.ಡಿ.ಯಾದವ್ ನೇತೃತ್ವದ ಸಮಿತಿ ಚಾಲನೆ ನೀಡಿತ್ತು. ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ನೇತೃತ್ವದ ನಿಯೋಗ ಪ್ರಶಸ್ತಿಗಳನ್ನು ಸ್ವೀಕರಿಸಿತು. ನಿಯೋಗದಲ್ಲಿ ನಿರ್ದೇಶಕ(ರಿಫೈನರಿ) ನಂದಕುಮಾರ್ ವೇಲಾಯುಧನ್ ಪಿಳ್ಳೈ, ಕಾರ್ಯನಿರ್ವಾಹಕ ನಿರ್ದೇಶಕ(ರಿಫೈನರಿ) ಎನ್.ಆನಂದ ಕುಮಾರ್, ಜಿಜಿಎಂ(ಮೆಂಟೆನನ್ಸ್) ಎಚ್.ಸಿ.ಸತ್ಯನಾರಾಯಣ, ಜಿಜಿಎಂ(ಟಿಎಸ್) ಸುಧೀರ್ ಪೈ ಎಂ., ಇನ್ನೋವೇಶನ್ ಸೆಂಟರ್ ಮುಖ್ಯ ವ್ಯವಸ್ಥಾಪಕ ಕಾರ್ತಿಕ್ ಆರ್. ಹಾಗೂ ಮುಖ್ಯ ವ್ಯವಸ್ಥಾಪಕ ಎಸ್.ನಿರ್ಮಲ್ ಗಣೇಶ್ ಇದ್ದರು.
ಇಂಧನ ತಂತ್ರಜ್ಞಾನ ಸಮಾವೇಶ ಮತ್ತು ಇಂಡಿಯಾ ಎನರ್ಜಿ ವೀಕ್ ಸೇರಿದಂತೆ ಭಾರತ ಸರ್ಕಾರದ ಪ್ರಮುಖ ವೇದಿಕೆಗಳಲ್ಲಿ ನಾವೀನ್ಯತೆಗಾಗಿ ಸತತ ಐದನೇ ಬಾರಿಗೆ ರಾಷ್ಟ್ರೀಯ ಮನ್ನಣೆ ಪಡೆದಿದೆ. ಈ ಸಾಧನೆಗಳು ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ, ಕಾರ್ಯಾಚರಣೆಯ ದಕ್ಷತೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡುವ ಭವಿಷ್ಯ ಸನ್ನದ್ಧ ಸಂಸ್ಕರಣಾಗಾರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಎಂಆರ್ಪಿಎಲ್) 2026-27ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 1,881 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಕಂಪನಿಯ ನಿರ್ದೇಶಕರ ಮಂಡಳಿಯ 278ನೇ ಸಭೆಯಲ್ಲಿ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ಎರಡನೇ ತ್ರೈಮಾಸಿಕ ಹಾಗೂ ಮೊದಲ ಅರ್ಧ ವರ್ಷದ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು.
ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯ 35,590 ಕೋಟಿ ರು. ಆಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 25,953 ಕೋಟಿ ರು. ಇತ್ತು. ತೆರಿಗೆ ಪೂರ್ವ ಲಾಭ 2,519 ಕೋಟಿ ರು.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 975 ಕೋಟಿ ರು. ಆಗಿತ್ತು. ತೆರಿಗೆ ನಂತರದ ಲಾಭ 639 ಕೋಟಿ ರು.ನಿಂದ 1,881 ಕೋಟಿ ರು.ಗೆ ಹೆಚ್ಚಳವಾಗಿದೆ.
2026-27ನೇ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯ 77,199 ಕೋಟಿ ರು. ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು 46,942 ಕೋಟಿ ರು. ಆಗಿತ್ತು. ಆರು ತಿಂಗಳ ತೆರಿಗೆ ನಂತರದ ಲಾಭ 2,796 ಕೋಟಿ ರು. ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 367 ಕೋಟಿ ರು. ದಾಖಲಾಗಿತ್ತು.