ಮುಂಡರಗಿ: ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಸಂಸದರು ಒತ್ತಾಯಿಸಲಿ

By Suvarna NewsFirst Published Dec 28, 2019, 8:34 AM IST
Highlights

ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಒತ್ತಾಯ|ರಾಜ್ಯದ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮನಸ್ಸು ಮಾಡುತ್ತಿಲ್ಲ|ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಆಗ್ರಹಿಸಿ ಟಿಕೆಟ್‌ ರಹಿತ ಕಾಶಿ ರೈಲ್ವೆ ಪ್ರಯಾಣದ ಪ್ರತಿಭಟನೆಗೆ ಚಾಲನೆ|

ಮುಂಡರಗಿ(ಡಿ.28): ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಒತ್ತಾಯಿಸಿ ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಅನೇಕ ಬಾರಿ ದೆಹಲಿ ಚಲೋ, ಬೆಂಗಳೂರು ಚಲೋ, ಹುಬ್ಬಳ್ಳಿ ಚಲೋ, ಗದಗ ಚಲೋ ಪ್ರತಿಭಟನೆ ಮಾಡಿ ಸಂಬಂಧಪಟ್ಟ ರೈಲ್ವೆ ಇಲಾಖೆ ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸುತ್ತಾ ಬಂದರೂ ರಾಜ್ಯದ ಸಂಸದರು ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮನಸ್ಸು ಮಾಡುತ್ತಿಲ್ಲ ಎಂದು ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಆರೋಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅವರು ಶುಕ್ರವಾರ ಮುಂಡರಗಿ ಪಟ್ಟಣದಲ್ಲಿ ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ರಚನೆಯ ಜಂಟಿಕ್ರಿಯಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗದಗ-ಹರಪನಹಳ್ಳಿ ರೈಲು ಮಾರ್ಗಕ್ಕೆ ಆಗ್ರಹಿಸಿ ಟಿಕೆಟ್‌ ರಹಿತ ಕಾಶಿ ರೈಲ್ವೆ ಪ್ರಯಾಣದ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು. 120 ಕಿಲೋ ಮೀಟರ್‌ ಸರ್ವೇ ಮಾಡಿ 813.14 ಕೋಟಿಗಳ ಯೋಜನೆ ವರದಿಯನ್ನು ರೈಲ್ವೆ ಬೋರ್ಡ್‌ ನವದೆಹಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕಾಗಿತ್ತು. ಆದರೆ ಕೇಂದ್ರ ರೈಲ್ವೆ ಸಚಿವರು ಗದಗ-ಹರಪನಹಳ್ಳಿ ರೈಲ್ವೆ ಮಾರ್ಗದಿಂದ ಸರ್ಕಾರಕ್ಕೆ ಲಾಭವಾಗುವುದಿಲ್ಲ ಎಂದು ಹೇಳಿ ಹಣ ಬಿಡುಗಡೆಗೊಳಿಸಿಲ್ಲ. ಹಳೆಯ ರೈಲ್ವೆ ಯೋಜನೆಗಳು ಪೂರ್ಣಗೊಳ್ಳುವ ವರೆಗೂ ಯಾವುದೇ ಹೊಸ ಯೋಜನೆಗಳನ್ನು ಮಾಡುವುದಿಲ್ಲ ಎಂದು ಹೇಳಿರುವುದರಿಂದ 6ನೇ ಬಾರಿ ಕಾಶಿಗೆ ಟಿಕೆಟ್‌ರಹಿತ ಪ್ರಯಾಣದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ವಿ.ಎಸ್‌. ಗಟ್ಟಿ, ಬಸಪ್ಪ ವಡ್ಡರ, ಯಲ್ಲಪ್ಪ ಹೊಂಬಳಗಟ್ಟಿ, ಶಿವನಗೌಡ ನಾಡಗೌಡ್ರ, ಷಣ್ಮುಖಪ್ಪ ಬಳಿಗಾರ, ಮೌಲಾಸಾಬ ಬಾಗವಾನ ಉಪಸ್ಥಿತರಿದ್ದರು.
 

click me!