ಪರ್ಯಾಯ ಉದ್ಯಮ ಕಂಡುಕೊಳ್ಳಲು ಚಿತ್ರಮಂದಿರ ಮಾಲೀಕರ ಚಿಂತನೆ| ಮಾರ್ಚ್‌ನಿಂದ ಸಿನಿಮಾ ಮನೋರಂಜನೆಗೆ ಬ್ರೇಕ್ ನೀಡಿದ್ದ ಮಹಾಮಾರಿ ಕೊರೋನಾ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಮುಚ್ಚುವ ಹಂತದಲ್ಲಿರುವ ಬಸವರಾಜ ಹಾಗೂ ಕುಸುಮಾ ಎಂಬ ಎರಡು ಚಿತ್ರಮಂದಿರಗಳು|
ಬಿ. ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ(ಅ.17): ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಸಾಮಾಜಿಕ ಜಾಲತಾಣಗಳ ಚಟುವಟಿಕೆ ಚುರುಕುಗೊಂಡ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತ ಸಾಗಿತ್ತು. ಇಂತಹ ಪರಿಸ್ಥಿತಿ ಇರುವಾಗ, ಕಳೆದ ಮಾರ್ಚ್‌ನಿಂದ ಕೋವಿಡ್-19 ಆವರಿಸಿ ಸಿನಿಮಾ ಮನೋರಂಜನೆಗೆ ಬ್ರೇಕ್ ಬಿದ್ದಿತ್ತು. ಪ್ರೇಕ್ಷಕರ ಕೊರತೆಯಿಂದ ಮೊದಲೇ ನಷ್ಟದಲ್ಲಿದ್ದ ಇಲ್ಲಿಯ ಚಿತ್ರಮಂದಿರಗಳ ಮಾಲೀಕರು ಇದೀಗ ಸರ್ಕಾರ ಅನುಮತಿ ನೀಡಿದರೂ ಚಿತ್ರಮಂದಿರಗಳನ್ನು ಆರಂಭ ಮಾಡದೆ ಶಾಶ್ವತವಾಗಿ ಬಂದ್ ಮಾಡಿ ಪರ್ಯಾಯ ಉದ್ಯಮ ಕಂಡುಕೊಳ್ಳಲು ಯೋಜನೆ ರೂಪಿಸಿದ್ದಾರೆ.
ಹರಪನಹಳ್ಳಿ ಪಟ್ಟಣದಲ್ಲಿ ಬಸವರಾಜ ಹಾಗೂ ಕುಸುಮಾ ಎಂಬ ಎರಡು ಚಿತ್ರಮಂದಿರಗಳು ಇದ್ದರೆ, ಕೆಲವು ವರ್ಷಗಳ ಹಿಂದೆ ತಾಲೂಕಿನ ಅರಸಿಕೇರಿ, ಉಚ್ಚಂಗಿದುರ್ಗ, ಹಲುವಾಗಲುಗಳಲ್ಲಿ ತಲಾ ಒಂದೊಂದು ಸಿನಿಮಾ ಮಂದಿರಗಳು ಇದ್ದವು.
ದಿನಕಳೆದಂತೆ ಗ್ರಾಮೀಣ ಭಾಗದಲ್ಲಿದ್ದ ಮೂರು ಚಿತ್ರಮಂದಿರಗಳು ಬಂದ್ ಆದವು. ಹರಪನಹಳ್ಳಿ ಪಟ್ಟಣದಲ್ಲಿ ಮಾತ್ರ ಎರಡು ಚಿತ್ರಮಂದಿರಗಳು ಉಳಿದುಕೊಂಡಿದ್ದವು. ಆದರೆ ಪ್ರೇಕ್ಷಕರ ಕೊರತೆ ಈ ಎರಡೂ ಚಿತ್ರಮಂದಿರಗಳನ್ನೂ ಕಾಡುತ್ತಿತ್ತು. ಸಾಕಷ್ಟು ಬಾರಿ ನಷ್ಟ ಆದ ಹಿನ್ನೆಲೆಯಲ್ಲಿ ಬಸವರಾಜ ಎಂಬ ಹೆಸರಿನ ಚಿತ್ರಮಂದಿರವನ್ನು ಕೋವಿಡ್ ಬರುವುದಕ್ಕಿಂತ ಪೂರ್ವದಲ್ಲಿಯೇ ಬಂದ್ ಮಾಡಲಾಗಿತ್ತು. ಕುಸುಮಾ ಎಂಬ ಒಂದೇ ಚಿತ್ರಮಂದಿರ ಹಾಗೂ ಹೀಗೂ ಸಾಗುತ್ತಿತ್ತು. ಆದರೆ ಕೋವಿಡ್ ಎಂಬ ಮಾರಿ ಆವರಿಸಿ ಈ ಚಿತ್ರಮಂದಿರ ಬಂದ್ ಮಾಡಿಸಿತ್ತು. ಇದೀಗ ಸರ್ಕಾರ ಚಿತ್ರಮಂದಿರಗಳನ್ನು ಕೋವಿಡ್ ನಿಯಮಗಳ ಪಾಲನೆ ಮೂಲಕ ಆರಂಭಿಸಲು ಅನುಮತಿ ನೀಡಿದ್ದರೂ ಇಲ್ಲಿಯ ಕುಸುಮಾ ಚಿತ್ರಮಂದಿರ ಶಾಶ್ವತ ಬಂದ್ ಮಾಡಲು ತೀರ್ಮಾನಿಸಿದ್ದಾರೆ.
6 ತಿಂಗಳು 2400 ಕೋಟಿ ಲಾಸು,ಥೇಟರುಗಳ ಕಾಳಜಿ ಸರ್ಕಾರಕ್ಕಿಲ್ಲ: ಕೆ ವಿ ಚಂದ್ರಶೇಖರ್
ವಿದ್ಯುತ್ ಬಿಲ್ ಹಾಗೂ ಪರವಾನಗಿ ಶುಲ್ಕದಲ್ಲಿ ರಿಯಾಯಿತಿ ಕೊಡಿ ಎಂದು ಸರ್ಕಾರಕ್ಕೆ ಕೇಳಿದ್ದೇವೆ ಎಂದು ಮಾಲೀಕರು ಹೇಳುತ್ತಾರೆ. ಇನ್ನು ಮುಂದೆ ಆಕಸ್ಮಾತ್ ಇಲ್ಲಿಯ ಯಾರಾದರೂ ಸಿನಿಮಾ ನೋಡಬೇಕೆಂದರೆ ಹತ್ತಿರದ ದಾವಣಗೆರೆ ಅಥವಾ ಬೇರೆ ನಗರಗಳಿಗೆ ಹೋಗಬೇಕಾಗುವುದು. ಕಳೆದ 70 ವರ್ಷಗಳಿಂದ ತಾಲೂಕಿನ ಜನತೆಗೆ ಮನೋರಂಜನೆ ನೀಡಿದ ಚಿತ್ರಮಂದಿರಗಳು ಇನ್ನು ಮುಂದೆ ನೆನಪು ಮಾತ್ರ.
ಇಂಟರ್‌ನೆಟ್‌ನಲ್ಲಿಯೇ ಎಲ್ಲವೂ ಸಿಗುವುದರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಿಲ್ಲ. ಆದ್ದರಿಂದ ಪ್ರತಿದಿನ ನಮಗೆ ಶೇ.75ರಷ್ಟುನಷ್ಟವಾಗುತ್ತಿತ್ತು. ಈಚೆಗೆ ಕೊರೋನಾ ಬಂದು ಇನ್ನಷ್ಟು ಹದಗೆಡಿಸಿತು. ಆದ್ದರಿಂದ ಈಗ ಮುಚ್ಚಿರುವ ಟಾಕೀಸುಗಳನ್ನು ಆರಂಭ ಮಾಡದೆ ಶಾಶ್ವತ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಹರಪನಹಳ್ಳಿಯ ಟಾಕೀಸು ಮಾಲೀಕ ಮುರ್ಕಲ್ ಚಂದ್ರಶೇಖರ ಅವರು ತಿಳಿಸಿದ್ದಾರೆ.