
ಬೆಂಗಳೂರು: ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಮಗು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಗಸ್ಟ್ 15ರ ಬೆಳಗ್ಗೆ 10:50ಕ್ಕೆ ಘಟನೆ ನಡೆದಿದ್ದು, ಮಗು ಮಹಡಿಯಿಂದ ಕೆಳಗೆ ಬಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಡಿವಾಳದ ಚಿಕ್ಕ ಆಡುಗೋಡಿ ಬಳಿ ಘಟನೆ ನಡೆದಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಸ್ಥಳೀಯರು ಮಗು ಮಹಡಿಯಿಂದ ಬಿದ್ದಿದನ್ನು ನೋಡಿ ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಸದ್ಯ ಮಗುವಿಗೆ ಕೋರಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮನೆಯ ಮುಂದೆ ಎರಡು ವರ್ಷದ ಮಗುವನ್ನು ಆಟವಾಡಲು ಬಿಟ್ಟಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಗ್ರಿಲ್ ಮೇಲೆ ಹತ್ತಿ ಮಗು ಕೆಳಗೆ ಬಿದ್ದಿದೆ. ಘಟನೆ ಸಂದರ್ಭದಲ್ಲಿ ಮಗುವಿನ ತಾಯಿ ಮೊಬೈಲ್ ನೋಡುತ್ತಾ ಕುಳಿತ್ತಿದ್ದಳು ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಮಗುವನ್ನು ಬಿಟ್ಟ ಸಂದರ್ಭದಲ್ಲಿ ಚೇರ್‌ವೊಂದು ಕೆಳಗೆ ಬಿದ್ದಿತ್ತಂತೆ. ಈ ವೇಳೆಯೇ ಮಗುವಿನ ಬಗ್ಗೆ ಎಚ್ಚರಿಕೆ ವಹಿಸಲು ಸ್ಥಳೀಯರು ಹೇಳಿದ್ದರಂತೆ. ಆದರೆ ತಂದೆ-ತಾಯಿ ಮಗುವಿನ ನಿರ್ಲಕ್ಷ್ಯ ಮಾಡಿದ್ದ ಕಾರಣದಿಂದಲೇ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರ ಬೇಜಾಬ್ದಾರಿ ಬಗ್ಗೆ ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಪೋಷಕರು ಮಕ್ಕಳಿಗೆ ಜನ್ಮ ಕೊಡುವುದು ಮಾತ್ರ ಅಲ್ಲ, ಅವರ ರಕ್ಷಣೆ ಆರೈಕೆ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಮಗುವನ್ನು ನಿರ್ಲಕ್ಷ್ಯವಹಿಸಿ ಆಡಲು ಬಿಟ್ಟಿದ್ದು ಎಷ್ಟು ಸರಿ? ಅದರಲ್ಲೂ ಬಹುಮಹಡಿ ಕಟ್ಟಡದಲ್ಲಿ ವಾಸಿಸುವ ಜನರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.