ರಾಜ್ಯದ 4916 ಕೈದಿಗಳಿಗೆ ಮಾನಸಿಕ ಕಾಯಿಲೆ..!

By Kannadaprabha NewsFirst Published Feb 29, 2020, 8:22 AM IST
Highlights

ರಾಜ್ಯದಲ್ಲಿ ಜೈಲುಗಳಲ್ಲಿ ಒಟ್ಟು 4,916 ಕೈದಿಗಳು ವಿವಿಧ ಮಾದರಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು(ಫೆ.29]: ರಾಜ್ಯದಲ್ಲಿ ಜೈಲುಗಳಲ್ಲಿ ಒಟ್ಟು 4,916 ಕೈದಿಗಳು ವಿವಿಧ ಮಾದರಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

‘ಮಾನಸಿಕ ಆರೋಗ್ಯ ಕಾಯ್ದೆ-2017’ ಅನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ನನ್ನ ಮುಂಬೈಗೆ ಕಳಿಸಬೇಡಿ: ರವಿ ಪೂಜಾರಿ ರಚ್ಚೆ!

ಸರ್ಕಾರದ ಪರ ವಕೀಲರು ವರದಿ ಸಲ್ಲಿಸಿ, ರಾಜ್ಯದ ಕಾರಾಗೃಹಗಳಲ್ಲಿ ಸುಮಾರು 15 ಸಾವಿರ ಕೈದಿಗಳು ಇದ್ದಾರೆ. ಅದರಲ್ಲಿ ಒಟ್ಟು 4,916ಕ್ಕೂ ಹೆಚ್ಚು ಕೈದಿಗಳು ವಿವಿಧ ಮಾದರಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆ ಪೈಕಿ 237 ಕೈದಿಗಳು ಗಂಭೀರ ಸ್ವರೂಪದ ಅಸ್ವಸ್ಥತೆಗೆ ಒಳಗಾಗಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹವೊಂದರಲ್ಲೇ 2,023 ಕೈದಿಗಳು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರೆ. ಹಾಸನ ಜಿಲ್ಲಾ ಕಾರಾಗೃಹದಲ್ಲಿ 344, ಕಲಬುರ್ಗಿಯಲ್ಲಿ 336 ಹಾಗೂ ತುಮಕೂರಿನಲ್ಲಿ 237 ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ 235 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.

 

ಅಲ್ಲದೆ, 36 ಜೈಲುಗಳಲ್ಲಿರುವ ಎಲ್ಲ ಕೈದಿಗಳ ಮಾನಸಿಕ ಸ್ಥಿತಿಗಳನ್ನು ತಜ್ಞರು ಅಧ್ಯಯನ ನಡೆಸಿದ್ದಾರೆ. ಗದಗ ಮತ್ತು ಮಂಡ್ಯ ಜಿಲ್ಲೆ ಸೇರಿದಂತೆ ನಾಲ್ಕು ತಾಲ್ಲೂಕು ಜೈಲುಗಳಲ್ಲಿ ಅಧ್ಯಯನ ಸದ್ಯ ಪ್ರಗತಿಯಲ್ಲಿದೆ. ಅದನ್ನೂ ಶೀಘ್ರವೇ ಪೂರ್ಣಗೊಳಿಸಲಾಗುವುದು ಸರ್ಕಾರಿ ವಕೀಲರು ತಿಳಿಸಿದರು.ಅದನ್ನು ಪರಿಗಣಿಸಿದ ನ್ಯಾಯಪೀಠ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೈದಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತ ಸಮಗ್ರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.

click me!