ಕೊಡಗು : ಮುನ್ನೆಚ್ಚರಿಕೆಯಿಂದ ತಪ್ಪಿತು ಭಾರೀ ಹಾನಿ

By Suvarna NewsFirst Published Aug 18, 2020, 4:16 PM IST
Highlights

ಕಳೆದ ಎರಡು ವರ್ಷಗಳಲ್ಲಿ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಮಡಿಕೇರಿ ಜನತೆ ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಿದ್ದು,ಅಪಾರ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಂಡಿದ್ದಾರೆ.

ವರದಿ :  ವಿಘ್ನೇಶ್ ಎಂ. ಭೂತನಕಾಡು 

ಮಡಿಕೇರಿ (ಆ.18):  ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಏಕಾಏಕಿ ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು. ಆದರೆ ಈ ಬಾರಿ ಜನರು ಪಾಠ ಕಲಿತಿದ್ದಾರೆ. ಇದರಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನ, ಜಾನುವಾರು ಸೇರಿದಂತೆ ವಸ್ತುಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಗ್ರಾಮದ ಜನರು ಪ್ರವಾಹಕ್ಕೂ ಮುನ್ನವೇ ಸುರಕ್ಷಿತ ಸ್ಥಳಕ್ಕೆ ತೆರಳಿ ವಾಸ್ತವ್ಯ ಕಂಡುಕೊಂಡಿದ್ದರು.

ಕೊಡಗು ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಸಂಕಷ್ಟಕ್ಕೆ ನೆರವಾದ ಅಪ್ಪ-ಮಗ!..

ಮಡಿಕೇರಿ ತಾಲೂಕಿನ ಹೊದ್ದೂರು ಹಾಗೂ ಹೊದವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಮನೆಗಳು ಈ ಬಾರಿಯೂ ಕಾವೇರಿ ನದಿ ಪ್ರವಾಹದಿಂದ ಆ.6ರಿಂದ ಮೂರು ದಿನಗಳ ಕಾಲ ನೀರಿನಲ್ಲಿ ಮಳುಗಿದ್ದವು. ಭಾರಿ ಮಳೆಯಿಂದ ಪ್ರವಾಹ ಸಂಭವಿಸುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಕಳೆದ ಬಾರಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇದರಿಂದ ಜನರು ಮಾತ್ರವಲ್ಲದೆ ತಮ್ಮ ಸಾಕು ಪ್ರಾಣಿಗಳಾದ ಹಸು, ಕೋಳಿ, ನಾಯಿ, ಹಂದಿ, ಕುರಿ ಸೇರಿದಂತೆ ಜಾನುವಾರುಗಳನ್ನೂ ಸ್ಥಳಾಂತರ ಮಾಡಿ ಹೆಚ್ಚಿನ ಹಾನಿ ಸಂಭವಿಸದಂತೆ ಮುಂಜಾಗ್ರತೆ ವಹಿಸಿದ್ದರು.

ಬಟ್ಟೆ, ಪೂಜಾ ಸಾಮಗ್ರಿ ತಬ್ಬಿ ಅತ್ತ ನಾರಾಯಣ ಆಚಾರ್ ಮಕ್ಕಳು...

ಈ ಬಾರಿ ಪ್ರವಾಹದಿಂದಾಗಿ ಹೊದ್ದೂರು ಗ್ರಾಪಂ ವ್ಯಾಪ್ತಿಯ ಕಣ್ಣಬಲಮುರಿಯಲ್ಲಿ 38 ಮನೆಗಳು, ವಾಟೆಕಾಡು ಪೈಸಾರಿಯಲ್ಲಿ 4 ಮನೆಗಳಿಗೆ ಪ್ರವಾಹ ಸಂಭವಿಸಿ 2 ಮನೆಗಳು ಸಂಪೂರ್ಣ ಹಾನಿಯಾಗಿದೆ. ಹೊದವಾಡ ಗ್ರಾಮ ಪಂಚಾಯಿತಿಯ ಕೊಟ್ಟಮುಡಿ ಹಾಗೂ ಬೋಳಿಬಾಣೆಯಲ್ಲಿ 63 ಮನೆಗಳಿಗೆ ಪ್ರವಾಹ ಉಂಟಾಗಿದೆ. ಇರದಲ್ಲಿ 4 ಮನೆಗಳು ಸಂಪೂರ್ಣ ನಾಶವಾಗಿವೆ.

ಪ್ರವಾಹ ಸಂಭವಿಸುವ ಸೂಚನೆ ಇದ್ದ ಹಿನ್ನೆಲೆಯಲ್ಲಿ ಪಂಚಾಯಿತಿಯ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದರು. ಸಮುದಾಯ, ಅಂಗನವಾಡಿ, ಮಸೀದಿಗಳಲ್ಲಿ ತಮ್ಮ ಮನೆಗಳ ಉಪಯುಕ್ತ ವಸ್ತುಗಳನ್ನು ಸ್ಥಳಾಂತರ ಮಾಡಿದ್ದರು. ಮೂರು ದಿನಗಳಲ್ಲಿ ಪ್ರವಾಹ ಇಳಿಮುಖವಾಯಿತು. ನಂತರ ತಮ್ಮ ಮನೆಗಳಿಗೆ ತೆರಳಿ ಮನೆಗಳನ್ನು ಸ್ವಚ್ಛಗೊಳಿಸಿದರು.

ಕಳೆದ ವರ್ಷವೂ ಆಗಸ್ಟ್‌ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಹೊದ್ದೂರು ಹಾಗೂ ಹೊದವಾಡ ಗ್ರಾಪಂ ವಾಪ್ತಿಯ ಸುಮಾರು 168 ಮನೆಗಳು ಐದಾರು ದಿನಗಳ ಕಾಲ ಪ್ರವಾಹದಲ್ಲೇ ಮುಳುಗಿತ್ತು. ಅಂದು 9 ಮನೆ ಸಂಪೂರ್ಣ ನಾಶವಾಗಿತ್ತು.

ಆಶ್ರಯ ಕೇಂದ್ರ ತೆರೆದಿಲ್ಲ: ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಉಂಟಾದ ಪರಿಣಾಮ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ನೂರಾರು ಮಂದಿ ತಂಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಪ್ರವಾಹ ಮುಂಚಿತವಾಗಿಯೇ ಜನರನ್ನು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸರ್ಕಾರದಿಂದ ಯಾವುದೇ ಪರಿಹಾರ ಕೇಂದ್ರವನ್ನು ತೆರೆಯಲಾಗಿರಲಿಲ್ಲ. ಬದಲಾಗಿ ಸಂತ್ರಸ್ತರು ತಮ್ಮ ಕುಟುಂಬಸ್ಥರ ಮನೆಯಲ್ಲಿ ತಂಗಿದ್ದರು. ಇದೀಗ ಪ್ರವಾಹ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳಿ ಮನೆಗಳನ್ನು ಶುಚಿಗೊಳಿಸಿ, ವಸ್ತುಗಳನ್ನು ಸ್ಥಳಾಂತರಿಸಿ ತಮ್ಮ ಮನೆಗಳಲ್ಲಿ ತಂಗಿದ್ದಾರೆ. ಮನೆಗಳ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಕಾರ್ಯ ನಡೆಯುತ್ತಿದೆ.

  ಮಳೆಯಿಂದ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಪಂಚಾಯಿತಿಯಿಂದ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಒಂದು ವಾರದಿಂದ ಮುಂಚಿತವಾಗಿಯೇ ನೋಟಿಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮನೆಗಳ ವಸ್ತುಗಳನ್ನು ವಾಟೆಕಾಡಿ ಸಮುದಾಯ ಭವನದಲ್ಲಿ ಸ್ಥಳಾಂತರ ಮಾಡಿದೆವು. ಜನರು ಕುಟುಂಬಸ್ಥರ ಮನೆಗಳಲ್ಲಿ ತಂಗಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹಾನಿಯಾಗಿಲ್ಲ. ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಈ ವರ್ಷ ನಾವು ಪಾಠ ಕಲಿತಿದ್ದೇವೆ

- ಉಮೇಶ್‌, ಹೊದ್ದೂರು ಗ್ರಾಮದ ನಿವಾಸಿ

ಕಳೆದ ವರ್ಷ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ಕರೆದು ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಪಂಚಾಯಿತಿಯಿಂದ ನೋಟೀಸ್‌ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಹಾನಿ ಸಂಭವಿಸಿಲ್ಲ. ಪ್ರವಾಹಕ್ಕೆ ತುತ್ತಾದ ಮನೆಗಳಿಗೆ ಸದ್ಯದಲ್ಲೇ ಪರಿಹಾರ ವಿತರಿಸಲಾಗುವುದು

- ಅಬ್ದುಲ್ಲಾ, ಪಿಡಿಒ ಹೊದ್ದೂರು ಗ್ರಾಪಂ

click me!