‘ಕನ್ನಡಪ್ರಭ’ ಸುವರ್ಣ ನ್ಯೂಸ್.ಕಾಂ ವರದಿ ಫಲಶೃತಿ| ವಿಧವಾ ವೇತನ, ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆ ಜಮೆ ಮಾಡಿದ್ದ ಬ್ಯಾಂಕ್‌ಗಳು| ಈ ಬಗ್ಗೆ ಸದನದಲ್ಲಿ ಪ್ರತಿಧ್ವನಿಸಿದ್ದ ‘ಕನ್ನಡಪ್ರಭ’, ಸುವರ್ಣ ನ್ಯೂಸ್.ಕಾಂ ವರದಿ|
ಆನಂದ್ ಎಂ. ಸೌದಿ
ಯಾದಗಿರಿ(ಸೆ.25): ರೈತರಿಗೆ ನೀಡಬೇಕಾಗಿದ್ದ ಪ್ರೋತ್ಸಾಹಧನವಲ್ಲದೆ, ವಿಧವಾ ವೇತನ (ಪಿಂಚಣಿ)ವನ್ನೂ ಸಾಲದ ಖಾತೆಗಳಿಗೆ ಜಮೆ ಮಾಡಿದ್ದ ಬ್ಯಾಂಕ್‌ಗಳು ತಮ್ಮಿಂದಾದ ಪ್ರಮಾದವನ್ನು ಸರಿಪಡಿಸಿಕೊಳ್ಳುತ್ತಿವೆ. ಪರಿಷತ್ತಿನಲ್ಲಿ ಪ್ರತಿಧ್ವನಿಸಿದ್ದ, ಈ ಕುರಿತ ‘ಕನ್ನಡಪ್ರಭ’, ಸುವರ್ಣ ನ್ಯೂಸ್.ಕಾಂ ವರದಿಯಿಂದ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ಈಗ ರೈತರ ಉಳಿತಾಯ ಖಾತೆಗಳಿಗೆ ಈ ಹಣ ವಾಪಸ್ ಮಾಡಿವೆ.
undefined
ತಾಲೂಕಿನ ರಾಮಸಮುದ್ರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ರೈತರ ಸಾಲದ ಖಾತೆಗಳಿಗೆ ಪಿಂಚಣಿ ಹಾಗೂ ಪಿಎಂ ಹಾಗೂ ಸಿಎಂ ಕಿಸಾನ್ ಪ್ರೋತ್ಸಾಹ ಧನವನ್ನು ರೈತರ ಸಾಲದ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಪಿಂಚಣಿ ಹಣವನ್ನೇ ನಂಬಿ ಬದುಕು ಸಾಗಿಸುತ್ತಿದ್ದ ಬಡ ರೈತರಿಗೆ ಇದರ ಅರಿವಿರಲಿಲ್ಲ. ಖಾತೆಯಲ್ಲಿ ಹಣ ಇಲ್ಲ ಎಂದು ಬ್ಯಾಂಕಿನಲ್ಲಿ ತಿಳಿಸುತ್ತಿದ್ದರಿಂದ, ಸರ್ಕಾರಕ್ಕೆ ಹಿಡಿಶಾಪ ಹಾಕಿ ವಾಪಸಾಗುತ್ತಿದ್ದರು.
‘ಕನ್ನಡಪ್ರಭ’ ಈ ಅಳಲು ಕುರಿತು ಸೆ.20 ರಂದು ವಿಶೇಷ ವರದಿ ಪ್ರಕಟಿಸಿತ್ತು. ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸಿದ್ದ ಪರಿಷತ್ ಸದಸ್ಯ ಅರವಿಂದ ಅರಳಿ ಸರ್ಕಾರದ ಗಮನಕ್ಕೆ ತಂದಿದ್ದರು. ಕಂದಾಯ ಸಚಿವ ಆರ್.ಅಶೋಕ್ ಇದಕ್ಕೆ ಪ್ರತಿಕ್ರಿಯಿಸಿ, ಇದು ಅಪರಾಧವೆಂದು ಹೇಳಿದ್ದರು. ಇನ್ನು, ರೈತರಿಗಾದ ಅನ್ಯಾಯದ ಕುರಿತು, ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ್, ಉಪಾಧ್ಯಕ್ಷ ಸಿದ್ದಪ್ಪ ಪೂಜಾರಿ ಮುಂತಾದವರು ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ರೈತರ ಗಮನಕ್ಕೆ ತಾರದೆ ಜಿಲ್ಲೆಯಲ್ಲಿ ಅನೇಕ ರೈತರ ಪಿಂಚಣಿ ಹಾಗೂ ಪರಿಹಾರವನ್ನು ಬ್ಯಾಂಕುಗಳು ಇದೇ ರೀತಿ ಸಾಲದ ಖಾತೆಗಳಿಗೆ ಜಮೆ ಮಾಡಿದೆ ಎಂದು ದೂರಿದ್ದರು.
ಯಾದಗಿರಿ: ವಿಧವಾ ವೇತನವೂ ರೈತರ ಸಾಲದ ಖಾತೆಗೆ ಜಮೆ
ಕನ್ನಡಪ್ರಭ, ಸುವರ್ಣ ನ್ಯೂಸ್.ಕಾಂ ವರದಿ ಸದನದಲ್ಲಿ ಚರ್ಚೆಯಾದ ನಂತರ, ಈ ಕುರಿತು ವಿಶೇಷ ಆಸಕ್ತಿ ವಹಿಸಿದ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಲೀಡ್ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ತಪ್ಪಿತಸ್ಥ ಬ್ಯಾಂಕ್ ಅಧಿಕಾರಿ ಹಣ ಮರುಪಾವತಿಸದಿದ್ದರೆ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದರು. ಸದನಲ್ಲಿ ಕನ್ನಡಪ್ರಭ, ಸುವರ್ಣ ನ್ಯೂಸ್.ಕಾಂ ವರದಿ ಚರ್ಚೆಯಾದ 24 ಗಂಟೆಗಳಲ್ಲೇ ಎಲ್ಲ ರೈತರ ಹಣ ಮರುಪಾವತಿಸಲಾಗಿದೆ. ಇನ್ನು ಮುಂದೆ, ಯಾವ ಬ್ಯಾಂಕುಗಳೂ ಪಿಂಚಣಿ ಹಾಗೂ ಪರಿಹಾರ ಹಣವನ್ನು ಸಾಲದ ಖಾತೆಗಳಿಗೆ ಜಮೆ ಮಾಡದಂತೆ ಸೂಚನೆ ನೀಡಲಾಗಿದೆ.
ಖಾತೆಯಲ್ಲಿ ಹಣ ಇಲ್ಲ ಎಂದು ಹೇಳಿ ಬ್ಯಾಂಕಿನವರು ವಾಪಸ್ ಕಳುಹಿಸುತ್ತಿದ್ದರು. ಈಗ ವಿಧವಾ ವೇತನ ವಾಪಸ್ ಜಮೆ ಮಾಡಿದ್ದಾರೆ. 7500 ರು.ಗಳ ಹಣ ವಾಪಸ್ ಬಂದಿದೆ ಎಂದು ಬೆಳಗೇರಾ ಗ್ರಾಮಸ್ಥೆ ಶೇಖಮ್ಮ ತಿಳಿಸಿದ್ದಾರೆ.
ಸಾಲದ ಖಾತೆಗೆ ಜಮೆ ಮಾಡಿದ್ದ ಐದು ತಿಂಗಳ ಒಟ್ಟು 10 ಸಾವಿರ ರು.ಗಳ ಪಿಎಂ ಕಿಸಾನ್ ಹಣವನ್ನು ವಾಪಸ್ ಹಾಕಿದ್ದಾರೆ. ಇಲ್ಲವಾದಲ್ಲಿ ಇದು ಹೀಗೆ ಮುಂದುವರೆಯುತ್ತಿತ್ತು ಎಂದು ಬೆಳಗೇರಾ ಗ್ರಾಮಸ್ಥ ಚಂದಪ್ಪ ಹೇಳಿದ್ದಾರೆ.
ಕನ್ನಡಪ್ರಭ, ಸುವರ್ಣ ನ್ಯೂಸ್.ಕಾಂ ವರದಿ ಸರ್ಕಾರದ ಕಣ್ತೆರೆಸಿದೆ. ಬ್ಯಾಂಕುಗಳು ಮುಗ್ಧ ರೈತರನ್ನು ಮೋಸ ಮಾಡುತ್ತಿವೆ. ‘ಕನ್ನಡಪ್ರಭ’, ಸುವರ್ಣ ನ್ಯೂಸ್.ಕಾಂ ವರದಿ ಹಾಗೂ ಸದನದಲ್ಲಿ ಪ್ರಸ್ತಾಪಿಸಿದ ಅರಳಿಯವರಿಗೂ ಧನ್ಯವಾದಗಳು ಎಂದು ನವಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ್ ಹೇಳಿದ್ದಾರೆ.