ಕನ್ನಡ ಭವನ ಕಾಮಗಾರಿಗೆ ಹಣದ ಕೊರತೆ

By Kannadaprabha News  |  First Published Nov 1, 2021, 6:22 AM IST
  • ಜಿಲ್ಲೆಯಾಗಿ ಚಿಕ್ಕಬಳ್ಳಾಪುರ 15 ನೇ ವರ್ಷಕ್ಕೆ ಪಾರ್ದಪಣೆ ಮಾಡಿದೆ
  • ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಜಿಲ್ಲೆಯ ಕನ್ನಡ ಭವನ ಪೂರ್ಣವಾಗದೇ ಅನಾಥವಾಗಿದೆ.
     

ವರದಿ :  ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ನ.1):  ಜಿಲ್ಲೆಯಾಗಿ ಚಿಕ್ಕಬಳ್ಳಾಪುರ (chikkaballapura) 15 ನೇ ವರ್ಷಕ್ಕೆ ಪಾರ್ದಪಣೆ ಮಾಡಿದೆ. ಜೊತೆಗೆ ಕೇಳಿ ಕೇಳಿ ತೆಲುಗು ಪ್ರಾಬಲ್ಯ ಇರುವ ಆಂಧ್ರದ ಗಡಿಯಲ್ಲಿ ಜಿಲ್ಲೆ ಇದೆ. ಆದರೂ ಅನುದಾನ ಕೊರತೆ, ಜಿಲ್ಲಾಡಳಿತದ ಅಸಡ್ಡೆ, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಜಿಲ್ಲೆಯ ಕನ್ನಡ ಭವನ ಪೂರ್ಣವಾಗದೇ ಅನಾಥವಾಗಿದೆ.

Tap to resize

Latest Videos

ಹೌದು, ನಗರದ ಬಿಬಿ ರಸ್ತೆಯ ಎಲ್‌ಐಸಿ (LIC) ಕಚೇರಿ ಪಕ್ಕದಲ್ಲಿರುವ ಬಸಪ್ಪ ಛತ್ರದ ಜಾಗದಲ್ಲಿ ಹಲವು ವರ್ಷಗಳ ಹಿಂದೆಯೆ ಕನ್ನಡ ಭವನ (Kannada Bhavan) ನಿರ್ಮಾಣಕ್ಕೆ ಶಂಕಸ್ಥಾಪನೆ ನೆರವೇರಿಸಿ ಕಾಮಗಾರಿ ಕೂಡ ಮುಕ್ಕಾಲು ಭಾಗ ಪೂರ್ತಿಗೊಂಡರೂ ಉಳಿಕೆ ಅನುದಾನ ಬಿಡುಗಡೆಗೊಳ್ಳದೇ ಅಂತಿಮ ಹಂತದ ಕಾಮಗಾರಿಗಳು ಸ್ಥಗಿತಗೊಂಡಿವೆ. ನಾಲ್ಕೈದು ವರ್ಷಗಳಿಂದ ಕಟ್ಟಡ ಅನಾಥವಾಗಿದೆ.

ಮಾದರಿ ಆಗಬೇಕಿದ್ದ ಭವನ ಅನಾಥ

ಇಡೀ ರಾಜ್ಯಕ್ಕೆ (karnataka) ಮಾದರಿಯಾಗುವ ನಿಟ್ಟಿನಲ್ಲಿ ನಿರ್ಮಾಣಗೊಂಡು, ಉದ್ಘಾಟನೆ ಆಗಬೇಕಿದ್ದ ಕನ್ನಡ ಭವನ ಈಗ ಅನಾಥವಾಗಿದೆ. ಜಿಲ್ಲೆಯ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯಪರ ಚಟುವಟಿಕೆಗಳಿಗೆ ಸೂಕ್ತ ಸ್ಥಳವಕಾಶದ ಕೊತೆಯಿಂದ ಕನ್ನಡಪರ ಕಾರ್ಯಕ್ರಮಗಳಿಗೆ ಮಂಕು ಕವಿದಂತಾಗಿದೆ. ಕನ್ನಡ ಭವನ ನಿರ್ಮಾಣ ಪೂರ್ಣಗೊಳ್ಳಬೇಕಾದರೆ ಇನ್ನೂ 5 ಕೋಟಿ ರು.ಗಳ ಅನುದಾನ ಬೇಕು. ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸಿ.ಟಿ.ರವಿ ಜಿಲ್ಲೆಗೆ ಆಗಮಿಸಿದ್ದ ವೇಳೆ ಕನ್ನಡ ಭವನ ನಿರ್ಮಾಣಕ್ಕೆ ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿ ಹೋಗಿದ್ದರು. ಆದರೆ ಅವರು ಸಚಿವ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬರುವ ಕನಸು ಬರೀ ಕನಸಾಗಿಯೆ ಉಳಿದಿದೆ.

ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಗಿಲ್ಲೆಯಲ್ಲಿ ತೆಲುಗು ಪ್ರಾಬಲ್ಯ ಇದೆ. ಆದರೆ ಜಿಲ್ಲೆಯಲ್ಲಿ ಕನ್ನಡದ ಕಂಪು ಪಸರಿಸಲು ಕನ್ನಡಪರ ವಾತಾವರಣಕ್ಕೆ ಶಕ್ತಿ ತುಂಬಲು ವೇದಿಕೆ ಆಗಬೇಕಿದ್ದ ಕನ್ನಡ ಭವನ ಅನಾಥವಾಗಿದೆ. ಕಟ್ಟಡದ ಸುತ್ತಮುತ್ತ ಮುಳ್ಳಿನ ಗಿಡಗಳು ಬೆಳೆದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿರುವುದು ಕನ್ನಡ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ದೀಪಾವಳಿ, ಕನ್ನಡ ರಾಜ್ಯೋತ್ಸವ ಆಚರಣೆಗೆ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ ಸರ್ಕಾರ

ಕನ್ನಡ ಸಂಘಟನೆಗಳೂ ಮೌನ

ಇನ್ನೂ ಆರೇಳು ವರ್ಷಗಳಿಂದ ಕನ್ನಡ ಭವನ ನಿರ್ಮಾಣ ಪೂರ್ಣಗೊಳ್ಳದೇ ಸದ್ಯ ಅನುದಾನ ಕೊರತೆಯ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿದಿಗಳು ಬಿಡಿ, ಜಿಲ್ಲೆಯ ಯಾವೊಬ್ಬ ಕನ್ನಡಪರ ಸಂಘಟನೆಗಳು, ಕಸಾಪ ಸೇರಿದಂತೆ ಯಾರು ಧ್ವನಿ ಎತ್ತದೇ ಇರುವುದು ಬೇಸರದ ಸಂಗತಿ. ಇಡೀ ರಾಜ್ಯಕ್ಕೆ ಮಾದರಿ ಆಗಿ ರೂಪಗೊಳ್ಳಬೇಕಿದ್ದ ಕನ್ನಡ ಭವನ ಅನುದಾನದ ಕೊರತೆಗೆ ಕಾಮಗಾರಿಗೆ ಗ್ರಹಣ ಹಿಡಿದಿದ್ದು ರಾಜ್ಯದಲ್ಲಿ ನೂತನವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಆಗಿರುವ ಸುನೀಲ್‌ ಕುಮಾರ್‌ ರವರು ಕಟ್ಟಡಕ್ಕೆ ಅವಶ್ಯಕವಾದ ಅನುದಾನಕ್ಕೆ ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಜಾಗ ಬಿಟ್ಟವರಿಗೂ ನೆಲೆ ಇಲ್ಲ

ವಿಪರ್ಯಾಸದ ಸಂಗತಿಯೆಂದರೆ ಹಾಲಿ ಕನ್ನಡ ಭವನ ನಿರ್ಮಿಸುತ್ತಿರುವ ಸ್ಥಳದಲ್ಲಿ ಈ ಹಿಂದೆ ಬಸಪ್ಪ ಛತ್ರ ಇದ್ದು ಹಲವು ನಿರಾಶ್ರಿತ ಕುಟುಂಬಗಳು ಅಶ್ರಯ ಪಡೆದಿದ್ದವು. ಆದರೆ ಕನ್ನಡ ಭವನ ನಿರ್ಮಾಣಕ್ಕೆ ನಿರಾಶ್ರಿತ ಕುಟುಂಬಗಳನ್ನು ಅಲ್ಲಿಂದ ಜಿಲ್ಲಾಡಳಿತ ಕಂದವಾರದ ಸಮೀಪಕ್ಕೆ ತೆರವುಗೊಳಿಸಿತ್ತು. ಅತ್ತ ಕನ್ನಡ ಭವನ ನಿರ್ಮಾಣ ಪೂರ್ಣಗೊಳ್ಳದೇ ಇತ್ತ ಜಿಲ್ಲಾಡಳಿತ ನೀಡಿದ್ದ ಭರವಸೆಯಿಂದ ನಿರಾಶ್ರಿತ ಹಲವು ಕುಟುಂಬಗಳಿಗೆ ನಿವೇಶನ ಸಿಗದೇ ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ.

click me!