ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಡಿ.13): ಬೆಂಗಳೂರು ಗ್ರಾಮಾಂತರ (Bengaluru Rural) ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ (MLC Election) ಸಮಬಲದ ಹೋರಾಟ ನೀಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೆಲುವಿನ ವಿಶ್ವಾಸದಲ್ಲಿದ್ದರೆ, ಬಿಜೆಪಿ ಠೇವಣಿ ನಷ್ಟವಾಗದೆ ಪಕ್ಷದ ಮರ್ಯಾದೆ ಉಳಿದರೆ ಸಾಕು ಎನ್ನುತ್ತಿದೆ. ಜೆಡಿಎಸ್ (JDS) ಮತ್ತು ಕಾಂಗ್ರೆಸ್ (Congress) ಪಕ್ಷಗಳ ಭದ್ರಕೋಟೆಯಾಗಿರುವ ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಎರಡು ಪಕ್ಷಗಳ ನಡುವಿನ ಕಾಳಗವಾಗಿತ್ತು. ಉಭಯ ಪಕ್ಷಗಳನ್ನು ಮಣಿಸಿ ಬಿಜೆಪಿ ಗೆಲುವು ದಾಖಲಿಸುವುದು ಅಷ್ಟುಸುಲಭವೂ ಅಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎರಡು ಪಕ್ಷಗಳ ನಡುವಿನ ಹಣಾಹಣಿ ಜಿಲ್ಲೆಯವರೇ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಸಹ ಪ್ರತಿಷ್ಠೆ ತಂದೊಡ್ಡಿದೆ. ಹೀಗಾಗಿ ವಿಧಾನ ಪರಿಷತ್ ಚುನಾವಣೆ (Election) ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇಲ್ಲಿವರೆಗೆ ನಡೆದಿರುವ ಸಾಲು ಸಾಲು ಚುನಾವಣೆಗಳಲ್ಲಿ ಸೋಲು ಅನುಭವಿಸಿ ಮುಖಭಂಗಕ್ಕೊಳಗಾಗಿರುವ ದಳಪತಿಗಳಿಗೆ , ವಿಧಾನ ಪರಿಷತ್ ಚುನಾವಣೆ ಗೆಲುವಿನೊಂದಿಗೆ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೆಡಿಎಸ್ ನ (JDS) ಭದ್ರಕೋಟೆ ಎನ್ನುವುದನ್ನು ಸಾಬೀತು ಪಡಿಸಬೇಕಿದೆ. ಹೀಗಾಗಿ ಪಕ್ಷದ ಗೆಲುವು ಅತಿ ಅಗತ್ಯ ಮತ್ತು ಅನಿವಾರ್ಯವಾಗಿದೆ.
ಕಾಂಗ್ರೆಸ್ ಪಾಲಿಗೆ ದೊಡ್ಡ ಸವಾಲು:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ತವರು ಜಿಲ್ಲೆ ಜತೆಗೆ ಸೋದರ ಸಂಬಂಧಿ ಎಸ್.ರವಿ ಅಭ್ಯರ್ಥಿಯಾಗಿರುವ ಕಾರಣ ಕಾಂಗ್ರೆಸ್ (Congress) ಪಾಲಿಗೆ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಚುನಾವಣೆ ಘೋಷಣೆಯಾದ ದಿನದಿಂದಲೂ ವಿರೋಚಿತ ಹೋರಾಟ ನೀಡಿದೆ. 2023ರ ವಿಧಾನಸಭೆ ಚುನಾವಣೆಗೆ ವಿಧಾನ ಪರಿಷತ್ ಚುನಾವಣೆ ದಿಕ್ಸೂಚಿಯಾಗಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಪರಿವರ್ತನೆ ಸೃಷ್ಟಿಯಾಗಲಿದೆ. ಇದರೊಂದಿಗೆ ಕಾಂಗ್ರೆಸ್‌ನ ವರ್ಚಸ್ಸು ಮತ್ತಷ್ಟುಹೆಚ್ಚಾಗಲಿದೆ. ಜೆಡಿಎಸ್ ಪಕ್ಷವನ್ನು ಮತ್ತಷ್ಟುನೆಲಕಚ್ಚುವಂತೆ ಮಾಡಲು ಇದೊಂದು ಸದಾವಕಾಶ ಎನ್ನುವುದು ಕೈ ಪಾಳಯದ ರಾಜಕೀಯ ಲೆಕ್ಕಾಚಾರ.
ಬಿಜೆಪಿಗೆ ಠೇವಣಿ ನಷ್ಟದ ಭೀತಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಮಬಲದ ಹೋರಾಟ ನೀಡುವಲ್ಲಿ ವಿಫಲವಾಗಿರುವ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಠೇವಣಿ ನಷ್ಟದ ಭೀತಿ ಎದುರಾಗಿದೆ. ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ವಿಚಾರ ಪ್ರಸ್ತಾಪವಾದಾಗಲೇ ಬಿಜೆಪಿ (BJP) ಪಾಳಯದಲ್ಲಿ ಹೋರಾಟದ ಮನೋಭಾವನೆ ಕಳೆಕುಂದುವಂತೆ ಮಾಡಿತು.
ಈ ಚನಾವಣೆಯ ಸಾರಥ್ಯ ವಹಿಸಬೇಕಾಗಿದ್ದ ಸಚಿವ ಅಶ್ವತ್ ನಾರಾಯಣ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ ನಾರಾಯಣಗೌಡ ಸೇರಿದಂತೆ ಬಿಜೆಪಿಯ (BJP) ಯಾವೊಬ್ಬ ನಾಯಕರೂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪ್ರಚಾರ ನಡೆಸಲೇ ಇಲ್ಲ. ಮತದಾನದ ದಿನದಂದು ಸ್ಥಳೀಯ ಸಂಸ್ಥೆಗಳ ಬಿಜೆಪಿ ಬೆಂಬಲಿತ ಸದಸ್ಯರನ್ನು ಕೇಳುವವರೇ ಇಲ್ಲದಂತಾಗಿತ್ತು. ಕೊನೆಗೆ ಬಿಜೆಪಿ ಪ್ರಭಾವಿ ನಾಯಕರೊಬ್ಬರು ಜೆಡಿಎಸ್ (JDS) ಅನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಸಂದೇಶ ರವಾನಿಸಿದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ: ಗೆಲುವು ಯಾರಿಗೆ?
1.ಕಾಂಗ್ರೆಸ್ ಅಭ್ಯರ್ಥಿ ಎಸ್ .ರವಿ ಮೂರನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿ ದಾಖಲೆ ಸೃಷ್ಟಿಸುವ ಉತ್ಸಾಹದಲ್ಲಿ ಇದ್ದಾರೆ. ಡಿಕೆ ಸಹೋದರರ ಸೋದರ ಸಂಬಂಧಿ ಎಂಬ ಬಲದ ಜತೆಗೆ ಪಕ್ಷದ ಎಲ್ಲ ಶಾಸಕರೊಂದಿಗೆ ನಿಕಟ ಹಾಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ ಗ್ರಾಪಂಗಳಲ್ಲಿ ಕಾಂಗ್ರೆಸ್ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಗೆಲುವು ಸುಲಭವಂದು ಕಾಂಗ್ರೆಸ್ ನವರು ಹೇಳುತ್ತಿರುವ ಮಾತು.
2.ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ (Ramesh Gowda) ಸಾಮಾನ್ಯ ಅಭ್ಯರ್ಥಿಯಂತೆ ಕಂಡಬಂದರೂ ದಿನಕಳೆದಂತೆ ರಾಜಕೀಯ ದಾಳ ಉರುಳಿಸುವ ಮೂಲಕ ತಮ್ಮ ಅಸಾಮಾನ್ಯ ಶಕ್ತಿ ಪ್ರದರ್ಶಿಸಿ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದರು. ರಮೇಶ್ ಗೌಡ ಅವರನ್ನು ಗೆಲ್ಲಿಸಲೇ ಬೇಕೆಂಬ ಹಠದೊಂದಿಗೆ ಜೆಡಿಎಸ್ ಶಾಸಕರೆಲ್ಲರೂ ಸಂಘಟಿತರಾಗಿ ಪ್ರಯತ್ನ ನಡೆಸಿದ್ದು, ಜೆಡಿಎಸ್ ಪಾಲಿನ ಮತಗಳೆಲ್ಲವೂ ಕಾಂಗ್ರೆಸ್ ಕಡೆಗೆ ವಾಲದಂತೆ ಕಾಯ್ದುಕೊಂಡಿದ್ದಾರೆಂಬ ಅಪರಿಮಿತ ವಿಶ್ವಾದಲ್ಲಿದ್ದಾರೆ.
3.ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಯಾವುದೇ ಬಲವಿಲ್ಲದೆ ಏಕಾಂಗಿಯಾಗಿ ಹೋರಾಟ ನೀಡಿದರು. ಬಿಜೆಪಿ ಅಧಿಕಾರದಲ್ಲಿರುವ ಕಾರಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ತಮ್ಮನ್ನು ಬೆಂಬಲಿಸುತ್ತಾರೆಂಬ ವಿಶ್ವಾಸ. ಕಮಲ ಪಾಳಯದೊಳಗೆ ಯಾವುದೇ ಒಳೇಟುಗಳು ಬಿದ್ದಿರುವ ಸಾಧ್ಯತೆಗಳಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು.