'ಬಿಜೆಪಿ ಜತೆ ಜೆಡಿಎಸ್‌ ಹೋದರೆ ಪಕ್ಷ ತೊರೆವೆ'

By Kannadaprabha NewsFirst Published Dec 21, 2020, 8:04 AM IST
Highlights

ಬಿಜೆಪಿಗೆ ಜೆಡಿಎಸ್‌ ಹೋದರೆ ನಾನು ಮಾತ್ರವಲ್ಲದೆ ಅನೇಕರು ಪಕ್ಷ ಬಿಡುತ್ತಾರೆ| ಈಗಾಗಲೇ ಕೆಲ ಜೆಡಿಎಸ್‌ ಶಾಸಕರು ತಮ್ಮ ಜತೆ ಚರ್ಚೆ ಮಾಡಿದ್ದಾರೆ| ಕುಮಾರಸ್ವಾಮಿ ನಿಲುವುಗೆ ಅನೇಕ ನಾನೂ ಸೇರಿ ಅನೇಕರ ವಿರೋಧವಿದೆ: ಎಸ್‌.ಆರ್‌.ಶ್ರೀನಿವಾಸ್‌| 

ತುಮಕೂರು(ಡಿ.21): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲು ಜೆಡಿಎಸ್‌-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು ನಿಜ ಎಂದು ಪುನರುಚ್ಚರಿಸಿರುವ ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌, ಒಂದು ವೇಳೆ ಬಿಜೆಪಿ ಸಖ್ಯವನ್ನು ಜೆಡಿಎಸ್‌ ಮಾಡಿದರೆ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.

ಅವರು ನಗರದಲ್ಲಿ ಕಾಂಗ್ರೆಸ್‌ ಮುಖಂಡ ಕೆ.ಎನ್‌.ರಾಜಣ್ಣ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸಖ್ಯವನ್ನು ಜೆಡಿಎಸ್‌ ಮಾಡಿದರೆ 100 ಕ್ಕೆ 100 ಪಕ್ಷದಲ್ಲಿ ಇರುವುದಿಲ್ಲ. ಈ ಸಂಬಂಧ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ, ನಿರ್ಧಾರ ಮಾಡುವುದಾಗಿ ತಿಳಿಸಿದರು.

ಬಿಜೆಪಿಗೆ ಜೆಡಿಎಸ್‌ ಹೋದರೆ ನಾನು ಮಾತ್ರವಲ್ಲದೆ ಅನೇಕರು ಪಕ್ಷ ಬಿಡುತ್ತಾರೆ. ಈಗಾಗಲೇ ಕೆಲ ಜೆಡಿಎಸ್‌ ಶಾಸಕರು ತಮ್ಮ ಜತೆ ಚರ್ಚೆ ಮಾಡಿದ್ದಾರೆ. ಜೆಡಿಎಸ್‌ ಪಕ್ಷದೊಳಗೆ ಕೆಲವರು ಬಿಜೆಪಿ ಜತೆ ಹೋಗಲು ಹೇಳುತ್ತಿದ್ದರೆ, ಮತ್ತೆ ಕೆಲವರು ಬೇಡ ಎನ್ನುತ್ತಿದ್ದಾರೆ ಎಂದರು.

ನನಗೂ ಬಿಜೆಪಿಯಿಂದ ತುಂಬಾ ಸಲ ಆಹ್ವಾನ ಬಂದಿತ್ತು. ನಾನು ಅಧಿಕಾರದ ಹಿಂದೆ ಹೋದವನಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಅವಧಿ ಪೂರೈಸಲಿದೆ. ಕಾರಣ ಬಿಜೆಪಿ ಜತೆ ಜೆಡಿಎಸ್‌ ಸೇರಿದೆ ಎಂದು ಆರೋಪಿಸಿದರು.

ಬಿಜೆಪಿ ಜೊತೆ ಜೆಡಿಎಸ್ ವಿಲೀನ: ಬಿಎಸ್‌ವೈ ಬೆನ್ನಲ್ಲೇ ಕುಮಾರಸ್ವಾಮಿಯಿಂದ ಸ್ಪಷ್ಟನೆ

ನಾನು ಬಿಜೆಪಿ ನಿಲುವುಗಳ ವಿರುದ್ಧ ಇದ್ದೇನೆ. ಹಾಗೆಯೇ ತಮ್ಮ ಪಕ್ಷದ ನಿರ್ಧಾರಗಳ ಬಗ್ಗೆ ನಿರ್ಲಿಪ್ತನಾಗಿದ್ದೇನೆ. ಕುಮಾರಸ್ವಾಮಿ ನಿಲುವಿಗೆ ಅನೇಕ ಶಾಸಕರ ವಿರೋಧವಿದ್ದು ಇವರಲ್ಲಿ ನನ್ನ ಸ್ನೇಹಿತರು ಕೂಡ ಇದ್ದಾರೆ. ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.

ಅತೀ ಆತ್ಮವಿಶ್ವಾಸದಿಂದಲೇ ದೇವೇಗೌಡರಿಗೆ ಸೋಲು

ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ತಮ್ಮ ಪಕ್ಷದ ನಾಯಕರ ಸ್ವಯಂಕೃತ ಅಪರಾಧ ಕಾರಣ ಎಂದು ಎಸ್‌.ಆರ್‌.ಶ್ರೀನಿವಾಸ್‌ ತಿಳಿಸಿದರು. ನಮ್ಮ ಪಕ್ಷದ ನಾಯಕರ ತಪ್ಪಿನಿಂದಲೇ ದೇವೇಗೌಡರು ಸೋತರು. ಅತಿಯಾದ ಆತ್ಮವಿಶ್ವಾಸ ಕೂಡ ದೇವೇಗೌಡರ ಸೋಲಿಗೆ ಕಾರಣವಾಯಿತು ಎಂದರು.

ರಾಜಣ್ಣ ನನಗೆ ಗಾಡ್‌ಫಾದರ್‌

ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ನನಗೆ ಗಾಡ್‌ಫಾದರ್‌ ಇದ್ದ ಹಾಗೆ. ಅವರು ತಮ್ಮ ಮನೆಗೆ ಆಹ್ವಾನಿಸಿದ್ದರು. ಹೀಗಾಗಿ ಬಂದದ್ದೇನೆ. ಕಾಂಗ್ರೆಸ್‌ ನಾಯಕರು ತಮ್ಮನ್ನು ಪಕ್ಷಕ್ಕೆ ಕರೆದಿಲ್ಲ. ಹಾಗೆಯೇ ರಾಜಣ್ಣ ಕೂಡ ತಮ್ಮನ್ನು ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ನಾನು ಸದ್ಯಕ್ಕೆ ಜೆಡಿಎಸ್‌ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 

click me!