'ಲಖನ್ ಕುಟುಂಬದ ವಿಚಾರದಲ್ಲಿ ನನ್ನ ಸಹೋದರ, ರಾಜಕೀಯವಾಗಿ ನನ್ನ ವಿರೋಧಿ'

By Suvarna News  |  First Published Jan 4, 2020, 12:08 PM IST

ಸಿಎಎಗೆ ಮುಸ್ಲಿಮರು ಹೆದರುವ ಅಗತ್ಯ ಇಲ್ಲ ಶಾಸಕ ರಮೇಶ ಜಾರಕಿಹೊಳಿ| ವೋಟ್‌ಬ್ಯಾಂಕ್ ಛಿದ್ರಗೊಳಿಸಲು ವಿರೋಧ ಪಕ್ಷದವರಿಂದ ಯತ್ನ| ಮಹತ್ವದ ಉಪಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಶೀರ್ವದಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೋಟಿ ಕೋಟಿ ನಮನ|


ಗೋಕಾಕ(ಜ.04): ಮುಸ್ಲಿಂ ಸಮಾಜದವರು ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವ ಅಥವಾ ಈ ಕಾಯ್ದೆಗೆ ಹೆದರುವ ಅವಶ್ಯಕತೆ ಇಲ್ಲ. ಸ್ಥಳೀಯ ಮುಸ್ಲಿಮರು ಹಿಂದುಸ್ಥಾನದ ನಿವಾಸಿಗಳಾಗಿದ್ದು, ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸುವಂತೆ ವಿಪಕ್ಷಗಳು ತಪ್ಪು ಸಂದೇಶ ರವಾನಿಸುತ್ತಿದ್ದು, ಇದಕ್ಕೆ ಕಿವಿಗೊಡದಂತೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. 

ಶುಕ್ರವಾರ ಜಿಲ್ಲೆಯ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಅಭಿಮಾನಿಗಳಿಂದ ಅಭಿಮಾನದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

Tap to resize

Latest Videos

ಭಾರತೀಯ ಮುಸ್ಲಿಮರು ಪೌರತ್ವ ಕಾಯ್ದೆಗೆ ಹೆದರುವ ಅವಶ್ಯಕತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ನಿಮ್ಮೆಲ್ಲರ ಪರವಾಗಿ ಇದ್ದಾರೆ. ವಿರೋಧ ಪಕ್ಷದ ವೋಟ್‌ಬ್ಯಾಂಕ್ ಛಿದ್ರಗೊಳಿಸಲು ಕೇಂದ್ರ ಸರ್ಕಾರ ಈ ಕಾಯ್ದೆ ಜಾರಿಗೆ ತರುವಲ್ಲಿ ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು. 

ಲಖನ್ ಜಾರಕಿಹೊಳಿ ಕುಟುಂಬದ ವಿಚಾರದಲ್ಲಿ ಮಾತ್ರ ನನ್ನ ಸಹೋದರ. ರಾಜಕೀಯವಾಗಿ ನನ್ನ ವಿರೋಧಿ. ನನ್ನ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿ ಸುದ್ದಿ ಪ್ರಸಾರ ಮಾಡುತ್ತಿದ್ದು, ಮಾಧ್ಯಮಗಳ ಸುದ್ದಿಗೆ ಕಿವಿಗೊಡದಂತೆ ಮನವಿ ಮಾಡಿದ ಅವರು, ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿದ್ದಕ್ಕೆ ನಾನು ಯಾವತ್ತೂ ಮತದಾರ ಬಂಧುಗಳಿಗೆ ಋಣಿಯಾಗಿದ್ದೇನೆ ಎಂದರು. 

ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ: 

ಮಕರ ಸಂಕ್ರಮಣ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮತಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಪ್ರತಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಸಮಸ್ಯೆ ಆಲಿಸುತ್ತೇನೆ. ಅಲ್ಲದೇ ಗೋಕಾಕ ಮತಕ್ಷೇತ್ರ ವನ್ನು ಅಭಿವೃದ್ಧಿಪಡಿಸಲು ತಮ್ಮೆಲ್ಲರ ಸಹಕಾರ ಅವಶ್ಯವಿದ್ದು, ತಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು. 

ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಸುಧೀರ ಜೋಡಟ್ಟಿ, ಬಿಜೆಪಿ ಗ್ರಾಮೀಣ ಅಧ್ಯಕ್ಷ ವಿರೂಪಾಕ್ಷ ಯಲಿಗಾರ, ಬಿಜೆಪಿ ಮಹಿಳಾ ಅಧ್ಯಕ್ಷೆ ಪ್ರೇಮಾ ಭಂಡಾರಿ, ಗ್ರಾಪಂ ಅಧ್ಯಕ್ಷ ವಿಠ್ಠಲ ಕಾಶಪ್ಪಗೋಳ, ಉಪಾಧ್ಯಕ್ಷೆ ಭೀಮವ್ವ ಭಜಂತ್ರಿ, ಮುಖಂಡರಾದ ಎಚ್ ಡಿ ಮುಲ್ಲಾ, ರಾಜು ಕಾಡದವರ, ಜಯಶೀಲ ಶೆಟ್ಟಿ. ನಿಂಗಪ್ಪ ಬಬಲಾಡಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಗೂ ಅಭಿಮಾನಿಗಳು ಇದ್ದರು.

ನಾನು ಕನ್ನಡ ವಿರೋಧಿ ಅಲ್ಲ

ನಾನು ಯಾವತ್ತು ಕನ್ನಡದ ಹಾಗೂ ಕನ್ನಡಿಗರ ವಿರೋಧಿಯಲ್ಲ. ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರನ್ನು ಒಂದುಗೂಡಿಸುತ್ತೇನೆ. ಎಂಇಎಸ್ ಸಂಘಟನೆಯನ್ನಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಈಗಲೂ ನನ್ನ ಹೇಳಿಕೆಗೆ ಬದ್ಧನಿದ್ದೇನೆ. ಬೆಳಗಾವಿ ಕರ್ನಾಟಕದ್ದು, ಕರ್ನಾಟಕದಲ್ಲಿ ವಾಸಿಸುತ್ತಿರುವ ಮರಾಠಿಗರನ್ನು ನಾನು ಒಂದುಗೂಡಿಸುತ್ತೇನೆಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು. ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಿರುಚಿ ಸುದ್ದಿ ಪ್ರಚಾರ ಮಾಡುತ್ತಿದ್ದು ಅಂತವರ ವಿರುದ್ಧ ಕೇಸ್ ದಾಖಲಿಸಲು ಸಿದ್ಧತೆ ನಡೆಸಿದ್ದೇನೆ. ವಿರೋಧಿಗಳ ಮಾತಿಗೆ ಕಿವಿಗೊಡಲಾರೆ. ನನ್ನ ಮತಕ್ಷೇತ್ರದಲ್ಲಿ ಅವ್ಯವಹಾರ ನಡೆದಿದ್ದೆಯಾದಲ್ಲಿ ಭ್ರಷ್ಟರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸಿದ್ಧನಿದ್ದೇನೆ ಎಂದರು.

ಮತದಾರರಿಗೆ ಕೃತಜ್ಞತೆ 

ಮಹತ್ವದ ಉಪಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ನನ್ನನ್ನು ಆಶೀರ್ವದಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕೋಟಿ ಕೋಟಿ ನಮನ ಎಂದು ರಮೇಶ ಜಾರಕಿಹೊಳಿ ಹೇಳಿದರು. ರಾಷ್ಟ್ರಮಟ್ಟದ ಗಮನ ಸೆಳೆದ ಈ ಉಚುನಾವಣೆಯಲ್ಲಿ ನನಗೆ ಆಶೀರ್ವದಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನ ಭದ್ರಗೊಳಿಸಿದ್ದಿರಿ, ಕಳೆದ ನಾಲ್ಕೈದು ತಿಂಗಳುಗಳಿಂದ ಕಾನೂನು ಹೋರಾಟದಲ್ಲಿ ತೋಡಗಿದ್ದ ಸಂದರ್ಭದಲ್ಲಿ ವಿರೋಧಿಗಳು ಸಾಕಷ್ಟು ಕುತಂತ್ರ. ಅಪಪ್ರಚಾರ ಮಾಡಿದರೂ ಬುದ್ಧಿವಂತ ಮತದಾರರು ನನ್ನನ್ನು ಕೈಬಿಡಲಿಲ್ಲ. ನೀವು ನನ್ನ ಹಾಗೂ ಬಿಜೆಪಿ ಮೇಲೆ ಇಟ್ಟ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿಮ್ಮ ಆಶೋತ್ತರಗಳಿಗೆ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೆನೆಂದು ಶಾಸಕರು ಹೇಳಿದರು. 

ಚುನಾವಣೆಯಲ್ಲಿ ಬಹಳಷ್ಟು ಸಿಹಿ ಕಹಿ ಘಟನೆಗಳಾಗಿವೆ. ವ್ಯವಸ್ಥಿತ ಪಿತೂರಿ, ಕುತಂತ್ರ ಹಾಗೂ ಮತದಾರರ ಗೊಂದಲದಿಂದ ಅಂತರ ಸ್ವಲ್ಪ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಗಾಳಿ ಮಾತಿಗೆ ಕಿವಿಗೊಡಬೇಡಿ. ಮತಗಳ ವಿಭಜನೆಗೆ ಅವಕಾಶ ಕೊಡದೆ ನನಗೆ ಆಶೀರ್ವದಿಸಿ. ಹಣಕ್ಕಿಂ ತ ಜನರ ಪ್ರೀತಿ ಮುಖ್ಯ. ದೇವರ ಹಾಗೂ ತಂದೆ ತಾಯಿಗಳ ಆಶೀರ್ವಾಧದಿಂದ ನಿಮ್ಮಲ್ಲರ ವಿಶ್ವಾಸ ಗಳಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲವಿದ್ದು, ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಟಿ ಆರ್ ಕಾಗಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ವಿರೂಪಾಕ್ಷ ಯಲಿಗಾರ, ಮುಖಂಡರುಗಳಾದ ವಿನೋದ ಕರನಿಂಗ, ಪ್ರಕಾಶ ಕರನಿಂಗ, ಎಚ್ ಡಿ ಮುಲ್ಲಾ, ಎ ಜೆ ಪಾಟೀಲ, ನಂದಾ ಗಣಾಚಾರಿ, ಭುಜಪ್ಪ ಖನಗಾಂವಿ, ವಿಠ್ಠಲ ಸಿಂಪಿಹಟ್ಟಿ, ಪ್ರೇಮಾ ಭಂಡಾರಿ ಅನೇಕರು ಇದ್ದರು.
 

click me!