'ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಿದ್ದೇನೆ'

By Kannadaprabha NewsFirst Published Jan 26, 2020, 7:59 AM IST
Highlights

ಭರವಸೆಯಂತೆ ಹಾಗೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತಿದ್ದೇನೆ| ಬಸ್‌ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ರಾಮಣ್ಣ ಲಮಾಣಿ ಭೂಮಿಪೂಜೆ| ಶಿರಹಟ್ಟಿಯಲ್ಲಿ 4 ಕೋಟಿ ವೆಚ್ಚದಲ್ಲಿ ನೂತನ ಬಸ್‌ ಘಟಕದ ಕಾಮಗಾರಿಗೆ|

ಶಿರಹಟ್ಟಿ(ಜ.26): ಚುನಾವಣೆ ಪೂರ್ವದಲ್ಲಿ ತಾಲೂಕಿನ ಜನತೆಗೆ ನೀಡಿದ ಭರವಸೆಯಂತೆ ಹಾಗೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುತ್ತಿದ್ದೇನೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದ್ದಾರೆ. 
ಪಟ್ಟಣದಲ್ಲಿ 4 ಕೋಟಿ ವೆಚ್ಚದಲ್ಲಿ ನೂತನ ಬಸ್‌ ಘಟಕದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.

ಶಿರಹಟ್ಟಿ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ತಾಲೂಕಿಗೆ ಬೇಕಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶ್ರಮಿಸುತ್ತಿದ್ದೇನೆ. ಈಗಾಗಲೆ ಶಿರಹಟ್ಟಿಪಟ್ಟಣದಲ್ಲಿ ನೂರು ಹಾಸಿಗೆಯುಳ್ಳ ಆಸ್ಪತ್ರೆ, ನೂತನ ಕೋರ್ಟ್‌ ಕಟ್ಟಡ ನಿರ್ಮಾಣಕ್ಕೆ ಭೂಮಿ ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳು ಆರಂಭವಾಗಲಿವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬಡ ಜನತೆಗೆ ಸೂರು ಒದಗಿಸಬೇಕು ಎಂಬ ಉದ್ದೇಶದಿಂದ ಬಡವರಿಗೆ, ನಿವೇಶನ ರಹಿತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಸತಿ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿದ್ದು, ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಶ್ರೀಮಂತರಂತೆ ಬಡವರು ಸಹ ಉತ್ತಮ ಮನೆಗಳಲ್ಲಿ ವಾಸಿಸುವ ದೃಷ್ಟಿಯಿಂದ ಸರ್ಕಾರ ಇಂತಹ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಗುಡಿಸಲು ವಾಸಿಗಳು ಸುಂದರವಾದ ಮನೆ ಕಟ್ಟಿಕೊಂಡು ನೆಮ್ಮದಿಯ ಬದುಕು ಸಾಗಿಸಲು ಯೋಜನೆಗಳ ಲಾಭ ಪಡಯಬೇಕು ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ ಮಾತನಾಡಿ, ಅಭಿವೃದ್ಧಿ ಜತೆಗೆ ಜನಸಂಪರ್ಕ ವ್ಯವಸ್ಥೆ ಕೂಡ ಮುಖ್ಯವಾಗಿದೆ. ತಾಲೂಕಿನ ಜನತೆಯ ಸುಮಾರು ವರ್ಷಗಳ ಕನಸಾಗಿದ್ದ ನೂತನ ಬಸ್‌ ಘಟಕದ ಕನಸು ಈಡೇರಿದ್ದು, ಗುತ್ತಿಗೆದಾರರು ನಿಗದಿಪಡಿಸಿದ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಅತೀ ಶೀಘ್ರದಲ್ಲಿಯೇ ಶಿರಹಟ್ಟಿಘಟಕಕ್ಕೆ ಬಸ್‌ ಕೊಡುವ ಭರವಸೆ ನೀಡಿದ ಅವರು, ರಾಜ್ಯದಲ್ಲಿಯೇ ಗದಗ ವಿಭಾಗದಲ್ಲಿ 11 ಲಕ್ಷ ಹಾನಿಯಿದ್ದು, ಇದನ್ನು ಗಮನಿಸದೇ ಜನತೆಯ ಅನುಕೂಲಕ್ಕಾಗಿ ಬಸ್‌ ಓಡಿಸುತ್ತಿದ್ದೇವೆ. ಸಾರ್ವಜನಿಕರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಸಂಚರಿಸುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿರಹಟ್ಟಿ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ತಿಂಗಳ ಪರ್ಯಂತ ಸಾರಿಗೆ ಸಂಚಾರ ಬಂದ್‌ ಮಾಡಿಸಿ ಹೋರಾಟ ನಡೆಸಿದ್ದ ಕುಂದುಕೊರತೆ ಹೋರಾಟ ಸಮಿತಿಯ ಸಿದ್ರಾಮಯ್ಯ ಹಾವೇರಿಮಠ, ಅಕಬರ ಯಾದಗಿರಿ, ಶ್ರೀನಿವಾಸ ಬಾರಬಾರ, ಶ್ರೀನಿವಾಸ ಕಪಟಕರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಜಿಪಂ ಸದಸ್ಯೆ ರೇಖಾ ಅಳವಂಡಿ, ದೇವಕ್ಕ ಲಮಾಣಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ವಿಶ್ವನಾಥ ಕಪ್ಪತ್ತನವರ, ರಾಮಣ್ಣ ಡಂಬಳ, ಚಂದ್ರಕಾಂತ ನೂರಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ, ನಾಗರಾಜ ಲಕ್ಕುಂಡಿ, ಗೂಳಪ್ಪ ಕರಿಗಾರ, ಬೀರಪ್ಪ ಸ್ವಾಮಿ, ಸಂಧೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಅನೀಲ ಮಾನೆ, ಯಲ್ಲಪ್ಪ ಇಂಗಳಗಿ, ಎಫ್‌.ಸಿ. ಹಿರೇಮಠ, ಎಂ.ಸಿ. ಇಂಗಳಳ್ಳಿ, ಜಿ.ಎಸ್‌. ಸನದಿ, ಎಂ.ವೈ. ರಾಮನಾಥ ಇತರರು ಇದ್ದರು.
 

click me!