‘ನನಗೆ ಮಂತ್ರಿಯಾಗಲು ಗಡಿಬಿಡಿ ಇಲ್ಲ, ಜಾರಕಿಹೊಳಿಗೆ ಡಿಸಿಎಂ ಹುದ್ದೆ ಕೊಡಿ’

By Kannadaprabha NewsFirst Published Jan 31, 2020, 8:32 AM IST
Highlights

 ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿರುವೆ: ಕುಮಟಳ್ಳಿ| ಬೆಳಗಾವಿ ಜಿಲ್ಲೆಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಜಿಲ್ಲೆಗೆ ಮತ್ತೊಂದು ಗರಿ|ಸಚಿವನನ್ನಾಗಿ ಮಾಡಿದರೆ ಅಧಿವೇಶನಕ್ಕೆ ಸಚಿವನಾಗಿ ಪ್ರವೇಶ|

ಬೆಂಗಳೂರು[ಜ.31]: ಶಾಸಕ ರಮೇಶ್‌ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದು ಶಾಸಕ ಮಹೇಶ್‌ ಕುಮಟಳ್ಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಗೆ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಜಿಲ್ಲೆಗೆ ಮತ್ತೊಂದು ಗರಿ ಸಿಕ್ಕಂತಾಗಲಿದೆ. ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹವೂ ಇದೆ. ಆದರೆ, ಬೇಡಿಕೆ ಇಟ್ಟಿಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಉತ್ತರ ಕರ್ನಾಟಕ ಭಾಗದಿಂದ ಹಾಗೂ ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮಣ್‌ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಒಂದು ವೇಳೆ ರಮೇಶ್‌ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಒಂದೇ ಜಿಲ್ಲೆಯಿಂದ ಇಬ್ಬರು ಉಪಮುಖ್ಯಮಂತ್ರಿ ಆಗಿ ಕೆಲಸ ಮಾಡುವುದು ಇತಿಹಾಸವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನನಗೇನೂ ಗಡಿಬಿಡಿ ಇಲ್ಲ:

ಕುಮಟಳ್ಳಿ ಮತ್ತು ಶ್ರೀಮಂತ್‌ ಪಾಟೀಲ್‌ ಅವರನ್ನು ಸಚಿವರನ್ನಾಗಿ ಮಾಡುವುದಿಲ್ಲ ಎಂಬ ವದಂತಿಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವನಾಗಲು ನನಗೇನೂ ಗಡಿಬಿಡಿ ಇಲ್ಲ. ಸಚಿವ ಸ್ಥಾನ ನೀಡಿ ಯಾವ ಖಾತೆ ನೀಡಿದರೂ ನನ್ನ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತೇನೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದು ಮಹೇಶ್‌ ಕುಮಟಳ್ಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಚಿವನನ್ನಾಗಿ ಮಾಡಿದರೆ ಅಧಿವೇಶನಕ್ಕೆ ಸಚಿವನಾಗಿ ಪ್ರವೇಶಿಸುತ್ತೇನೆ. ಯಾವುದೇ ಖಾತೆ ನೀಡಿದರೂ ಸಂತೋಷದಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಇಲ್ಲವಾದರೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಸಂಪುಟ ವಿಸ್ತರಣೆ ವಿಳಂಬಕ್ಕೆ ನಾವು ಯಾರ ಮೇಲೂ ಮುನಿಸಿಕೊಂಡಿಲ್ಲ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದು, ಇದರಲ್ಲಿ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಅಧಿವೇಶನದ ವೇಳೆಗೆ ಸಚಿವ ಸಂಪುಟ ವಿಸ್ತರಣೆಯಾಗುವ ವಿಶ್ವಾಸ ಇದೆ. ಇವತ್ತೇ ಮಾಡಬೇಕು ಎಂದು ಮುಖ್ಯಮಂತ್ರಿಗಳ ಮೇಲೆ ನಾನು ಒತ್ತಡ ಹಾಕಿಲ್ಲ ಎಂದ ಅವರು, ಸೋಲನುಭವಿಸಿದವರಿಗೆ ಸಚಿವ ಸ್ಥಾನ ಸಿಗಬೇಕು. ವಿಶ್ವನಾಥ್‌ ಅವರು ಹಿರಿಯರಾಗಿದ್ದು, ಅವರಿಗೆ ಜನಾದೇಶ ಸಿಗಲಿಲ್ಲ. ಅವರಿಗೆ ಸೂಕ್ತ ಸ್ಥಾನ ನೀಡುವ ಭರವಸೆ ಇದೆ. ನಮ್ಮ ಜತೆಯಲ್ಲಿಯೇ ಅವರನ್ನೂ ಮಂತ್ರಿ ಮಾಡಲಿ ಎಂಬ ಆಸೆ ಇದ್ದು, ಮುಖ್ಯಮಂತ್ರಿಗಳ ಮೇಲೆ ಕೋಪ ಮಾಡಿಕೊಂಡಿಲ್ಲ ಎಂದರು.

ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎಂಬ ಅಸಮಾಧಾನ ಇಲ್ಲ. ರಾಜಕೀಯ ವಿದ್ಯಮಾನಗಳಿಂದ ಬಿಜೆಪಿಗೆ ಬರುವಾಗ ಆರಂಭದಲ್ಲಿ ಮೂಲ ಮತ್ತು ವಲಸಿಗರು ಎಂಬ ಭಾವನೆ ಇತ್ತು. ಆದರೆ, ಇದೀಗ ಆ ಭಾವನೆ ಇಲ್ಲ. ನಾವು ಮೊದಲು 17 ಮಂದಿ ಇದ್ದಿದ್ದು, ಇದೀಗ 117 ಮಂದಿ ಒಟ್ಟಿಗೆ ಇದ್ದೇವೆ. ನಾವು ಸಹ ಬಿಜೆಪಿ ಕಾರ್ಯಕರ್ತರು ಎಂದು ಹೇಳಿದರು.

click me!