ಪರಮೇಶ್ವರ್ ನಾಮಪತ್ರ ಸಲ್ಲಿಸುವ ವೇಳೆ ಕಿಡಿಗೇಡಿಯೊಬ್ಬ ಕಲ್ಲೆಸೆದು, ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗಾಯಗೊಂಡಿರುವ ಘಟನೆ ನಡೆದಿದೆ.
ತುಮಕೂರು: ಪರಮೇಶ್ವರ್ ನಾಮಪತ್ರ ಸಲ್ಲಿಸುವ ವೇಳೆ ಕಿಡಿಗೇಡಿಯೊಬ್ಬ ಕಲ್ಲೆಸೆದು, ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕು ಕಚೇರಿ ಗೇಟ್ ಮುಂಭಾಗ ನಿಂತಿದ್ದ ಕೊರಟಗೆರೆ ಮಹಿಳಾ ಕಾನ್ಸ್‌ಟೇಬಲ್ ಮಾಲಾಶ್ರೀ ಅವರ ತಲೆಗೆ ಕಲ್ಲು ತಗುಲಿದ ಪರಿಣಾಮ ಆಕೆ ಅಲ್ಲೇ ಕುಸಿದು ಬಿದ್ದಿದ್ದು, ಮಹಿಳಾ ಕಾನ್ಸ್‌ಟೇಬಲ್ ಅವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ಕೊಡಿಸಿದ್ದಾರೆ.
ತಾಲೂಕು ಕಚೇರಿ ಒಳಗೆ ನಾಮಪತ್ರ ಸಲ್ಲಿಸಲು ತೆರಳಿದ್ದ ವೇಳೆ, ಕಚೇರಿ ಗೇಟ್ ಹೊರಭಾಗದಿಂದ ಕಲ್ಲು ಎಸೆಯಲಾಗಿದೆ ಎಂದು ತಿಳಿದು ಬಂದಿದೆ.
ಪರಮೇಶ್ವರ್ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ಘಟನೆ ಪೊಲೀಸ್ ಭದ್ರತೆ ವೈಫಲ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಮಹಿಳಾ ಕಾನ್ಸ್‌ಟೇಬಲ್‌ಗೆæ ಕಲ್ಲು ಎಸೆದ ವಿಷಯ ತಮಗೆ ಗೊತ್ತಿಲ್ಲ. ನಾಮಪತ್ರ ಸಲ್ಲಿಸಿ ಹೊರಬಂದಿದ್ದೇನೆ. ಕಲ್ಲು ಯಾರು ಎಸೆದರು ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತೇನೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕಾರವಾಗಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಪರಮೇಶ್ವರ್ಗೆ ಸೋಲಿನ ಭಯ
ಕೊರಟಗೆರೆ: ಡಾ.ಜಿ.ಪರಮೇಶ್ವರ್‌ಗೆ ಕೊರಟಗೆರೆ ಕ್ಷೇತ್ರದಲ್ಲಿ ಸೋಲಿನ ಭಯ ಕಾಡ್ತೀದೆ. ಅದಕ್ಕಾಗಿಯೇ ನಮ್ಮ ವೀರಶೈವ-ಲಿಂಗಾಯಿತ ಸಮಾಜದ ಸಮಾವೇಶ ಮಾಡ್ತಾ ಇದಾರೇ. ಕೊರಟಗೆರೆ ವೀರಶೈವ-ಲಿಂಗಾಯಿತರ ನಡೆ ಪರಮೇಶ್ವರ್ ಕಡೆ ಸಮಾವೇಶಕ್ಕೆ ನಮ್ಮ ಸಮಾಜದ ಮುಖಂಡರು ಬರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರೈತಮೊರ್ಚ ಜಿಲ್ಲಾಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ ತಿಳಿಸಿದರು.
ಕೊರಟಗೆರೆ ಪಟ್ಟಣದ ಕಾಮಧೇನು ಭವನದಲ್ಲಿ ಕೊರಟಗೆರೆ ವೀರಶೈವ ಲಿಂಗಾಯಿತ ಸಮುದಾಯದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ವೀರಶೈವ ಮತ್ತು ಲಿಂಗಾಯಿತ ಸಮುದಾಯ ಬೇರ್ಪಡಿಸುವ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡಿತ್ತು. ನಮ್ಮ ಸಮಾಜಕ್ಕೆ ಮೀಸಲು ಹೆಚ್ಚಿಸಿರುವ ಬೊಮ್ಮಾಯಿ ನೇತೃತ್ವದ ಬಿಜೆಪಿ ಪಕ್ಷದ ಪರವಾಗಿಯೇ ವೀರಶೈವ ಲಿಂಗಾಯಿತ ಸಮುದಾಯ ಇರಲಿದೆ. ಕೊರಟಗೆರೆ ಕ್ಷೇತ್ರದಲ್ಲಿ ಅತೀ ಶೀಘ್ರದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಬೃಹತ್ ಸಮಾವೇಶ ಏರ್ಪಡಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಯುವಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ರುದ್ರೇಶ್ ಮಾತನಾಡಿ, ವೀರಶೈವ ಲಿಂಗಾಯಿತ ಸಮಾಜವು ಬಿಜೆಪಿ ಸರಕಾರದ ಪರವಾಗಿಯೇ ಇದೆ. ನಮ್ಮ ಸಮಾಜಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅನ್ಯಾಯ ಆಗಿದೆ. ಚುನಾವಣೆಗೆ ಮಾತ್ರ ಸೀಮಿತವಾದ ಕಾಂಗ್ರೆಸ್ ಸಮಾವೇಶ ಮತದಾರನ ಸೆಳೆಯುವ ಪ್ರಯತ್ನವಷ್ಠೆ. ಸಮಾಜದ ಮುಖಂಡರು ಯಾರು ಸಮಾವೇಶಕ್ಕೆ ಹೋಗದೇ ಬಿಜೆಪಿ ಪಕ್ಷದ ಪರವಾಗಿಯೇ ಇರಬೇಕಿದೆ ಎಂದು ಮನವಿ ಮಾಡಿದರು.
ಕೊರಟಗೆರೆ ಲಿಂಗಾಯಿತ ಸಮಾಜದ ಮುಖಂಡ ಶಿವರುದ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಲಿಂಗಾಯಿತ ಸಮಾಜಕ್ಕೆ ಅನ್ಯಾಯ ಮಾಡಿದೆ. ಕಳೆದ 5ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಜನರ ಮೇಲೆ ಜಾತಿನಿಂದನೆ ಪ್ರಕರಣ ಹೆಚ್ಚಾಗಿ ದಾಖಲಾಗಿವೆ. ಕಾಂಗ್ರೆಸ್ ಪಕ್ಷ ವೀರಶೈವ-ಲಿಂಗಾಯಿತ ಸಮುದಾಯವನ್ನ ಹೊಡೆಯುವ ಕೆಲಸವನ್ನು ಮಾಡಿದೆ. ಬಿಜೆಪಿ ಪಕ್ಷದಿಂದ ಮಾತ್ರ ರಕ್ಷಣೆ ಸಾಧ್ಯ ಎಂದು ತಿಳಿಸಿದರು.