ಕ್ಯಾನ್ಸರ್ ಗೆದ್ದವಳಿಗೆ ಶಾಲೆ ಪ್ರವೇಶ ನಿರಾಕರಿಸಿದ್ದ ಶಿಕ್ಷಕರಿಗೆ ಪಾಠ ಕಲಿಸಿದ ಸಚಿವ ಸುರೇಶ್ ಕುಮಾರ್| ಸುರೇಶ್ ಕುಮಾರ್ ಆದೇಶದಿಂದ ಕ್ಯಾನ್ಸರ್ ಗೆದ್ದ ವಿದ್ಯಾರ್ಥಿನಿಗೆ ಶಾಲೆಗೆ ಪ್ರವೇಶ ನೀಡಿದ ಶಿಕ್ಷಕರು|
ಬೆಂಗಳೂರು/ಕೊಪ್ಪಳ, [ಸೆ.13]: ಅಕಾಲಿಕವಾಗಿ ಎರಗಿದ ಕ್ಯಾನ್ಸರ್ ರೋಗವನ್ನು ಕಠಿಣ ಚಿಕಿತ್ಸೆ ಮೂಲಕ ಗೆದ್ದು ಮರುಜನ್ಮ ಪಡೆದ ವಿದ್ಯಾರ್ಥಿನಿಗೆ ಕೊನೆಗೂ ಶಾಲೆಗೆ ಪ್ರವೇಶ ದೊರೆತಿದೆ.
ಕ್ಯಾನ್ಸರ್ ಗೆದ್ದವಳಿಗೆ ಸರ್ಕಾರಿ ಶಾಲೆ ಪ್ರವೇಶ ನಿರಾಕರಣೆ!
ಟಣಕನಕಲ್ ಆದರ್ಶ ಶಾಲೆಯಲ್ಲಿ ಬಾಲಕಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಅನಾರೋಗ್ಯಪೀಡಿತಳೆಂಬ ಕಾರಣ ನೀಡಿ ಆಕೆಗೆ ಶಾಲೆಗೆ ಮರು ಪ್ರವೇಶ ನೀಡಿರಲಿಲ್ಲ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಧ್ಯಪ್ರವೇಶಿಸಿ ಕ್ಯಾನ್ಸರ್ ಗೆದ್ದುಬಂದ ವಿದ್ಯಾರ್ಥಿನಿಗೆ ಶಾಲೆ ಪ್ರವೇಶ ಕಲ್ಪಿಸಿಕೊಟ್ಟಿದ್ದಾರೆ.
ಈ ಬಗ್ಗೆ ಸುರೇಶ್ ಕುಮಾರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಈ ಕೆಳಗಿನಂತಿದೆ.
'‘ಕೊಪ್ಫಳ ಜಿಲ್ಲೆಯ ಟನಕನಕಲ್ ಗ್ರಾಮದ ಶಾಲೆಯ ಓರ್ವ ವಿದ್ಯಾರ್ಥಿನಿ ಕ್ಯಾನ್ಸರ್ ಮಾರಿಯ ವಿರುದ್ಧ ಚಿಕಿತ್ಸೆ ಪಡೆದು ಜಯಶಾಲಿಯಾದರೂ, ಆ ಶಾಲೆಯಲ್ಲಿ ತಾಂತ್ರಿಕ ಕಾರಣಗಳೊಡ್ಡಿ ಅನಾರೋಗ್ಯಪೀಡಿತಳೆಂಬ ಕಾರಣ ನೀಡಿ ಮರು ಪ್ರವೇಶ ನೀಡಿಲ್ಲವೆಂಬ ಸುದ್ದಿ ಮಾಧ್ಯಮಗಳ ಮೂಲಕ ಇಂದು ಬೆಳಿಗ್ಗೆ ನನಗೆ ತಿಳಿಯಿತು. ಮನಸ್ಸಿಗೆ ತೀವ್ರ ಬೇಸರವಾಯಿತು. ಅಷ್ಟೇ ಆಕ್ರೋಷವೂ ಬಂದಿತು.
ಗಂಗಾವತಿಯಲ್ಲಿ ಶಿಕ್ಷಕರ ಕಾರ್ಯಕ್ರಮಕ್ಕೆ ಇಂದೇ ಹೋಗಿದ್ದಾಗ, ಜಿಲ್ಲೆಯ DDPI ಮೂಲಕ ಆ ಶಾಲೆಯ ಮುಖ್ಯೋಪಾಧ್ಯಾಯರನ್ನು ಕರೆಸಿ, ಜಿಲ್ಲಾಧಿಕಾರಿ, ಜಿಲ್ಲೆಯ ಮುಖ್ಯ ನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಇಂದೇ ಆ ಹೆಣ್ಣುಮಗಳಿಗೆ ಪ್ರವೇಶಾವಕಾಶ ನೀಡಿ ನನಗೆ ಮಾಹಿತಿ ನೀಡಬೇಕೆಂದು ಸೂಚನೆ ಇತ್ತೆ.
ಶಿಕ್ಷಕರಿಗೆ ಮತ್ತು ವೈದ್ಯರಿಗೆ ತಮ್ಮ ಅನುಭವ, ಪ್ರತಿಭೆ ಜೊತೆ ಇರಲೇಬೇಕಾದದ್ದು ಅಂತಃಕರಣ. ಕ್ಯಾನ್ಸರ್ ವಿರುದ್ಧ ಸೆಣಸಾಡಿರುವ ಈ ಬಾಲಕಿಗೆ ನಾವೆಲ್ಲರೂ ಜೊತೆ ನಿಲ್ಲಬೇಕು ಮತ್ತು ಆ ಮಗುವಿನ ಆತ್ಮಸ್ಥೈರ್ಯ ಇತರರಿಗೂ ಮಾದರಿ ಯಾಗುವಂತಿದೆ ಎಂದು ಆ ತಂಡಕ್ಕೆ ತಿಳಿಹೇಳಿದೆ.
ಇದೀಗ ನನಗೆ ಮಾಹಿತಿ ಬಂದಂತೆ ಆ ಹೆಣ್ಣುಮಗುವಿಗೆ ಶಾಲೆಯಲ್ಲಿ ಪ್ರವೇಶಾವಕಾಶ ನೀಡಲಾಗಿದೆ‘.