KSRTC ನೌಕರರ ವೇತನ ಕಡಿತ: ಸಚಿವ ಸವದಿ ಪ್ರತಿಕ್ರಿಯೆ

By Kannadaprabha NewsFirst Published Jul 12, 2020, 10:32 AM IST
Highlights

ಸಾರಿಗೆ ಇಲಾಖೆಯ ಯಾವ ನೌಕರರನ್ನು ರಜೆ ಮೇಲೆ ಕಳಿಸಿಲ್ಲ: ಸಚಿವ ಲಕ್ಷ್ಮಣ ಸವದಿ| ಕೋವಿಡ್‌ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಕೋಟ್ಯಂತರ ರುಪಾಯಿ ಹಾನಿ| ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಜನರ ಹಿಂದೇಟು| ಇಲಾಖೆ ಹಾನಿಯಲ್ಲಿದ್ದರೂ ಸಹ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕಡಿತ ಮಾಡುತ್ತಿಲ್ಲ|

ಚಿಕ್ಕೋಡಿ(ಜು.12): ಕೊರೋನಾ ಪರಿ​ಣಾ​ಮ​ವಾಗಿ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 2652 ಕೋಟಿ ಹಾನಿಯಾಗಿದೆ. ಆದರೂ ಸಂಸ್ಥೆಯ ಯಾವುದೇ ನೌಕರರನ್ನು ರಜೆ ಮೇಲೆ ಕಳಿಸುತ್ತಿಲ್ಲ. ಸುಳ್ಳು ಸುದ್ದಿಗೆ ಗಮನಹರಿಸಬೇಡಿ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ​ನಾಡಿದ ಅವರು, ಸಾರಿಗೆ ಸಂಸ್ಥೆಯಲ್ಲಿ 1.30 ಲಕ್ಷ ಕಾರ್ಮಿಕರಿದ್ದಾರೆ. ತಿಂಗಳಿಗೆ 326 ಕೋಟಿ ಸಂಬಳ ಪಾವತಿಸಬೇಕು. ಕಾರ್ಮಿಕರಿಗೆ ಈಗಾಗಲೇ ಎರಡು ತಿಂಗಳ ಸಂಬಳ ನೀಡಲಾಗಿದೆ. ಸದ್ಯದಲ್ಲೇ ಮೂರನೇ ತಿಂಗಳ ಸಂಬಳ ನೀಡಲಾ​ಗು​ವುದು. ಒತ್ತಾಯದಿಂದ ಕಾರ್ಮಿಕರನ್ನು ಸಂಬಳ ರಹಿತ ರಜೆ ಮೇಲೆ ಕಳುಹಿಸಲಾಗುತ್ತಿದೆ ಎಂಬುದು ಸುಳ್ಳು. ಇದಕ್ಕೆ ಕಾರ್ಮಿಕರು ಕಿವಿಗೊಡಬಾರದು ಎಂದರು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಕರಿಲ್ಲ!

ಸಾರಿಗೆ ನೌಕರರ ವೇತನ ಕಡಿತ ಮಾಡಿಲ್ಲ

ಕೋವಿಡ್‌ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಕೋಟ್ಯಂತರ ರುಪಾಯಿ ಹಾನಿ ಆಗಿದೆ. ಬಸ್‌ಗಳಲ್ಲಿ ಜನರು ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇಲಾಖೆ ಹಾನಿಯಲ್ಲಿದ್ದರೂ ಸಹ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕಡಿತ ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಯಿಂದ ನಿಪ್ಪಾಣಿ ಕ್ಷೇತ್ರ​ದಲ್ಲಿ ಬೇಕಾಗುವ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧವಿದೆ. ನಿಪ್ಪಾಣಿ ಹೊಸದಾಗಿ ತಾಲೂಕು ಎಂದು ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿಗೆ ಬೇಕಾಗುವ ಎಲ್ಲ ಇಲಾಖೆಯ ಕಚೇರಿಗಳನ್ನು ಸ್ಥಾಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಹೇಳಿದರು.
 

click me!