'ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ವಿಚಾರದಲ್ಲಿ ಸಿಎಂ ನಿರ್ಧಾರವೇ ಅಂತಿಮ'

By Kannadaprabha NewsFirst Published Jan 27, 2020, 7:58 AM IST
Highlights

ಸಂಪುಟ ವಿಸ್ತರಣೆ: ಸಿಎಂ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೆಲ್ಲ ಬದ್ಧ, ಪಾಟೀಲ| ಸುದ್ದಿಗೋಷ್ಠಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿಕೆ| ಸರ್ಕಾರದ ಪ್ರತಿನಿಧಿಗಳಾಗಿ ನಾವೆಲ್ಲ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಬೇಕಿರುವುದು ನಮ್ಮ ಕರ್ತವ್ಯ|

ಗದಗ(ಜ.27): ರಾಜ್ಯ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಯಾರನ್ನು ಕೈಬಿಡಬೇಕು ಎನ್ನುವ ಪರಮಾಧಿಕಾರ ಮುಖ್ಯಮಂತ್ರಿಗಳದ್ದಾಗಿದ್ದು, ಸಿಎಂ ಬಿ.ಎಸ್‌. ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 

ಅವರು ಭಾನುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ. ಸರ್ಕಾರದ ಪ್ರತಿನಿಧಿಗಳಾಗಿ ನಾವೆಲ್ಲ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಬೇಕಿರುವುದು ನಮ್ಮ ಕರ್ತವ್ಯ. ಯಾರು ಸಂಪುಟದಲ್ಲಿರಬೇಕು, ಯಾರನ್ನು ಸೇರಿಸಿಕೋಳ್ಳಬೇಕು, ಯಾರನ್ನು ಬಿಡಬೇಕು ಅನ್ನೋದು ಅವರ ವಿವೇಚನೆಗೆ ಬಿಟ್ಟದ್ದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಲಾಗುವುದು. ರಾಜ್ಯದಲ್ಲಿ ನೂತನ ಮರಳು ನೀತಿ ಜಾರಿಯಾಗಬೇಕಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರಿಗೆ ಸುಲಭವಾಗಿ ಮರಳು ಲಭ್ಯವಾಗಬೇಕು, ಸರ್ಕಾರಕ್ಕೆ ಬರಬೇಕಾದ ರಾಜಸ್ವವೂ ಬರುವ ನಿಟ್ಟಿನಲ್ಲಿ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಶೀಘ್ರವೇ ಸಮವಸ್ತ್ರ ಜಾರಿಗೆ ತರುವ ಚಿಂತನೆಯಲ್ಲಿ ಸರ್ಕಾರವಿದೆ ಎಂದೂ ಸಹ ಸಚಿವ ಪಾಟೀಲ ಹೇಳಿದರು.

ನಮ್ಮ ಇಲಾಖೆ ಅಧಿಕಾರಿಗಳು ವಿವಿಧಡೆಯಲ್ಲಿ ದಾಳಿಗೆ ಹೋದ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಗಳಾಗುವ ಸಾಧ್ಯತೆಗಳು ಇರುವುದರಿಂದ ಮತ್ತು ಇಲಾಖೆಯಲ್ಲಿ ಶಿಸ್ತು ಅಳವಡಿಸುವ ನಿಟ್ಟಿನಲ್ಲಿ ಸಾಧಕ, ಬಾಧಕಗಳ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ತಗೆದುಕೊಳ್ಳಲಾಗುವುದು ಎಂದರು.

ಎಚ್‌ಡಿಕೆ ವಿರುದ್ಧ ವಾಗ್ದಾಳಿ

ಬಿಜೆಪಿಯವರ ಜೀನ್ಸ್‌ ಪಾಕಿಸ್ತಾನದಲ್ಲಿದೆ ಎನ್ನುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರ ವರ್ತನೆ ನೋಡಿದರೆ ಅವರ ಜೀಸ್ಸ್‌ ಎಲ್ಲಿದೆ ಎನ್ನುವುದು ಗೊತ್ತಾಗುತ್ತದೆ. ಅವರಷ್ಟುಕೀಳು ಮಟ್ಟದ ಹೇಳಿಕೆ ನೀಡುವ ರಾಜಕೀಯಕ್ಕೆ ನಾನು ಇಳಿಯುವುದಿಲ್ಲ ಎಂದರು.

ಸುದ್ದಿಗೋಷ್ಠೀಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ವಸಂತ ಮೇಟಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಪ್ರಶಾಂತ ನಾಯ್ಕರ ಮುಂತಾದವರು ಇದ್ದರು.
 

click me!