ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ, ಕರೆಂಟೂ ಇಲ್ಲ: ಮೊಬೈಲ್‌ ಟಾರ್ಚ್‌ನಲ್ಲೇ ನಡೆಯಿತು ಹೆರಿಗೆ...!

By Kannadaprabha News  |  First Published Nov 13, 2020, 11:26 AM IST

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಳ್ಳೂರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ, ಕರೆಂಟೂ ಇಲ್ಲ, ಮೋಬೈಲ್‌ ಟಾರ್ಚ್‌ ಬೆಳಕಲ್ಲೇ ಹೆರಿಗೆ| ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ದುರವಸ್ಥೆ| ಗರ್ಭಿಣಿ ಸೀತಮ್ಮ ಹೆರಿಗೆಗೆಂದು ಬಂದು ಅನುಭವಿಸಿದ ವನವಾಸಕ್ಕೆ ಕುಟುಂಬ ಕಂಗಾಲು| 


ಕಲಬುರಗಿ(ನ.13): ತುಂಬು ಗರ್ಭಿಣಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬಂದಾಗ ಅಲ್ಲಿ ವೈದ್ಯರು, ಕರೆಂಟೂ ಇಲ್ಲದ ಆಯೋಮಯ ಪರಿಸ್ಥಿತಿ ಎದುರಾದಾಗ ಆಸ್ಪತ್ರೆಯ ನರ್ಸ್‌ ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಸುಸೂತ್ರವಾಗಿ ಸಹಜ (ನಾರ್ಮಲ್‌) ಹೆರಿಗೆ ಕಾರ್ಯ ಕೈಗೊಂಡ ಪ್ರಸಂಗ ಚಿತ್ತಾಪುರ ತಾಲೂಕಿನ ಕೊಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಈ ಕುರಿತ ವಿಡಿಯೋಗಳು, ಕುಟುಂಬಸ್ಥರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವುದರಿಂದ ಸಾರ್ವಜನಿಕರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಳಕಿನ ಪರ್ಯಾಯ ವ್ಯವಸ್ಥೆ ಇಲ್ಲದಂತಹ ಈ ದಯನೀಯ ಪರಿಸ್ಥಿತಿಗೆ ಛೀಮಾರಿ ಹಾಕುತಿದ್ದಾರೆ.

Tap to resize

Latest Videos

ಸೀತಮ್ಮಳದ್ದು ಚೊಚ್ಚಿಲ ಹೆರಿಗೆ:

ಕೊಳ್ಳೂರಿನ ನಿವಾಸಿ ಸೀತಮ್ಮಗೆ ಅದು ಚೊಚ್ಚಿಲ ಹೆರಿಗೆ, ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಕ್ಷಣವೇ ಅವರ ಪೋಷಕರು ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. ಬರುವಾಗ ಕರೆಂಟ್‌ ಇತ್ತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ, ಅಲ್ಲಿದ್ದ ನರ್ಸ್‌ ನಾಗವೇಣಿ ಎಂಬುವವರು ಗರ್ಭಿಣಿ ಸೀತಮ್ಮಳ ಆರೋಗ್ಯ ಪರೀಕ್ಷಿಸಿದ್ದಾರೆ. ಈ ಸಮಯದಲ್ಲೇ ಸೀತಮ್ಮಳ ಹೆರಿಗೆ ನೋವು ಹೆಚ್ಚಾಗಿದೆ. ಅಷ್ಟೊತ್ತಿಗಾಗಲೇ ಮಧ್ಯರಾತ್ರಿ ಕಳೆದಿತ್ತು, ಇತ್ತ ಕರೆಂಟ್‌ ಇಲ್ಲದೆ ಆಸ್ಪತ್ರೆಯಲ್ಲಿ ಕಾರ್ಗತ್ತಲು. ಸೀತಮ್ಮ ಹೆರಿಗೆ ನೋವಿನಿಂದ ತೀವ್ರ ತೊಂದರೆ ಪಡುವುದು ಶುರುವಾದಾಗ ಮನೆಮಂದಿ ಕಂಗಾಲು!

ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ

ಕರೆಂಟ್‌ ಇಲ್ಲದೆ ಕತ್ತಲು ತುಂಬಿದ್ದ ಆಸ್ಪತ್ರೆಯಲ್ಲಿ ಹೆರಿಗೆ ಹೇಗಾಗುವುದೋ? ಮೊದಲೇ ವೈದ್ಯರು ಇಲ್ಲ ಎಂಬ ದುಗುಡು ತುಂಬಿದ್ದ ಕುಟುಂಬಸ್ಥರು ಆ್ಯಂಬುಲನ್ಸ್‌ಗೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇಂತಹ ದುಗುಡು ತುಂಬಿದ ಪರಿಸ್ಥಿತಿಯಲ್ಲಿ ನರ್ಸ್‌ ನಾಗವೇಣಿ ಇವರು ಈ ಹಂತದಲ್ಲಿ ಗರ್ಭಿಣಿಗೆæ ಎಲ್ಲಿಯಾದರೂ ಹೋಗು ಎನ್ನುವುದು ಸೂಕ್ತವಲ್ಲ, ಬೇರೆ ಆಸ್ಪತ್ರೆಗೆ ಸೀತಮ್ಮ ಹೋಗಬೇಕೆಂದರೂ ಅಷ್ಟೊಂದು ಸಮಯವಿಲ್ಲವೆಂದು ಮನೆ ಮಂದಿಯ ನೆರವು ಕೋರಿ, ದೇವರ ಮೇಲೆ ಭಾರ ಹಾಕಿ ತಾವೇ ಸೀತಮ್ಮಳ ಹೆರಿಗೆಗೆ ಮುಂದಾಗಿದ್ದಾರೆ.

ಮಿನುಗಿದವು ಮೋಬೈಲ್‌ ಟಾರ್ಚ್‌ಗಳು:

ಸೀತಮ್ಮಳ ಜೊತೆಗೆ ಬಂದಿದ್ದ ಸಹೋದರ ಸಂಗಪ್ಪ, ಮನೆ ಮಂದಿ, ಕುಟುಂಬದ ಬಂಧುಗಳು, ಗೆಳೆಯರು ನಾಲ್ಕಾರು ಮಂದಿ ತಮ್ಮ ಬಳಿಯಲ್ಲಿದ್ದ ಮೊಬೈಲ್‌ ತೆಗೆದು ಟಾರ್ಚ್‌ ಹೊತ್ತಿಸಿ ಹೆರಿಗೆ ಕೋಣೆಯಲ್ಲಿಟ್ಟಿದ್ದಾರೆ. ಹೀಗೆ ಮೊಬೈಲ್‌ ಟಾಚ್‌ರ್‍ ಬೆಳಕಲ್ಲೇ ಸೀತಮ್ಮಳನ ಹೆರಿಗೆಯನ್ನು ನರ್ಸ್‌ ನಾಗವೇಣಿ ಸುಸೂತ್ರವಾಗಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೀತಮ್ಮಳನ ಹೆರಿಗೆ ಪ್ರಕ್ರಿಯೆ ಮುಗಿದಾಗ ಮಧ್ಯರಾತ್ರಿ ದಾಟಿ 2.30 ಗಂಟೆಯಾಗಿತ್ತು. ಅಲ್ಲಿಯವರೆಗೂ ಕರೆಂಟ್‌ ಬಂದಿರಲೇ ಇಲ್ಲ. ತಂಗಿಯ ಚೊಚ್ಚಿಲ ಹೆರಿಗೆ ಬೇರೆ, ಹೇಗಾಗುವುದೋ ಎಂಬ ಆತಂಕ. ದೇವರ ಮೇಲೆ ಬಾರ ಹಾಕಿ ನಾವು ಈ ಸಾಹಸಕ್ಕೆ ಮುಂದಾದೇವು. ಅಲ್ಲಿಂದ ಬೇರೆ ಆಸ್ಪತ್ರೆಗಾಗಲಿ, ಯಾದಗಿರಿಗಾಗಲಿ ಹೋಗಲು ವಾಹನ, ಆ್ಯಂಬುಲನ್ಸ್‌ ಸವಲತ್ತೂ ಇರಿಲಲ್ಲ. ಹೀಗಾಗಿ ನಮಗೆ ಮೊಬೈಲ್‌ ಟಾಚ್‌ರ್‍ನ ಬೆಳಕು ಹೊರತು ಪಡಿಸಿ ಅನ್ಯ ಬೆಳಕಿನ ಗತಿಯೂ ಇರಲಿಲ್ಲ, ದೇವರು ದೊಡ್ಡವ ಎನ್ನುತ್ತಾರೆ ಸೀತಾದೇವಿಯ ತಮ್ಮ ಸಂಗಪ್ಪ.

ಮನ್ಯಾಗ ಹೆರಿಗೆ ನೋವು ಕಂಡಿತ್ತು. ಹಾಸ್ಪಿಟಲ್‌ ಅಂತ ಹೋದ್ರೆ ಕರೆಂಟ್‌ ಹೋಯ್ತು. ಡಾಕ್ಟರ್‌ ಬೇರೆ ಇರಲಿಲ್ಲ. ಗರ್ಭಿಣಿ ಮಗಳಿಗೆ ಏನಾದರೂ ಆದ್ರೆ ಹೇಗೆಂಬ ಚಿಂತೆ ಕಾಡಿತ್ತು. ದೇವರು ನಮ್ಮ ಕಡಿಗಿ ನಿಂತಾ, ಹುಡುಗಿದು ಎಲ್ಲಾ ಚೆಂದಾಗಿ ಆಯ್ತು. ಇಲ್ಲಾಂದ್ರ ಕಷ್ಟಇತ್ರಿ. ದವಾಖಾನ್ಯಾಗ ಕರೆಂಟ್‌ ಹೋದ್ರ ಬ್ಯಾರೆ ಬೆಳಕು ಇರಬೇಕ್ರಿ, ಮೊದ್ಲ ಇಂತಹ ವ್ಯವಸ್ಥ ಮಾಡ್ಲಿ ಎಂದು ಕೊಳ್ಳೂರಿನ ಬಾಣಂತಿ ಸೀತಮ್ಮಳ ತಾಯಿ ಅನಸೂಯಮ್ಮ ಅವರು ಹೇಳಿದ್ದಾರೆ.

ಕೊಲ್ಲೂರು 5 ಸಾವಿರ ಜನ ವಸತಿ ಊರು. ಸುತ್ತಲಿನ ತರ್ಕಸಪೇಟೆ, ಮಾರಡಗಿ ಸೇರಿದಂತೆ ಹತ್ತಾರು ಹಳ್ಳಿ ಮಂದಿ ಇಲ್ಲಿಗೆ ಬರೋದು. ವೈದ್ಯರೂ ಇರೋದಿಲ್ಲ. ಬೆಳಕು ಇರೋದಿಲ್ಲ. ನಿತ್ಯ 5ರಿಂದ 6 ಹೆರಿಗೆ ಆಗ್ತವೆ. ಹಿಂಗ ಬೆಳಕೇ ಇಲ್ಲದಾಗ ಹೆರಿಗೆ ಮಾಡೋ ಪರಿಸ್ತಿತಿ ಬಂದರೆ ಹೇಂಗೆ? ಮೊದ್ಲು ಇಲ್ಲಿ ವೈದ್ಯರು ಸದಾಕಾಲ ಇರುವಂತಾಗಲಿ, ಕರೆಂಟ್‌ ಹೋದಾಗ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದೆ ಹೋದಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಆಡಿದಂತೆ ಎಂದು ಬಾಣಂತಿ ಸೀತಮ್ಮ ಸಹೋದರ ಸಂಗಪ್ಪ ತಿಳಿಸಿದ್ದಾರೆ. 
 

click me!